ನವದೆಹಲಿ: ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಹುಂಡೈ ಮುಂದಿನ ತಿಂಗಳು ತನ್ನ ಬಹು ನಿರೀಕ್ಷಿತ ಎಸ್.ಯು.ವಿ. ಕ್ರೇಟಾ ಕಾರಿನ ಹೊಸ ಮಾದರಿಯನ್ನು ದೇಶೀ ಮಾರುಕಟ್ಟೆಗೆ ಬಿಡುಗಡೆಮಾಡುತ್ತಿದೆ. ಹೊಸ ತಲೆಮಾರಿನ ಕ್ರೇಟಾ ಮಾದರಿಯನ್ನು ಇತ್ತೀಚೆಗೆ ನಡೆದ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಕ್ರೇಟಾ ಕಾರಿನ ಇಂಟೀರಿಯರ್ ಕುರಿತಾಗಿ ಯಾವುದೇ ಮಾಹಿತಿಯನ್ನು ಕಂಪೆನಿ ಹೊರಗೆಡಹಿರಲಿಲ್ಲ.
ಇದೀಗ ಹುಂಡೈ ತನ್ನ ಹೊಸ ಮಾದರಿ ಕ್ರೇಟಾದಲ್ಲಿರುವ ವಿಶೇಷತೆಗಳನ್ನು ಗ್ರಾಹಕರಿಗೆ ಬಹಿರಂಗಪಡಿಸಿದೆ. ಈ ಸ್ಕೆಚ್ ನಲ್ಲಿರುವಂತೆ ಆಕರ್ಷಕ ಒಳ ವಿನ್ಯಾಸ ಗ್ರಾಹಕರ ಮನಸೆಳೆಯುವಂತಿದೆ.
ಮಟ್ಟಸವಾದ ತಳಭಾಗ, ಬಹುವಿಧ ಕಾರ್ಯ ಶೈಲಿಯನ್ನು ಹೊಂದಿರುವ ಸ್ಟಿಯರಿಂಗ್ ವ್ಹೀಲ್, ಆಯತಾಕಾರ ವಿನ್ಯಾಸದಲ್ಲಿ ರೂಪಿಸಲಾಗಿರುವ ಡ್ಯಾಶ್ ಬೋರ್ಡ್ ಗೆ ಹೊಂದಿಕೊಂಡಂತೇ ವಿನ್ಯಾಸಗೊಳಿಸಲಾಗಿರುವ ಇನ್ಫೋಟೈನ್ಮೆಂಟ್ ವ್ಯವಸ್ಥೆ ಚಾಲಕ ಸ್ನೇಹಿಯಾಗಿದೆ.
ಎ.ಸಿ.ವ್ಯವಸ್ಥೆಯ ಹೆಚ್.ವಿ.ಎ.ಸಿ. ಪರಿಕರವನ್ನು ಇನ್ಫೋಟೈನ್ಮೆಂಟ್ ವ್ಯವಸ್ಥೆಯ ಮೆಲ್ಭಾಗದಲ್ಲಿ ಜೋಡಿಸಲಾಗಿದೆ ಮತ್ತು ಸ್ವಯಂಚಾಲಿತ ವಾತಾವರಣ ನಿಯಂತ್ರಣ ಬಟನ್ ಗಳನ್ನು ಸ್ಕ್ರೀನ್ ಕೆಳಗಡೆ ಇರಿಸಲಾಗಿದೆ. ಒಟ್ಟಿನಲ್ಲಿ ಹೊಸ ಮಾದರಿಯ ಕ್ರೇಟಾದ ಡ್ಯಾಶ್ ಬೋರ್ಡನ್ನು ನೀಟ್ ಆಗಿ ರೂಪಿಸಲಾಗಿದೆ.
ಇನ್ನು ಗೇರ್ ಲಿವರ್ ಅನ್ನು ಲೆದರ್ ಆವೃತವಾಗಿರುವಂತೆ ರೂಪಿಸಿರುವುದು ಕ್ರೇಟಾದ ಇನ್ನೊಂದು ವಿಶೇಷ. ಪನೋರಮಾ ನೋಟವನ್ನು ಕೊಡುವ ಕಾರಿನ ಮೇಲ್ಛಾವಣಿ ಈ ಕಾರಿನ ವಿನ್ಯಾಸಕ್ಕೆ ಇನ್ನಷ್ಟು ಮೆರುಗನ್ನು ನೀಡಿದೆ.