Advertisement

ಹುಣಸೂರು ತಹಸೀಲ್ದಾರ್ ಹುದ್ದೆಗೆ ಜಂಗೀ ಕುಸ್ತಿ

11:41 AM Sep 20, 2021 | Team Udayavani |

ಹುಣಸೂರು : ಹುಣಸೂರು ತಹಸೀಲ್ದಾರ್ ಮೋಹನ್‌ಕುಮಾರ್‌ರವರು ಗ್ರೇಡ್-1 ಹುದ್ದೆಯ ತಹಸೀಲ್ದಾರ್ ಹುದ್ದೆಗೆ ಅರ್ಹರಲ್ಲವೆಂದು ತೀರ್ಪು ನೀಡಿರುವ ಕೆಎಟಿ, ಐದು ದಿನಗಳೊಳಗೆ ಉಪವಿಭಾಗಾಧಿಕಾರಿಗೆ ಅಧಿಕಾರ ಹಸ್ತಾಂತರಿಸಬೇಕೆಂದು ಆದೇಶಿಸಿದೆ.

Advertisement

ಸರಕಾರ 2021 ಜುಲೈ 23ರಂದು ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆ ನಾಡ ಕಚೇರಿಯಲ್ಲಿ ಉಪತಹಸೀಲ್ದಾರ್ ಆಗಿದ್ದ ಮೋಹನ್‌ಕುಮಾರ್‌ರಿಗೆ ನಿಯಮ 32ರಡಿ ತಹಶೀಲ್ದಾರ್ ಗ್ರೇಡ್-2ಗೆ ಬಡ್ತಿ ನೀಡಿದ್ದರೂ, ಹುಣಸೂರಿನ ಗ್ರೇಡ್-1 ತಹಶೀಲ್ದಾರ್ ಹುದ್ದೆಗೆ ನಿಯುಕ್ತಿಗೊಳಿಸಿ ಆದೇಶಿಸಿತ್ತು. ಇಲ್ಲಿದ್ದ ಐ.ಇ.ಬಸವರಾಜುರನ್ನು ಸರಕಾರ ಸ್ಥಳ ನಿಯೋಜಿಸದೆ ವರ್ಗಾವಣೆ ಮಾಡಿತ್ತು.
ಈ ಆದೇಶದ ವಿರುದ್ದ ತಹಸೀಲ್ದಾರ್ ಆಗಿದ್ದ ಐ.ಇ.ಬಸವರಾಜರವರು ಕೆಎಟಿ ಮೊರೆ ಹೋಗಿದ್ದರು. ಒಂದೂವರೆ ತಿಂಗಳು ವಿಚಾರಣೆ ನಡೆದು ಸೆ.16ರಂದು ಆದೇಶ ಹೊರಬಿದ್ದಿದ್ದು, ಗ್ರೇಡ್-1 ತಹಸೀಲ್ದಾರ್ ಹುದ್ದೆಗೆ ಮೋಹನ್‌ಕುಮಾರ್ ಅರ್ಹರಲ್ಲ, ಅವರ ಉಪ ವಿಭಾಗಾಧಿಕಾರಿಯವರಿಗೆ ಮುಂದಿನ ಐದು ದಿನದೊಳಗೆ ಅಧಿಕಾರ ಹಸ್ತಾಂತರಿಸಿ, ಕಂದಾಯ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶಿಸಿದೆ. ವಿಚಾರಣೆಯ ನಡುವೆಯೇ ಸರಕಾರ ಬಸವರಾಜರನ್ನು ಮೈಸೂರು ಮಹಾನಗರ ಪಾಲಿಕೆಯಲ್ಲಿಲ್ಲದ ತಹಸೀಲ್ದಾರ್ ಹುದ್ದೆಗೆ ವರ್ಗಾವಣೆಗೊಳಿಸಿತ್ತು.

ತಹಸೀಲ್ದಾರ್ ಆಗಿದ್ದ ಐ.ಇ.ಬಸವರಾಜರವರು ಗ್ರೇಡ್-1 ಹುದ್ದೆಯಿಂದ ಈಗಾಗಲೇ ಬಿಡುಗಡೆ ಹೊಂದಿರುವುದರಿಂದ ಹಾಗೂ ತಾಲೂಕಿನಲ್ಲಿ ಎರಡೂವರೆ ವರ್ಷ ಆಡಳಿತ ನಡೆಸಿರುವ ಹಿನ್ನೆಲೆಯಲ್ಲಿ ಹಾಗೂ ಗ್ರೇಡ್-1 ಹುದ್ದೆಯಲ್ಲದ ನಗರಪಾಲಿಕೆ ಹುದ್ದೆಯ ವರ್ಗಾವಣೆ ರದ್ದುಗೊಳಿಸಿ, 30 ದಿನದೊಳಗೆ ಗ್ರೇಡ್-1ರ ಹುದ್ದೆಗೆ ನಿಯುಕ್ತಿಗೊಳಿಸುವಂತೆ ಕೆಎಟಿ ಆದೇಶಿಸಿದೆ. ಇದೀಗ ಹುಣಸೂರು ತಹಸೀಲ್ದಾರ್ ಹುದ್ದೆ ಖಾಲಿ ಇದ್ದು, ಹುದ್ದೆ ಗಿಟ್ಟಿಸಲು ಹತ್ತಕ್ಕೂ ಹೆಚ್ಚು ಗ್ರೇಡ್-1 ತಹಸೀಲ್ದಾರ್‌ಗಳು ಲಾಭಿ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.

ಇದನ್ನೂ ಓದಿ :ದ್ವಿತೀಯ ಪಿಯು ಫಲಿತಾಂಶ: ಇಲಾಖೆ ಫಲಿತಾಂಶ ತಿರಸ್ಕರಿಸಿದ 36 ವಿದ್ಯಾರ್ಥಿಗಳು ಅನುತ್ತೀರ್ಣ!

ಶಹಬಾಷ್ ಎಂದಿದ್ದವರೇ ಕೈಚೆಲ್ಲಿದರು:
ತಾಲೂಕಿನಲ್ಲಿ ಎರಡೂವರೆ ವರ್ಷ ಆಡಳಿತ ನಡೆಸಿದ ತಹಸೀಲ್ದಾರ್ ಬಸವರಾಜರು ತಮ್ಮ ಆಡಳಿತ ವೈಖರಿಯಿಂದ ಅದರಲ್ಲೂ ಪ್ರವಾಹ, ಕೊರೊನಾ ಸಂದರ್ಭದಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಲ್ಲದೆ ದಾನಿಗಳ ನೆರವಿನಿಂದ ಪ್ರವಾಹ ಸಂತ್ರಸ್ತರಿಗೆ ಹಾಗೂ ಕೊರೊನಾ ಸಂಕಷ್ಟದಲ್ಲಿರುವವರಿಗೆ ಔಷಧ ಬ್ಯಾಂಕ್ ಸ್ಥಾಪಿಸಿ ನೆರವಾಗಿದ್ದಲ್ಲದೆ ಲಕ್ಷ್ಮಣತೀರ್ಥ ನದಿಯಲ್ಲಿ ಬಂದ ಪ್ರವಾಹದ ವೇಳೆ ಇಡೀ ಗ್ರಾಮವನ್ನು ರಾತ್ರೋರಾತ್ರಿ ಸ್ಥಳಾಂತರಿಸಿ ಪ್ರಾಣ ಹಾನಿ ತಪ್ಪಿಸಿದಲ್ಲದೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಜನಮನ್ನಣೆಗಳಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಹಾಗೂ ಎಸ್.ಟಿ.ಸೋಮಶೇಖರ್ ಸಹ ತಹಸೀಲ್ದಾರರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದರು.

Advertisement

ಇಂತ ಒಳ್ಳೆ ಆಡಳಿತ ನೀಡುತ್ತಿದ್ದ ಸಮಯದಲ್ಲೇ ರಾಜಕೀಯಸ್ಥರ ಹಾಗೂ ಕೆಲ ಸಂಘಟನೆಗಳ ಪಿತೂರಿಗೆ ಸಿಲುಕಿ ವರ್ಗಾವಣೆಗೊಂಡಿದ್ದು ಮಾತ್ರ ವಿಪರ್ಯಾಸ.

ಇದೀಗ ಮತ್ತೆ ಮೋಹನ್‌ಕುಮಾರ್ ರವರು ಕೆಎಟಿ ಆದೇಶದ ವಿರುದ್ದ ನ್ಯಾಯಾಲಯದ ಮೆಟ್ಟಿಲೇರಲಿದ್ದಾರೆಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next