ಹುಣಸೂರು: ತಾಲೂಕಿನ ಅರಸು ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗಳೂರು ಮಾಳದ ಡೋಂಗ್ರಿ ಗೆರೇಸಿಯಾ ಅಲೆಮಾರಿ ಸಮುದಾಯದ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ನಿಂಗರಾಜಮಲ್ಲಾಡಿ ನೇತ್ರತ್ವದ ದಸಂಸವು ನಿವಾಸಿಗಳೊಂದಿಗೆ ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಜಮಾವಣೆಗೊಂಡ ಡೋಂಗ್ರಿಗೆರೇಸಿಯಾ ಅಲೆಮಾರಿಗಳು ಮತ್ತು ದಸಂಸ ಕಾರ್ಯಕರ್ತರು ಮನೆ ಮಂಜೂರು ಮಾಡಿ, ಬದುಕಲು ಅವಕಾಶ ನೀಡಿ ಎಂದು ಘೋಷಣೆ ಕೂಗಿದರು.
ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ನಿಂಗರಾಜಮಲ್ಲಾಡಿ ಮಾತನಾಡಿ, ಮಂಗಳೂರು ಮಾಳದ ೮೪ ಡೋಂಗ್ರಿಗೆರಾಸಿಯಾ ಕುಟುಂಬಗಳು ವಾಸಿಸಲು ಯೋಗ್ಯ ಮನೆಗಳಿಲ್ಲ. ಮಂಗಳೂರು ಮಾಳ ಗ್ರಾಮವು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ಆಡಳಿತಾವಧಿಯಲ್ಲಿ ಸ್ಥಾಪನೆಯಾಗಿದ್ದು, ನೂರಾರು ಪರಿಶಿಷ್ಟ ಪಂಗಡದ ಅಲೆಮಾರಿ ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಹಾಲಿ ಇರುವ ಮನೆಗಳು ಶಿಥಿಲಾವಸ್ಥೆಯಲ್ಲಿವೆ. ಮನೆ ಬೀಳುವುದೋ ಎಂಬ ಭಯದೊಂದಿಗೆ ವಾಸ ಮಾಡುತ್ತಿದ್ದಾರೆ. ಇನ್ನು ಕೆಲವು ಕುಟುಂಬಗಳಿಗೆ ನಿವೇಶನಗಳಿದ್ದು, ಮನೆಗಳೇ ಇರುವುದಿಲ್ಲ. ಹುಟ್ಟು ಸಾವುಗಳಿಗೆ ದಾಖಲೆಗಳೇ ಇಲ್ಲದೇ ವಾಸಿಸಲು ನೆಲೆಗಳೇ ಇಲ್ಲದೇ ಅಲೆಮಾರಿ ಕುಟುಂಬಗಳಿಗೆ ಮನೆಗಳನ್ನು ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ :ಪರೀಕ್ಷೆ ರದ್ದುಗೊಳಿಸುವಂತೆ ಒತ್ತಾಯಿಸಿ ರೇಷ್ಮೆಕೃಷಿ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಮನವಿ ಸ್ವೀಕರಿಸಿ ಮಾತನಾಡಿದ ತಾ.ಪಂ.ಇಓ ಗಿರೀಶ್, ರಾಜೀವ್‌ಗಾಂಧಿ ವಸತಿಯೋಜನೆಯಡಿ ಪರಿಶಿಷ್ಟ ಪಂಗಡದ ಗಿರಿಜನರಿಗೆ ವಸತಿ ಸೌಲಭ್ಯ ಕಲ್ಪಿಸಲು ಅವಕಾಶವಿರುವುದಿಲ್ಲ. ಯೋಜನೆಯಡಿ ಈ ಸಮುದಾಯವನ್ನು ಒಳಗೊಳ್ಳುವಂತೆ ಮಾಡುವ ಕುರಿತು ಈಗಾಗಲೇ ಶಾಸಕರಾದ ಎಚ್.ಪಿ.ಮಂಜುನಾಥ್ ಹಾಗೂ ಎಚ್.ವಿಶ್ವನಾಥ್ ಗಮನಕ್ಕೆ ತರಲಾಗಿದೆ ಎಂದರು.
ಪರಿಶಿಷ್ಟ ಪಂಗಡಗಳ ಸಹಾಯಕ ನಿರ್ದೇಶಕ ಬಸವರಾಜು, ಆದಿಜಾಂಭವ ಮುಖಂಡ ಡಿ.ಕುಮಾರ್, ಮುಖಂಡರಾದ ದೇವೇಂದ್ರ, ಬಲ್ಲೇನಹಳ್ಳಿ ಕೆಂಪರಾಜು, ಶೇಖರ್, ಮಂಗಳೂರುಮಾಳದ ಶ್ರೀದೇವಿ, ಲಕ್ಷ್ಮಿ, ಶಾಂತಾಬಾಯಿ, ನಾಗರಾಜು, ರಾಧಾಬಾಯಿ, ಸಾವಿತ್ರಮ್ಮ, ಶಿವಾಜಿ, ಮಹದೇವ, ರಾಣಾಬಾಯಿ, ಕಮಲಾಬಾಯಿ, ಸುಶೀಲಾಬಾಯಿ, ಪಾರ್ವತಮ್ಮ ಸೇರಿದಂತೆ ಅನೇಕರಿದ್ದರು.