ಹುಣಸೂರು: ಬಾಲಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದೊಡ್ಗಡಹೆಜ್ಜೂರಿನಲ್ಲಿ ನಡೆದಿದ್ದು, ಪುತ್ರನ ಸಾವಿಗೆ ಮಂಗಳ ಮುಖಿಯರೇ ಕಾರಣವೆಂದು ಪೋಷಕರು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ನಗರಕ್ಕೆ ಸಮೀಪದ ಕಿರಿಜಾಜಿ ಗ್ರಾಮದ ಕುಮಾರ್-ತಾರ ದಂಪತಿ ಪುತ್ರ 17 ವರ್ಷದ ರಾಹುಲ್‌ಮೌರ್ಯ(ಅಪ್ಪು) ಆತ್ಮಹತ್ಯೆಗೆ ಶರಣಾದಾತ.
ರಾಹುಲ್‌ಮೌರ್ಯ ನಗರದ ಕಲ್ಕುಣಿಕೆಯ ರಂಗನಾಥ ಬಡಾವಣೆಯ ಕಬ್ಬಾಳಮ್ಮ ಎಂಬ ಮಂಗಳ ಮುಖಿಯೊಂದಿಗೆ ಕಳೆದ ಎರಡು ವರ್ಷಗಳಿಂದ ತಿರುಗಾಡುತ್ತಿದ್ದ, ಮಾ.24ರಿಂದ ಇದ್ದಕಿದ್ದಂತೆ ನಾಪತ್ತೆಯಾಗಿದ್ದ, ಅಂದಿನಿಂದ ತಾಯಿ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಆದರೆ ತಾನು ಇರುವ ಸ್ಥಳದ ಬಗ್ಗೆ ತಿಳಿಸಿರಲಿಲ್ಲ. ಹಾಗೂ ಮನೆಗೆ ವಾಪಸ್ಸ್ ಆಗಿರಲಿಲ್ಲ.
ಆದರೆ ಜೂ.21 ರಂದು ರಾಹುಲ್‌ಮೌರ್ಯ ಹುಣಸೂರಿಗೆ ವಾಪಸ್ಸಾಗಿ ದೊಡ್ಡ ಹೆಜ್ಜೂರಿನಲ್ಲಿರುವ ದೊಡ್ಡಮ್ಮನ ಮನೆಗೆ ತೆರಳಿದ್ದ, ಜು.23ರ ಬೆಳಗ್ಗೆ ಕೆಲ ಮಂಗಳ ಮುಖಿಯರು ಕಿರಿಜಾಜಿಯ ರಾಹುಲ್‌ಮೌರ್ಯನ ಮನೆ ಬಳಿಗೆ ಬಂದು ಯುವತಿಯೊರ್ವಳನ್ನು ಕರೆದೊಯ್ದಿದ್ದಾನೆಂದು ಗಲಾಟೆ ಮಾಡಿದ್ದರೆನ್ನಲಾಗಿದೆ. ಇದರಿಂದ ಹೆದರಿದ ರಾಹುಲ್‌ಮೌರ್ಯ ಅದೇ ದಿನ ಸಂಜೆ ದೊಡ್ಡಹೆಜ್ಜೂರಿನ ದೊಡ್ಡಮ್ಮನವರ ಜಮೀನಿನಲ್ಲಿರುವ ಬಿದಿರು ಶೆಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಪುತ್ರನ ಸಾವಿಗೆ ಮಂಗಳ ಮುಖಿಯರೇ ಕಾರಣವೆಂದು ತಂದೆ ಕುಮಾರ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮತ್ತೊಂದೆಡೆ ಮಂಗಳಮುಖಿ ಕಬ್ಬಾಳಮ್ಮ ಆಪರೇಷನ್ ಕಾರಣಕ್ಕಾಗಿ 1.5 ಲಕ್ಷರೂ ಪಡೆದು ರಾಹುಲ್ ಮೌರ್ಯನೊಂದಿಗೆ ನಾಪತ್ತೆಯಾಗಿದ್ದಾಳೆ, ಪತ್ತೆಮಾಡಿಕೊಡಿ ಎಂದು ಜೂ.21ರಂದು ನಗರ ಠಾಣೆಗೆ ಕಲ್ಕುಣಿಕೆಯ ಹೇಮಾ ಎಂಬಾಕೆ ದೂರು ನೀಡಿದ್ದರು. ರಾಹುಲ್‌ಮೌರ್ಯನ ಸಾವಿನ ಸುದ್ದಿ ತಿಳಿದ ಕಬ್ಬಾಳಮ್ಮ ಸಹ ಮೈಸೂರು ತಾಲೂಕಿನ ಮಹದೇವಪುರದ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Ramanagara: ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವು, ಘಟನೆ ದೃಶ್ಯ ಕ್ಯಾಮೆರಾದಲ್ಲಿ ಸೆರೆ