ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿಯ ಮಹಿಳಾ ಗ್ರಾಮಲೆಕ್ಕಿಗರಾಗಿದ್ದ ಕೃಷ್ಣಬಾಯಿ ತುಕಾರಾಂ ಪಡ್ಕೆ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಪುತ್ರಿ ವರದಕ್ಷಿಣೆ ದಾಹಕ್ಕೆ ಬಲಿಯಾಗಿದ್ದಾಳೆಂದು ತಂದೆ ಏಳು ಮಂದಿಯ ವಿರುದ್ದ ದೂರು ದಾಖಲಿಸಿದ್ದು, ಇಬ್ಬರ ಬಂಧಸಿದ್ದರೆ, ಪತಿ ಸೇರಿದಂತೆ ಐದು ಮಂದಿ ನಾಪತ್ತೆಯಾಗಿದ್ದಾರೆ.
ಮೃತ ಕೃಷ್ಣಬಾಯಿ ತುಕಾರಾಂ ಪಡ್ಕೆಯ ಮಾವ ಬಾಳಪ್ಪ ಅಣ್ಣಪ್ಪ, ಮತ್ತು ಕೃಷ್ಣಾಬಾಯಿ ಬಾವ ಅಮರನಾಥ ಪಾಟೀಲ್ ಬಂದಿತರು. ಪತಿ ಹನೂರಿನ ಫಾರೆಸ್ಟ್ ಗಾರ್ಡ್ ಸುಭಾಷ್ ಬೋಸ್ಲೆ ಸೇರಿದಂತೆ ಅವರ ಕುಟುಂಬದ ಏಳು ಮಂದಿಯ ವಿರುದ್ದ ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿ ಪತಿ ಸೇರಿದಂತೆ ಉಳಿದ ಐದು ಮಂದಿ ನಾಪತ್ತೆಯಾಗಿದ್ದಾರೆಂದು ಡಿವೈಎಸ್ಪಿ ಮಹೇಶ್ ತಿಳಿಸಿದ್ದಾರೆ.
ಮೂಲತಃ ಬೆಳಗಾಂ ಜಿಲ್ಲೆಯ ಅಥಣಿ ತಾಲೂಕಿನ ಎಸ್‌ಗಳ್ಳಿ ಗ್ರಾಮದ ಮೃತ ಕೃಷ್ಣಬಾಯಿ ತುಕಾರಾಂ ಪಡ್ಕೆಯವರು ಶ್ಯಾನುಬೋಗನಹಳ್ಳಿ ವಲಯದ ಗ್ರಾಮಲೆಕ್ಕಾಧಿಕಾರಿಯಾಗಿದ್ದು, ಕಳೆದ 40 ದಿನಗಳ ಹಿಂದಷ್ಟೆ ಬಿಜಾಪುರ ಮೂಲದ ಫಾರೆಸ್ಟ್ಗಾರ್ಡ್ ಸುಭಾಷ್ ಬೋಸ್ಲೆಯವರನ್ನು ಮದುವೆಯಾಗಿದ್ದರು. ವಾರದ ಹಿಂದಷ್ಟೆ ಮದುವೆ ಸಂಭ್ರಮ ಮುಗಿಸಿಕೊಂಡು ಕರ್ತವ್ಯಕ್ಕೆ ಹಾಜರಾಗಿದ್ದರು. ಕಳೆದ ಶನಿವಾರ ಬಿಳಿಕೆರೆಯ ಬಾಡಿಗೆ ಮನೆಯಲ್ಲಿ ಅನುಮಾನಾಸ್ಪದವಾಗಿ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದನ್ನು ಸ್ಮರಿಸಬಹುದು.
ವಿಷಯ ತಿಳಿದು ಬೆಳಗಾಂನಿಂದ ಬಂದ ಮೃತ ಕೃಷ್ಣಾಬಾಯಿಯ ತಂದೆ ಅಳಿಯ ಸುಭಾಷ್ ಬೋಸ್ಲೆ ಪತ್ನಿಯ ಶವವನ್ನು ನೋಡಲು ಸಹ ಬಾರದಿರುವುದನ್ನು ಕಂಡು ಅನುಮಾನಗೊಂಡು ಮಗಳ ಸಾವಿಗೆ ಅಳಿಯನ ಮನೆಯವರೇ ಕಾರಣವೆಂದು ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಬೆಂಗಳೂರು- ಮೈಸೂರು KSRTC ಪ್ರಯಾಣಿಕರಿಗೆ ದರ ಏರಿಕೆ ಬಿಸಿ… ಇಲ್ಲಿದೆ ವಿವರ