Advertisement

ಹುಣಸೂರು : ಸಿ.ಎಂ.ಕಾರು ಹತ್ತಿದ ಕೈ ಶಾಸಕ, ತಬ್ಬಿಬ್ಬಾದ ಬಿಜೆಪಿ ಕಾರ್ಯಕರ್ತರು

08:48 PM Jul 12, 2022 | Team Udayavani |

ಹುಣಸೂರು : ಪ್ರಕೃತಿ ವಿಕೋಪ ಪರಿಹಾರದಡಿ ಕೊಡಗು, ದಕ್ಷಿಣಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹಾನಿಗೀಡಾದ ಮನೆಗಳಿಗೆ ನೀಡುತ್ತಿರುವಂತೆ  5 ಲಕ್ಷರೂ. ವರೆಗಿನ ಪರಿಹಾರದಂತೆಯೇ ಇಲ್ಲಿಯೂ ಅದೇ ಮಾದರಿ ಘೋಷಿಸುವಂತೆ ಹಾಗೂ ಮತ್ತಿತರ ಬೇಡಿಕೆಗೆ ಸ್ಪಂದಿಸುವಂತೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿಯವರಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಮನವಿ ಮಾಡಿದರು.

Advertisement

ಮಂಗಳವಾರ ಕೊಡಗು ಜಿಲ್ಲೆಗೆ ತೆರಳುವ ಮಾರ್ಗ ಮಧ್ಯೆ ಹುಣಸೂರು ನಗರದ ಡಿ.ದೇವರಾಜ ಅರಸು ಪ್ರತಿಮೆ ಬಳಿ ಶಾಸಕ ಎಚ್.ಪಿ.ಮಂಜುನಾಥ್ ಮುಖ್ಯಮಂತ್ರಿಗಳಿಗೆ ಹೂಗುಚ್ಚ ನೀಡಿ ಸ್ವಾಗತ ಕೋರಿದ ಶಾಸಕರು ನೀಡಿದ ಮನವಿಯಲ್ಲಿ ಹುಣಸೂರು ತಾಲೂಕಿನಲ್ಲಿ ಅತಿವೃಷ್ಟಿಯಿಂದ 600 ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಬಹುತೇಕ ರಸ್ತೆಗಳು ಗುಂಡಿ ಬಿದ್ದಿದೆ. 300 ಕ್ಕೂ ಹೆಚ್ಚು ಶಾಲಾ ಕಟ್ಟಡ ಹಾನಿ, ಸಾವಿರಾರು ಎಕರೆ ಪ್ರದೇಶದ ಬೆಳೆನಷ್ಟವಾಗಿ ಕೊಟ್ಯಾಂತರರೂ ಲುಕ್ಸಾನಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಮಳೆಹಾನಿಯಾಗಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದೇವು. ಅನುದಾನ ಬಿಡುಗಡೆಯಾಗಿಲ್ಲ. ಕೂಡಲೆ ಪ್ರಕೃತಿ ವಿಕೋಪದಡಿಯಲ್ಲಿ ಹುಣಸೂರು ತಾಲೂಕಿಗೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿ, ಸಿ.ಎಂ. ಜೊತೆಯಲ್ಲೇ ಕುಶಾಲನಗರದವರೆಗೆ ಕಾರಿನಲ್ಲಿಯೇ ಪಯಣಿಸಿ ತಾಲೂಕಿನ ಸಮಸ್ಯೆಗಳ ಮನವರಿಕೆ ಮಾಡಿಕೊಟ್ಟರು.

ಆಸ್ಪತ್ರೆಗೆ 9.5 ಕೋಟಿ ಅನುದಾನ ಕೋರಿಕೆ; ಸಿ.ಎಂ.ಜೊತೆ ಕಾರೇರಿದ ಶಾಸಕ ಮಂಜುನಾಥರು ಹೆದ್ದಾರಿ ಬದಿಯಲ್ಲಿ 25 ಕೋಟಿ ವೆಚ್ಚದಡಿ ನಿರ್ಮಿಸುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸಿ.ಎಂ.ಗೆ ತೋರಿಸಿ, ಪೂರ್ಣ ಕಾಮಗಾರಿಗೆ 9.5ಕೋಟಿ ಅನುದಾನ ಅವಶ್ಯವಿದ್ದು, ಬಿಡುಗಡೆ ಮಾಡುವಂತೆ ಕೋರಿಕೆಗೆ ಹಣ ಬಿಡುಗಡೆ ಮಾಡಲು ಕ್ರಮವಹಿಸುವುದಾಗಿ ಸಿ.ಎಂ.ವಾಗ್ದಾನ ಮಾಡಿದರೆಂದರು.

ಇದನ್ನೂ ಓದಿ : ಪಿರಿಯಾಪಟ್ಟಣ : ಬೆಳೆ ಹಾನಿ ಪ್ರದೇಶಕ್ಕೆ ಹೆಚ್ಚಿನ ನೆರವು ನೀಡಿ : ಮುಖ್ಯಮಂತ್ರಿಗಳಿಗೆ ಮನವಿ

ರಸ್ತೆ ದುರಸ್ತಿಗೆ 5 ಕೋಟಿ ಅನುದಾನಕ್ಕೆ ಬೇಡಿಕೆ; ತಾಲೂಕಿನಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಹಾಗೂ ಇತರೆ ರಸ್ತೆಗಳು ಗುಂಡಿ ಬಿದ್ದು ಬಹುತೇಕ ಹಾಳಾಗಿದ್ದು, ಕಳೆದ ಮರ‍್ನಾಲ್ಕು ವರ್ಷಗಳಿಂದ ಮಳೆ ಹಾನಿಯಿಂದ ಸಾಕಷ್ಟು ಕನಿಷ್ಠ ಐದು ಕೋಟಿರೂ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿಕೆಗೂ ಸಿ.ಎಂ.ಭರವಸೆ ನೀಡಿದ್ದಾರೆಂದು ತಿಳಿಸಿದರು. ಚಿಲ್ಕುಂದ ಏತನೀರಾವರಿ ಯೋಜನೆ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಬೇಕೆಂದು ಕೋರಿದ್ದೇನೆಂದರು.

Advertisement

ಅರಸರ ಪುತ್ಥಳಿಗೆ ಗೌರವವಿಲ್ಲ : ಸಿ.ಎಂ.ರವರು ದೇವರಾಜ ಅರಸು ಪುತ್ಥಳಿ ಬಳಿಯೇ ನಿಲುಗಡೆ ಮಾಡಿದ್ದರಾದರೂ, ಕನಿಷ್ಠ ಅರಸರಿಗೆ ಗೌರವ ಸಲ್ಲಿಸದಿರುವುದು ನೋವಿನ ಸಂಗತಿಯೆಂದು ಕಾಂಗ್ರೆಸ್ ನಗರಸಭಾ ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಬಾವುಟಕ್ಕೆ ಆಕ್ಷೇಪ, ಮಾತಿನ ಚಕಮಖಿ: ಬಿಜೆಪಿಯವರು ಪಕ್ಷದ ಬಾವುಟ ಹಿಡಿದು ಬಂದಿದ್ದನ್ನು ಶಾಸಕ ಮಂಜುನಾಥ್ ಹಾಗೂ ಕಾಂಗ್ರೆಸ್ ಮುಖಂಡರು ಆಕ್ಷೇಪಿಸಿದರು. ತಹಸೀಲ್ದಾರ್ ಡಾ.ಅಶೋಕ್ ಹಾಗೂ ಮುಖಂಡರು ಮನವರಿಕೆ ಮಾಡಿಕೊಟಿದ್ದರಿಂದ ಬಾವುಟ ಪ್ರದರ್ಶಿಸಲಿಲ್ಲವಾದರೂ, ಅಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಸಿ.ಎಂ. ಸಾಹೇಬ್ರ ಕಾರು ಆಗಮಿಸಿದ್ದರಿಂದ ಡಿವೈಎಸ್‌ಪಿ ರವಿಪ್ರಸಾದ್ ಶಾಸಕ ಮಂಜುನಾಥ್‌ರ ಕೈಹಿಡಿದು ಸಿ.ಎಂ.ಬಳಿ ಕರೆದೊಯ್ಯು ಮಾಲಾರ್ಪಣೆ ಮಾಡಲು ಅವಕಾಶ ಮಾಡಿಕೊಟ್ಟರು.

ಸಿ.ಎಂ.ಕಾರು ಹತ್ತಿದ ಕೈಶಾಸಕ, ತಬ್ಬಿಬ್ಬಾದ ಬಿಜೆಪಿ ಕಾರ್ಯಕರ್ತರು: ಜನ ಹೆಚ್ಚಿದ್ದರಿಂದ ಸಿ.ಎಂ ಸಾಹೇಬ್ರ ಬಳಿ ಮಾತಾಡಲು ಸಾಧ್ಯವಾಗದಿದ್ದಾಗ ಶಾಸಕ ಮಂಜುನಾಥ್‌ ಸಿ.ಎಂ.ಕಾರು ಏರಿ ಹೊರಟು ಹೋಗಿದ್ದರಿಂದ ತಬ್ಬಿಬ್ಬಾದ ಬಿಜೆಪಿಗರು ಆಶ್ಚರ್ಯ ಚಕಿತರಾಗಿ ಕಾರನ್ನೇ ನೋಡುತ್ತಿದ್ದರು.

ಬಿಜೆಪಿ ಮುಖಂಡರ ಸ್ವಾಗತ : ತಾಲೂಕಿನ ಬಿಜೆಪಿ ಅಧ್ಯಕ್ಷರಾದ ನಾಗಣ್ಣಗೌಡ, ಗಣೇಶ್‌ಕುಮಾರಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಯೋಗಾನಂದಕುಮಾರ್, ರೈತ ಮೋರ್ಚಾ ಅಧ್ಯಕ್ಷ ರಮೇಶ್‌ಕುಮಾರ್, ಮಾಜಿ ಅಧ್ಯಕ್ಷ ಹನಗೋಡುಮಂಜುನಾಥ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಹಾಜರಿದ್ದು, ಮುಖ್ಯಮಂತ್ರಿಗಳನ್ನು ಸ್ವಾಗತಿಸಿ, ತಾಲೂಕಿನಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದ್ದು ನೆರವಿಗೆ ಬರುವಂತೆ ಅಧ್ಯಕ್ಷ ನಾಗಣ್ಣಗೌಡ ಮನವಿ ಸಲ್ಲಿಸಿದರು.

ಈ ವೇಳೆ ನಗರಸಭೆ ಅಧ್ಯಕ್ಷೆ ಸಮಿನಾ ಪರ್ವಿನ್, ಸದಸ್ಯರು ಹಾಗೂ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್, ದೇವರಾಜ್ ಸೇರಿದಂತೆ ಎರಡು ಪಕ್ಷಗಳ ಅನೇಕ ಮುಖಂಡರುಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next