ಹುಣಸೂರು: ಹುಣಸೂರಿನ ಬಹುಮುಖ ಸಂಸ್ಥೆಯು ಇ-ಚಾನಲ್, ಕಸಾಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಜಾನಪದ ಪರಿಷತ್ ಸಹಯೋಗದಲ್ಲಿ ನಗರದ ಟ್ಯಾಲೆಂಟ್ ವಿದ್ಯಾ ಸಂಸ್ಥೆಯ ಪ್ರತಿಭಾ ಬಯಲು ರಂಗಮಂದಿರದಲ್ಲಿ ರಾಜ್ಯದ ವಿವಿಧ ಪ್ರತಿಷ್ಠತ ರಂಗತಂಡ ಹಾಗೂ ನಿರ್ದೇಶಕರ 5 ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಬಹುಮುಖ ಸಂಸ್ಥೆ ಅಧ್ಯಕ್ಷ ಆನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಂಜುಳಸುಬ್ರಹ್ಮಣ್ಯರ ರಾಧಾ ಎಂಬ ಏಕವ್ಯಕ್ತಿನಾಟಕ, ಬಿಜಾಪುರದ ಸಿನ್ನಂಗ್ ಟ್ರೀ ತಂಡದ ಉಳಿದ ಸಾಕ್ಷಿಗಳು, ಚಾಮರಾಜನಗರದ ರಂಗವಾಹಿನಿ ತಂಡದ ಬೆಲ್ಲದದೋಣಿ, ಮೈಸೂರು ನೆಲಧ್ವನಿ ತಂಡದ ಒಡಲಾಳ ಹಾಗೂ ಮೈಸೂರು ರಂಗಾಯಣದ ಯುದ್ಧ ಬಂತು ಮನೆವರೆಗೆ ನಾಟಕ ಅಭಿನಯಿಸುವರೆಂದು ತಿಳಿಸಿದರು.
ಭಾನುವಾರ ಸಂಜೆ 6.30ಕ್ಕೆ ನಡೆಯುವ ಸಮಾರಂಭದಲ್ಲಿ ಮೈಸೂರು ರಂಗಾಯಣ ನಿರ್ದೇಶಕಿ ಭಾಗೀರತಿಬಾಯಿ ಕದಂ ನಾಟಕೋತ್ಸವಕ್ಕೆ ಚಾಲನೆ ನೀಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಎಚ್.ಚನ್ನಪ್ಪ, ರಂಗಕರ್ಮಿ ಜನಾರ್ದನ್(ಜನ್ನಿ), ಕಸಾಪ ಜಿಲ್ಲಾ ಕಾರ್ಯದರ್ಶಿ ನಾಗರಾಜ್ ಕೆ.ಎಸ್, ಉದ್ಯಮಿ ಎಚ್.ಪಿ.ಅಮರ್‌ನಾಥ್ ಅತಿಥಿಗಳಾಗಿದ್ದಾರೆ. ತಾಲೂಕು ಕಸಾಪ ಅಧ್ಯಕ್ಷ ನವೀನ್ ಅಧ್ಯಕ್ಷತೆ ವಹಿಸುವರು.
ಸಂಸ್ಥೆಯ 2ನೇ ವರ್ಷದ ನಾಟಕೋತ್ಸವದ ಎಲ್ಲಾ ನಾಟಕಗಳಿಗೆ ಕೇವಲ ನೂರು ರೂ ಪ್ರದರ್ಶನ ಶುಲ್ಕ ನಿಗದಿಪಡಿಸಿದ್ದು, ಪ್ರತಿದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ಇ-ಚಾನಲ್‌ನ ನಾಗರಾಜ್, ಕಸಾಪ ಅಧ್ಯಕ್ಷ ನವೀನ್ ಉಪಸ್ಥಿತರಿದ್ದರು.
ಯಾವ ದಿನ-ಯಾವ ನಾಟಕ ಪ್ರದರ್ಶನ ?: ನ.19.ಭಾನುವಾರ-ಶ್ರೀಪಾದಭಟ್ ನಿರ್ದೇಶನದ ಏಕ ವ್ಯಕ್ತಿನಾಟಕ ರಾಧಾ, ಸೋಮವಾರ ಶಖೀಲ್ ಅಹಮದ್ ನಿರ್ದೇಶನದ ಉಳಿದ ಸಾಕ್ಷಿಗಳು, ಮಂಗಳವಾರ ರೂಬಿನ್ ಸಂಜಯ್ ನಿರ್ದೇಶನದ ಬೆಲ್ಲದ ದೋಣಿ, ಬುಧವಾರ ಜನ್ನಿ ನಿರ್ದೇಶನದ ಒಡಲಾಳ, ಗುರುವಾರ ಶ್ರೀಪಾದಭಟ್ ನಿರ್ದೇಶನದ ಯುದ್ಧಬಂತು ಮನೆಯವರೆಗೆ ನಾಟಕೋತ್ಸವ ಪ್ರದರ್ಶನ ನಡೆಯಲಿದೆ.