ಹುಣಸೂರು: ಅಂಬೇಡ್ಕರ್ ಭಾವಚಿತ್ರದ ಮೇಲೆ ಹನುಮಜಯಂತಿ ಪೋಸ್ಟರ್ ಅಂಟಿಸಿ ಅವಮಾನ ಮಾಡಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ತಾಲೂಕು ದಲಿತ ಸಂಘ ಸೇರಿದಂತೆ ವಿವಿಧ ಸಂಘಟನೆಯವರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಹಾಗೂ ಪೊಲೀಸರಲ್ಲಿ ಮನವಿ ಸಲ್ಲಿಸಿದರು.
ಸಂವಿಧಾನ ಸರ್ಕಲ್‌ನಲ್ಲಿ ದಲಿತ ಮುಖಂಡ ರಾಜಪ್ಪ, ವಕೀಲ ಪುಟ್ಟರಾಜು ನೇತೃತ್ವದಲ್ಲಿ ಜಮಾವಣೆಗೊಂಡ ಹಲವಾರು ಮುಖಂಡರು ಹನುಮಂತೋತ್ಸವ ಸಮಿತಿ ವಿರುದ್ದ ಧಿಕ್ಕಾರ ಮೊಳಗಿಸಿದರು.
ಈ ವೇಳೆ ಮಾತನಾಡಿದ ವಕೀಲ ಪುಟ್ಟರಾಜು ನಗರದ ಹಲವೆಡೆ ದೇಶಕ್ಕೆ ಸಂವಿಧಾನ ನೀಡಿದ ಮಹಾನ್ ನಾಯಕ ಅಂಬೇಡ್ಕರ್ ಭಾವಚಿತ್ರದ ಮೇಲೆ ಉದ್ದೇಶಪೂರಕವಾಗಿ ರಾತ್ರೋರಾತ್ರಿ ಹನುಮಜಯಂತಿ ಪೋಸ್ಟರ್ ಅಂಟಿಸಿ ಅವಮಾನ ಮಾಡಿದ್ದಾರೆ. ಇಂತಹ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರಲ್ಲದೆ, ಸ್ವಾಭಿಮಾನಿ ದಲಿತರು ಜಯಂತಿಯಲ್ಲಿ ಭಾಗವಹಿಸದಂತೆ ಮನವಿ ಮಾಡಿದರು.
ನಂತರ ಡಿವೈಎಸ್‌ಪಿ ರವಿಪ್ರಸಾದ್, ತಹಸೀಲ್ದಾರ್ ಡಾ.ಅಶೋಕ್ ರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪುಟ್ಟಮಾದಯ್ಯ, ನಾಗೇಶ್, ಶಿವಣ್ಣ, ತಟ್ಟೆಕೆರೆ ನಾಗರಾಜು, ಚಿತ್ತರಂಜನ್, ಬಿಎಸ್‌ಪಿ ಅಧ್ಯಕ್ಷ ಪ್ರಸನ್ನಸೋಮನಹಳ್ಳಿ, ರಾಜಪ್ಪ, ಮುಜಾಹಿದ್ ಪಾಷಾ, ಕಾಂತರಾಜು, ಸಿಪಿಎಂ.ನ ಬಸವರಾಜು, ವೆಂಕಟೇಶ್ ಮತ್ತಿತರರಿದ್ದರು.
ಇದನ್ನೂ ಓದಿ: ರಾವಲ್ಪಿಂಡಿ ಟೆಸ್ಟ್ : ಪಾಕ್ ವಿರುದ್ಧ ಇಂಗ್ಲೆಂಡ್‌ಗೆ 74 ರನ್ ಗೆಲುವು