Advertisement

Hunasuru: ಕೂಂಬಿಂಗ್ ವೇಳೆಯೇ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಎರಗಿದ ಹುಲಿ!

09:12 PM Sep 22, 2024 | Team Udayavani |

ಹುಣಸೂರು: ನಾಗರಹೊಳೆ ಉದ್ಯಾನವನದ ಅಂಚಿನಲ್ಲಿ ಹುಲಿ ಕೂಂಬಿಂಗ್ ನಡೆಸುತ್ತಿದ್ದ ವೇಳೆಯೇ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತಾಲೂಕಿನ ಕೋಣನಹೊಸಹಳ್ಳಿಯಲ್ಲಿ ಭಾನುವಾರ ನಡೆದಿದೆ.

Advertisement

ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವಲಯದ ಅರಣ್ಯ ಸಿಬ್ಬಂದಿ ದಿವಾಕರ ಗಾಯಗೊಂಡಿದ್ದು, ಹನಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರದಂದು ಉದ್ಯಾನದಂಚಿನ ಕೊಳವಿಗೆ ಬಳಿಯಲ್ಲಿ ಹುಲಿಯು ಹಸುಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದರಿಂದ ಹುಲಿ ಪತ್ತೆಗೆ ಡಿಆರ್‌ಎಫ್‌ಓಗಳಾದ ನವೀನ್, ನವೀನ್ ಗೌಡರ ನೇತೃತ್ವದ ತಂಡ ಭಾನುವಾರ ಹುಲಿ ಕಾಣಿಸಿಕೊಂಡಿದ್ದ ಸ್ಥಳದಲ್ಲಿ ಕೂಂಬಿಂಗ್ ನಡೆಸುತ್ತಿದ್ದ ವೇಳೆ ಸಿಬ್ಬಂದಿಗಳು ಸಿಡಿಸಿದ ಪಟಾಕಿ ಸದ್ದಿಗೆ ಜೋಳದ ಹೊಲದಲ್ಲಿದ್ದ ಹುಲಿಯು ಬೆದರಿ ಏಕಾಏಕಿ ದಿವಾಕರನ ಮೇಲೆ ದಾಳಿ ನಡೆಸುತ್ತಿದ್ದಂತೆ ಜೊತೆಗಿದ್ದವರು ಗಾಳಿಯಲ್ಲಿ ಗುಂಡು ಹಾರಿಸಿ, ಕೂಗಾಟ ನಡೆಸಿದ್ದರಿಂದ ಬೆದರಿದ ಹುಲಿಯು ದಿವಾಕರನನ್ನು ಬಿಟ್ಟು ಕಾಡಿನತ್ತ ಪರಾರಿಯಾಯಿತು.

ಗಾಯಾಳು ಆರೋಗ್ಯ ಸ್ಥಿರ:
ತಕ್ಷಣವೇ ಗಾಯಾಳು ದಿವಾಕರ್ ನನ್ನು ಹನಗೋಡು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಹುಲಿಯ ಬಾಯಿಂದ ಪಾರಾಗಿದ್ದರಿಂದ ಕುಟುಂಬ ನಿಟ್ಟುಸಿರು ಬಿಡುವಂತಾಗಿದೆ. ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಎಸಿಎಫ್ ಲಕ್ಷ್ಮೀಕಾಂತ್, ಆರ್.ಎಫ್.ಒ ಅಭಿಷೇಕ್  ಆಸ್ಪತ್ರೆಗೆ  ಭೇಟಿ ನೀಡಿ ಗಾಯಾಳು ದಿವಾಕರ್‌ ಆರೋಗ್ಯ ವಿಚಾರಿಸಿದರು. ವೈದ್ಯ ಡಾ.ಜೋಗೇಂದ್ರನಾಥ್ ಗಾಯಾಳುವಿಗೆ ಸೂಕ್ತ ಚಿಕಿತ್ಸೆ ನೀಡಿ, ಯಾವುದೇ ಆತಂಕವಿಲ್ಲ ಎಂದು ತಿಳಿಸಿದ್ದಾರೆ.

ಹುಲಿ ಕಾಡು ಸೇರಿದೆ ಎಂದ ಎಸಿಎಫ್:
ಹುಲಿಯ ಚಲನವನಗಳ ಬಗ್ಗೆ ಡ್ರೋಣ್ ಮೂಲಕ ಪರಿಶೀಲನೆ ನಡೆಸಿ ಹುಲಿಯು ಲಕ್ಷ್ಮಣ ತೀರ್ಥ ನದಿ ಕಡೆಯಿಂದ ಮತ್ತೆ ಕಾಡು ಸೇರಿರುವುದು  ಖಚಿತ ಪಡಿಸಿಕೊಳ್ಳಲಾಗಿದೆ ಎಂದು ಎಸಿಎಫ್ ಲಕ್ಷ್ಮೀಕಾಂತ್ ಉದಯವಾಣಿಗೆ ತಿಳಿಸಿದ್ದಾರೆ.

ಹುಲಿ ಸೆರೆಗೆ ಆಗ್ರಹ:
ಕೊಳವಿಗೆ, ಕೋಣನಹೊಸಹಳ್ಳಿ ಅಕ್ಕ ಪಕ್ಕ ಗ್ರಾಮದಲ್ಲಿ ಆಗಾಗ ವನ್ಯಜೀವಿಗಳು ಮತ್ತು ಮಾನವ ಸಂಘರ್ಷ ಹೆಚ್ಚುತ್ತಿದ್ದು, ಅರಣ್ಯ ಇಲಾಖೆ ಮಾರ್ಗೋಪಯ ಕಂಡು ಹಿಡಿಯಬೇಕೆಂದು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಕೊಳವಿಗೆ ದೇವರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next