ಹುಣಸೂರು: ತಾಲೂಕಿನ ಉಮ್ಮತ್ತೂರಿನಲ್ಲಿ ಸರಕಾರಿ ಬೀಳು ಭೂಮಿ ಒತ್ತುವರಿ ತೆರವುಗೊಳಿಸುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ ಹಾಗೂ ವಿವಿಧ ಭೇಡಿಕೆ ಈಡೇರಿಕೆಗಾಗಿ ಆ.21ರ ಗಜಪಯಣದಂದು ನಾಗರಹೊಳೆ ರಸ್ತೆಯ ಉಮ್ಮತ್ತೂರಿನಲ್ಲಿ ಹಮ್ಮಿಕೊಂಡಿದ್ದ ರಸ್ತೆ ತಡೆಯನ್ನು ಅಧಿಕಾರಿಗಳ ಮನವೊಲಿಕೆಯಿಂದ ಹಿಂಪಡೆಯಲಾಗಿದೆ ಎಂದು ಗ್ರಾಮದ ಯಜಮಾನ ಭಾಸ್ಕರ್ ತಿಳಿಸಿದ್ದಾರೆ.
ಶನಿವಾರದಂದು ರಸ್ತೆ ತಡೆ ವರದಿ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಮಂಜುನಾಥ್, ತಾ.ಪಂ.ಇಓ ಹೊಂಬಯ್ಯ ಮತ್ತಿತರ ಅಧಿಕಾರಿಗಳ ತಂಡ ಗ್ರಾಮಕ್ಕೆ ದೌಡಾಯಿಸಿ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಈ ವೇಳೆ ಗ್ರಾಮಸ್ಥರು ಭೂಮಿ ಒತ್ತುವರಿ, ಸ್ಮಶಾನ ಸಮತಟ್ಟು ಮಾಡಲು ಕೆರೆ ಮಣ್ಣು ತೆಗೆಯಲು ಭಾವಿಗಳ ಅಡ್ಡಿ, ಅಂಗನವಾಡಿ ನಿವೇಶನ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟರು. ಈ ವೇಳೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವ ಭರವಸೆ ಇತ್ತರು.
ಅಲ್ಲದೆ ಗ್ರಾಮದ ಸ್ಮಶಾನ ಭೂಮಿ ಸಮತಟ್ಟು ಮಾಡಲು ಕೆರೆಯಿಂದ ಮಣ್ಣು ಸಾಗಣೆಗೆ ತಡೆಯೊಡಿದ್ದನ್ನು ಪರಿಶೀಲಿಸಿ ಕೆರೆಯಿಂದ ಮಣ್ಣು ಸಾಗಿಸಿ ಸಮತಟ್ಟು ಮಾಡಿಕೊಳ್ಳಿ, ತಡೆಯೊಡ್ಡಿದರೆ ದೂರು ನೀಡುವಂತೆ ಗ್ರಾಮಸ್ಥರಿಗೆ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಮುನಿಯಪ್ಪ ಸೂಚಿಸಿದರು.
ಈ ವೇಳೆ ಪಿಡಿಓ ಮಹದೇವ್, ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಗ್ರಾಮದ ಮುಖಂಡರಾದ ರವಿಕುಮಾರ್, ಸುರೇಶ್, ಲೋಕೇಶ್,ವಾಸು ಸೇರಿದಂತೆ ಅನೇಕ ಮುಖಂಡರಿದ್ದರು.
ಇದನ್ನೂ ಓದಿ: Jharkhand ಮಾಜಿ ಸಿಎಂ ಚಂಪೈ ಸೊರೇನ್ ಬಿಜೆಪಿ ಸೇರುವ ಸಾಧ್ಯತೆ?