ಹುಣಸೂರು: ಹುಣಸೂರಿನಲ್ಲಿ ಅಂಜನಾದ್ರಿ ಟ್ರಸ್ಟ್ ವತಿಯಿಂದ ಡಿ. 7 ರಂದು ನಡೆಯುವ ಹನುಮಜಯಂತಿ ಶೋಭಾಯಾತ್ರೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡುವುದನ್ನು ನಿಷೇಧಿಸಲಾಗಿದೆ. ಬೇಕಾಬಿಟ್ಟಿಯಾಗಿ ಫ್ಲೆಕ್ಸ್, ಬಾವುಟ, ಬಂಟಿಂಗ್ಸ್ ಕಟ್ಟದಂತೆ ಉಪ ವಿಭಾಗಾಧಿಕಾರಿ ರುಚಿ ಬಿಂದಾಲ್ ಸೂಚಿಸಿದರು.
ನಗರದ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಿಂದೂಪರ ಸಂಘಟನೆಗಳು ಮತ್ತು ಇತರೆ ಕೋಮಿನ ಮುಖಂಡರ ಸಭೆಯಲ್ಲಿ ಮಾಹಿತಿ ಸಂಗ್ರಹಿಸಿದ ನಂತರ ಮಾತನಾಡಿದ ಅವರು ಡಿ. 7ರ ಬುಧವಾರ ಬೆಳಗ್ಗೆ 11 ಕ್ಕೆ ಶೋಭಾಯಾತ್ರೆ ಮೆರವಣಿಗೆ ಆರಂಭಿಸಿ ಸಂಜೆ 5 ಕ್ಕೆ ಮುಕ್ತಾಯಗೊಳಿಸಬೇಕು. ಮೆರವಣಿಗೆ ಮುಕ್ತಾಯಗೊಂಡ ಬಳಿಕ ಸಂಘಟಕರು ಅಳವಡಿಸುವ ಫ್ಲೆಕ್ಸ್, ಬಾವುಟ, ಬಂಟಿಂಗ್ಸ್ ಗಳನ್ನು ತೆರವುಗೊಳಿಸಬೇಕು.
ಶೋಭಾಯಾತ್ರೆ ವೇಳೇ ಯಾವುದೇ ವ್ಯಕ್ತಿಗಳು ಪ್ರಚೋದನಾಕಾರಿ ಭಾಷಣ ಮಾಡುವಂತಿಲ್ಲ. ಮೆರವಣಿಗೆ ಸಾಗುವ ಹಾದಿಯಲ್ಲಿ ಮಸೀದಿ ಮತ್ತಿತರ ಧಾರ್ಮಿಕ ಸ್ಥಳಗಳಲ್ಲಿ ಸಂಘಟಕರು ಮುನ್ನೆಚ್ಚರಿಕೆ ವಹಿಸುವುದು ಅತ್ಯವಶ್ಯ, ಯಾತ್ರೆ ಸಂಘಟಕರು ತಾಲೂಕು ಆಡಳಿತ ಹಾಗೂ ಪೊಲೀಸರು ನೀಡುವ ಸೂಚನೆಗಳನ್ನು ಪಾಲಿಸುವ ಜೊತೆಗೆ ನಿರಂತರ ಸಂಪರ್ಕದಲ್ಲಿರಬೇಕೆಂದು ಮನವಿ ಮಾಡಿದರು.
ಖವೈಎಸ್‌ಪಿ ರವಿಪ್ರಸಾದ್ ಮಾತನಾಡಿ ಡಿ.6 ಬೆಳಗ್ಗೆಯಿಂದ ಫ್ಲೆಕ್ಸ್, ಬಂಟಿಂಗ್ಸ್, ಬಾವುಟ ಕಟ್ಟಲು ಅನುಮತಿ ನೀಡಲಾಗುವುದು, ಈ ವೇಳೆ ಸಮಿತಿಯವರು ಕನಿಷ್ಟ 100 ಮಂದಿ ಯುವರಕನ್ನೊಳಗೊಂಡ ಸ್ವಯಂಸೇವಕರ ತಂಡ ಸಿದ್ದಮಾಡಿಕೊಂಡು, ಅವರಿಗೆ ಗುರುತಿನ ಪತ್ರ ನೀಡಬೇಕು. ಫ್ಲೆಕ್ಸ್, ಬ್ಯಾನರ್,ಬಟಿಂಗ್ಸ್ ಅಳವಡಿಸುವ ವೇಳೆ ಸ್ವಯಂಸೇವಕರಿಂದಲೇ ಅಳವಡಿಸಿ, ಅಳವಡಿಸುವ ವೇಳೆ ಪೊಲೀಸ್ ರಕ್ಷಣೆ ಸಹ ನೀಡಲಾಗುವುದು. ಕಾರ್ಯಕ್ರಮ ಮುಕ್ತಾಯಗೊಂಡ ಸಮಜೆಯೇ ಎಲ್ಲಾ ಪ್ಲೇಕ್ಸ್ ತೆರವಿಗೆ ಕ್ರಮವಾಗಬೇಕೆಂದು ಸೂಚಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಡಾ.ಅಶೋಕ್, ತಾ.ಪಂ. ಇಓ ಮನು ಬಿ.ಕೆ, ಇನ್ಸ್ಪೆಕ್ಟರ್ ಶ್ರೀನಿವಾಸ್, ಹನುಮಂತೋತ್ಸವ ಸಮಿತಿ ಅಧ್ಯಕ್ಷ ವಿ.ಎನ್.ದಾಸ್, ಗೌರವಾಧ್ಯಕ್ಷ ಎಚ್.ವೈ.ಮಹದೇವ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಅನಿಲ್, ಗಿರೀಶ್, ನಗರಸಭೆ ಸದಸ್ಯ ಅರುಣ್ ಚೌವ್ಹಾಣ್, ಜಿ.ಪಂ.ಮಾಜಿ ಸದಸ್ಯ ಫಜಲುಲ್ಲಾ, ಮುಖಂಡರಾದ ಸರ್ದಾರ್ ಸೇರಿದಂತೆ ಅನೇಕರಿದ್ದರು.