ಹುಣಸೂರು : ಹಂದಿ ಸಾಕಣೆ ಕೇಂದ್ರದಲ್ಲಿ ಹಂದಿಗಳ ನಿಗೂಡ ಸಾವು, 10 ದಿನದ ಅಂತರದಲ್ಲಿ 250ಕ್ಕೂ ಹೆಚ್ಚು ಹಂದಿಗಳ ಸಾಮೂಹಿಕ ಸಾವು, ಸತ್ತ ಹಂದಿಗಳ ಕಳೆಬರಹ ನಾಪತ್ತೆ. ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್, ಪಶು ವೈದ್ಯರಿಗೆ ಸಿಕ್ಕ ಸತ್ತ ಹಂದಿಗಳ ಮರಣೋತ್ತರ ಪರೀಕ್ಷೆ. ಗ್ರಾಮಸ್ಥರ ಆತಂಕ.
ಹುಣಸೂರು ತಾಲೂಕಿನ ಕಸಬಾ ಹೋಬಳಿಯ ಉದ್ದೂರು ಗ್ರಾಮದ ಸುರೇಶ್‌ರಿಗೆ ಸೇರಿದ ಹಂದಿಗಳು ಇವಾಗಿದ್ದು, ಇವರು 250ಕ್ಕೂ ಹೆಚ್ಚು ಹಂದಿಗಳನ್ನು ಸಾಕಣೆ ಮಾಡುತ್ತಿದ್ದರು. ಕಳೆದ ಹತ್ತು ದಿನಗಳಿಂದ ಹಂದಿಗಳು ಸಾವನ್ನಪ್ಪಿವೆ.
ಚಿಕಿತ್ಸೆಗೂ ತಗ್ಗದ ಕಾಯಿಲೆ: ಮಾಲಿಕ ಸುರೇಶ್ ಬನ್ನಿಕುಪ್ಪೆ ಪಶುಆಸ್ಪತ್ರೆಯ ಪಶು ವೈದ್ಯ ಡಾ.ನಾಗಾರ್ಜುನ್‌ರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಭೇಟಿ ಇತ್ತು, ಜ್ವರ ವಿರುದ್ದ ಲಸಿಕೆ ನೀಡಿದ್ದರು. ಆದರೂ ಪ್ರಯೋಜನವಾಗದೆ ಹಂದಿಗಳು ನಿತ್ಯ ಸಾವನ್ನಪ್ಪುತ್ತಲೇ ಇವೆ.
ಮಾಲಿಕನ ನಡೆ ಅನುಮಾನಕ್ಕೆಡೆ: ಸಾವನ್ನಪ್ಪಿದ ಹಂದಿಗಳು ಮಾಲಿಕ ಸುರೇಶ್ ಏನು ಮಾಡಿದ್ದಾರೆಂಬುದು ತಿಳಿದು ಬಂದಿಲ್ಲ. ಎಲ್ಲವನ್ನೂ ಹೂತಿದ್ದೇನೆಂಬ ಮಾಹಿತಿ ನೀಡಿದ್ದು, ಇದು ಸಹ ಅನುಮಾನಕ್ಕೆಡೆ ಮಾಡಿದೆ.
ಈ ವಿಚಾರ ತಿಳಿದ ಶಾಸಕ ಎಚ್.ಪಿ.ಮಂಜುನಾಥರು ತಹಸೀಲ್ದಾರ್ ಡಾ.ಅಶೋಕ್ ಹಾಗೂ ಪಶುವೈದ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಮಂಗಳವಾರದಂದು ಗ್ರಾಮಕ್ಕೆ ತಹಸೀಲ್ದಾರ್ ಹಾಗೂ ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಚನ್ನಬಸಪ್ಪ, ಬನ್ನಿಕುಪ್ಪೆ ಪಶುವೈದ್ಯ ಡಾ.ನಾಗಾರ್ಜುನ್ ಭೇಟಿ ಇತ್ತು ಪರಿಶೀಲನೆ ನಡೆಸಿದರು. ಸಾವನ್ನಪ್ಪಿದ ಹಂದಿಗಳ ಮರಣೋತ್ತರ ಪರೀಕ್ಷೆ ನಂತರ ಜೆಸಿಬಿ ಮೂಲಕ ಆಳವಾದ ಗುಂಡಿ ತೆಗೆಸಿ ಸಾಮೂಹಿಕವಾಗಿ ಹೂಳಲಾಯಿತು.
ಹಂದಿಗಳ ಸಾಮೂಹಿಕ ಸಾವಿನಿಂದ ಜನರು ಆತಂಕಗೊಂಡಿದ್ದು, ನಿಖರ ಕಾರಣ ತಿಳಿದು ಅಗತ್ಯ ಕ್ರಮವಹಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪರೀಕ್ಷಾ ವರಧಿ ಬರಬೇಕಿದೆ:
ಸಾಮೂಹಿಕವಾಗಿ ಹಂದಿಗಳು ಸಾವನ್ನಪ್ಪಿರುವ ಕಾರಣ ತಿಳಿಯಲು ಹಿರಿಯ ಪಶು ವೈದ್ಯರ ಸಲಹೆಯಂತೆ ಮರಣೋತ್ತರ ಪರೀಕ್ಷೆ ನಡೆಸಿ, ಪ್ರಯೋಗಾಲಯಕ್ಕೆ ಅಂಗಾಂಗಗಳನ್ನು ಕಳುಹಿಸಿದ್ದು, ವರದಿ ಬಂದ ನಂತರವಷ್ಟೆ ನಿಖರ ಮಾಹಿತಿ ತಿಳಿಯಲಿದೆ ಎಂದು ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಚನ್ನಬಸಪ್ಪ ಉದಯವಾಣಿಗೆ ತಿಳಿಸಿದರು.
– ಸಂಪತ್ ಕುಮಾರ್ ಹುಣಸೂರು