Advertisement

ಹುಣಸೂರು : ಬಿರುಗಾಳಿಗೆ ಧರೆಗುರುಳಿದ ಮರಗಳು, ವಿದ್ಯುತ್ ಕಂಬ : ಲಕ್ಷಾಂತರ ರೂ. ನಷ್ಟ

09:29 PM May 01, 2022 | Team Udayavani |

ಹುಣಸೂರು : ಭಾನುವಾರ ಮಧ್ಯಾಹ್ನ ಸುರಿದ ಗುಡುಗು, ಸಿಡಿಲು ಸಹಿತ ಬಿರುಗಾಳಿ ಮಳೆಯ ಪರಿಣಾಮ ಹುಣಸೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಲಕ್ಷಾಂತರ ರೂ. ನಷ್ಟ ಉಂಟು ಮಾಡಿದೆ. ಸಿಡಿಲಿಗೆ 50 ಅಡಿಕೆ-ತೆಂಗಿನ ಮರ ಭಸ್ಮವಾಗಿದ್ದರೆ, ಬಿಳಿಕೆರೆಯಲ್ಲಿ ಸಿಡಿಲಿಗೆ ಎರಡು ಹಸು ಬಲಿಯಾಗಿದೆ.

Advertisement

ನಗರದ ವಿವಿಧ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದೆ. ಎರಡು ಹಸುಗಳು ಸಾವನ್ನಪ್ಪಿವೆ. ವಿದ್ಯುತ್ ಕಂಬ, ಟ್ರಾನ್ಸ್ ಫಾರ್ಮರ್ ಗಳು ಹಾಗೂ ಮರಗಳು ಧರೆಗುರುಳಿವೆ, ಅಡಿಕೆ ಮರಗಳಿಗೆ ಸಿಡಿಲು ಬಡಿದಿದೆ, ಮನೆಗಳಿಗೆ ಹಾನಿಯಾಗಿದೆ. ಇಟ್ಟಿಗೆ ಫ್ಯಾಕ್ಟರಿಯ ಮೇಲ್ಚಾವಣಿ ಹಾರಿ ಹೋಗಿದೆ. ಬಾಳೆ ಬೆಳೆ ನೆಲ ಕಚ್ಚಿದೆ.

ಮನೆಗಳಿಗೆ ನೀರು ; ನಗರದ ಮಂಜುನಾಥ, ನ್ಯೂ ಮಾರುತಿ ಹಾಗೂ ಸಾಕೇತ ಬಡಾವಣೆಯ ಕೆಲ ಮನೆಯೊಳಗೆ ಮಳೆ ನೀರಿನೊಂದಿಗೆ ಚರಂಡಿ ನೀರು ನುಗ್ಗಿ ದಿನಸಿ ಸಾಮಗ್ರಿಗಳು ನೀರಿನಲ್ಲಿ ತೊಯ್ದು ಹೋಗಿದೆ. ಬಡಾವಣೆಯ ಕೆಲವಡೆ ನೀರು ನಿಂತಿದೆ. ಮುಸ್ಲಿಂ ಬ್ಲಾಕ್‌ನಲ್ಲಿ ಕಾಮಗಾರಿಗೆ ಹಾಕಿದ್ದ ಸೆಂಟ್ರಿಂಗ್ ಸಾಮಗ್ರಿಗಳು ಮಳೆ ನೀರಿನೊಂದಿಗೆ ಕೊಚ್ಚಿಹೋಗಿವೆ. ಎಲ್ಲೆಡೆ ನಗರಸಭೆಯ ಪೌರಾಯುಕ್ತ ರವಿಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಗಳು ನೀರು ಹೊರ ಹೋಗುವಂತೆ ಮುಂಜಾನೆಯಿಂದಲೇ ಕ್ರಮವಹಿಸಿದ್ದಾರೆ.

ಅಡಿಕೆ ಮರಗಳಿಗೆ ಹಾನಿ; ಚಿಲ್ಕುಂದದಲ್ಲಿ ವೆಂಕಟರಾಮಯ್ಯ ಹಾಗೂ ರಘುನಾಥರಿಗೆ ಸೇರಿದ 50 ಕ್ಕೂ ಹೆಚ್ಚು ಅಡಿಕೆ, ತೆಂಗಿನ ಮರಗಳಿಗೆ ಸಿಡಿಲು ಬಡಿದು ಸುಟ್ಟು ಹೋಗಿವೆ.

ಧರೆಗುರುಳಿದ ಟ್ರಾನ್ಸ್ ಫಾರ್ಮರ್ – ಮರಗಳು; ಭಾನುವಾರದ ಮಧ್ಯಾಹ್ನ ಭಾರಿ ಬಿರುಗಾಳಿ ಮಳೆಗೆ ಬಿಳಿಕೆರೆ ಹೋಬಳಿಯಲ್ಲಿ ಹೆಚ್ಚು ಹಾನಿಯಾಗಿದೆ. ಬಿಳಿಕೆರೆ-ದಲ್ಲಾಳು ರಸ್ತೆ ಹಾಗೂ ಮೈದನಹಳ್ಳಿ-ವಡ್ಡರಹಳ್ಳಿ ರಸ್ತೆಗಳಲ್ಲಿ ವಿದ್ಯುತ್ ಕಂಬಗಳ ಸಮೇತ ಎರಡು ಟ್ರಾನ್ಸ್ ಫಾರ್ಮರ್ ಗಳು ಕಂಬಗಳ ಸಮೇತ ನೆಲಕ್ಕುರುಳಿವೆ. ಮೈದನಹಳ್ಳಿಯಲ್ಲಿ ಕುಮಾರ್‌ ಎಂಬವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದ್ದರೆ, ಇವರಿಗೆ ಸೇರಿದ ಇಟ್ಟಿಗೆ ಫ್ಯಾಕ್ಟರಿಯ ಶೀಟ್‌ಗಳನ್ನು ಗಾಳಿಗೆ ಹಾರಿಹೋಗಿವೆ, ಹುಣಸೂರು-ಮೈಸೂರು ಹೆದ್ದಾರಿಯ ಹತ್ತಾರು ಕಡೆ ಮರಗಳು ನೆಲಕ್ಕುರುಳಿದ್ದು, ಸಂಚಾರಕ್ಕೆ ಅಡಚಣೆಯಾಗಿತ್ತು. ಹನಗೋಡು ಹೋಬಳಿಯ ಹೊಸಪೆಂಜಳ್ಳಿ ಸುತ್ತ-ಮುತ್ತ ಶನಿವಾರ ರಾತ್ರಿ 13 ವಿದ್ಯುತ್ ಕಂಬಗಳು ಧರೆಗುರುಳಿವೆ. ಚೆಸ್ಕಾಂ ಸಿಬ್ಬಂದಿಗಳು ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ : ಐಪಿಎಲ್ : 99 ಕ್ಕೆ ಔಟಾಗಿ ಭಾರಿ ನಿರಾಸೆ ಅನುಭವಿಸಿದ ರುತುರಾಜ್ ಗಾಯಕ್ವಾಡ್

ಮನೆಗಳ ಗೋಡೆ ಕುಸಿತ; ನಾಗರಹೊಳೆ ರಸ್ತೆಯ ನಾಗಾಪುರ ಗಿರಿಜನ ಪುನರ್ವಸತಿಕೇಂದ್ರ. ಪಕ್ಷಿರಾಜಪುರ, ಉಮ್ಮತ್ತೂರು, ಚಿಕ್ಕಹೆಜ್ಜೂರು ಹಾಗೂ ವಿನೋಬಾ ಕಾಲೋನಿಯ ಮಹದೇವಪ್ಪ. ಉಮ್ಮತ್ತೂರು ಸೇರಿದಂತೆ ಹತ್ತಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ. ಗೋಡೆಕುಸಿದು ಬಿದ್ದಿದೆ. ಎರಡನೇ ಪಕ್ಷಿರಾಜಪುರದ ಸವಿತಾ ಮನೆ ಮೇಲೆ ತೆಂಗಿನಮರ ಉರುಳಿ ಬಿದ್ದಿದೆ. ಅಲ್ಲಲ್ಲಿ 10ಎಕರೆ ಬಾಳೆ ಬೆಳೆ ನಾಶವಾಗಿದೆ.

ಸಿಡಿಲಿಗೆ ಹಸುಗಳು ಬಲಿ: ಬಿಳಿಕೆರೆಯ ಅಣ್ಣೇಗೌಡರ ಪತ್ನಿ ಜಯಮ್ಮರಿಗೆ ಸೇರಿದ ಲಕ್ಷರೂ ಬೆಲೆ ಬಾಳುವ ಎರಡು ಇಲಾತಿ ಹಸುಗಳು ಕೊಟ್ಟಿಗೆಯಲ್ಲೇ ಸಿಡಿಲಿಗೆ ಬಲಿಯಾಗಿದೆ.

ಹಾನಿಗೊಳಗಾಗಿರುವ ಪ್ರದೇಶಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು, ಗ್ರಾಮಲೆಕ್ಕಿಗರು ಭೇಟಿ ಇತ್ತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ತಾವು ಸೋಮವಾರ ಹಾನಿ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ತಹಸೀಲ್ದಾರ್ ಡಾ.ಅಶೋಕ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next