Advertisement

ಬಾವಿಗೆ ಚಿರತೆ ಬಿದ್ದ ಶಂಕೆ! 100 ಅಡಿ ಆಳದ ಬಾವಿಗೆ ಇಳಿದು ಪರಿಶೀಲಿಸಿದ ಅರಣ್ಯಾಧಿಕಾರಿ

10:56 AM Jul 19, 2020 | sudhir |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನ ಕಾರಪುರ ಗ್ರಾಮದ ಪುರಾತನ ಬಾವಿಯೊಂದರಲ್ಲಿ ಚಿರತೆವೊಂದು ಬಿದ್ದಿದೆ ಎಂಬ ಗ್ರಾಮಸ್ಥರ ಮಾತಹಿತಿಯನ್ನು ಆಧರಿಸಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬಾವಿಯನ್ನು ಪರಿಶೀಲನೆ ನಡೆಸಿದ್ದಾರೆ ಬಾವಿಯಲ್ಲಿ ಚಿರತೆ ಕಾಣದ ಹಿನ್ನೆಲೆಯಲ್ಲಿ ಆರ್.ಎಫ್.ಓ ಸಿದ್ದರಾಜು ಅವರು 100 ಅಡಿ ಆಳದ ಬಾವಿಗೆ ಇಳಿದು ಚಿರತೆ ಇಲ್ಲವೆಂಬುದನ್ನು ಖಚಿತಪಡಿಸಿದ್ದಾರೆ.

Advertisement

ಚಿರತೆಯೊಂದು ಬಾವಿಗೆ ಬಿದ್ದಿದೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಅರಣ್ಯ ಇಲಾಖೆಯ ನಾಗರಹೊಳೆ ಉದ್ಯಾನವನದ ಅಂತರ ಸಂತೆ ವನ್ಯಜೀವಿ ವಲಯದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಚಿರತೆಗಾಗಿ ಹುಡುಕಾಟ ನಡೆಸಿದರು. ಆದರೆ ಅದೃಷ್ಟವಶಾತ್ ಬಾವಿಯಲ್ಲಿ ಯಾವುದೇ ಚಿರತೆಯಾಗಲಿ ಅಥವಾ ಅದರ ಕುರುಹುಗಳು ಕಂಡುಬಾರದಿದ್ದರಿಂದ ಚಿರತೆ ಬಾವಿಯಲ್ಲಿ ಇಲ್ಲ ಎಂಬುದನ್ನು ಅರಣ್ಯ ಇಲಾಖೆಯವರು ಖಚಿತ ಪಡಿಸಿದರು.

ಆದರೂ ಒಮ್ಮೆ ಬಾವಿಯ ಒಳಗೆ ಇಳಿದು ಪರಿಶೀಲಿಸುವ ಪ್ರಯತ್ನ ಮಾಡಿದ ಅಂತರಸಂತೆ ವಲಯ ಅರಣ್ಯಧಿಕಾರಿ ಎಸ್.ಎಸ್.ಸಿದ್ದರಾಜು ಸುಮಾರು 100 ಅಡಿ ಬಾವಿಯ ಒಳಗೆ ಬೋನಿನ ಸಹಾಯದಿಂದ ಇಳಿದು ಚಿರತೆಯ ಸುಳಿವಿನ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ಚಿರತೆ ಬಾವಿಯಲ್ಲಿ ಇಲ್ಲ ಎಂಬುದನ್ನು ಖಚಿತ ಪಡಿಸಿದರು.

ಈ ವೇಳೆ ನಾಗರಹೊಳೆ ಹುಲಿಯೋಜನೆ ನಿರ್ಧೇಶಕ ಮಹೇಶ್ ಕುಮಾರ್, ಎಸಿಎಫ್ ಪೌಲ್ ಆಟೋಂನಿ, ಪಶು ವೈದ್ಯ ಡಾ.ಮುಜೀಬ್ ರೆಹಮಾನ್, ಆರ್ ಎಫ್ಒ ಎಸ್.ಎಸ್.ಸಿದ್ದರಾಜು, ಸಿಬ್ಬಂದಿಗಳಾದ ಆಂತೊನಿ ಶ್ರೀಧರ್ ಸೇರಿದಂತೆ 50 ಕ್ಕೂ ಹೆಚ್ಚು ಗ್ರಾಮಸ್ಥರು. ಅರಣ್ಯ ಇಲಾಖೆ ಸಿಬ್ಬಂದಿಗಳು ಇದ್ದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next