ಹುಣಸಗಿ: ಕಳೆದ ಮೂರು ದಶಕಗಳಿಂದ ಗ್ರಂಥಾಲಯಕ್ಕೆ ಶಾಶ್ವತ ಕಟ್ಟಡವಿಲ್ಲ. ಇದರಿಂದಾಗಿ ಪುಸ್ತಕ ಪ್ರೇಮಿಗಳು, ಸಾಹಿತಿಗಳು, ಓದುಗರು ಸಮಸ್ಯೆ ಅನುಭವಿಸುವಂತಾಗಿದೆ. ಕಳೆದ ಮೂರು ದಶಕಗಳ ಹಿಂದೆ ಈ ಗ್ರಂಥಾಲಯ ಪ್ರಾರಂಭಿಸಲಾಗಿತ್ತು. ಅದರಂತೆ ಪ್ರಾರಂಭದ ದಿನದಲ್ಲಿ ಗ್ರಂಥಾಲಯ ಇಲಾಖೆಯಿಂದ ಓರ್ವ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಸಿಬ್ಬಂದಿ ನಿವೃತ್ತಿ ನಂತರ ಮತ್ತೋರ್ವ ಸಿಬ್ಬಂದಿ ಇಲ್ಲದೇ ಕೆಲ ವರ್ಷಗಳ ಕಾಲ ಗ್ರಂಥಾಲಯ ಮುಚ್ಚಲಾಗಿತ್ತು. ಇದರಿಂದಾಗಿ ಕೆಬಿಜೆಎನ್ನೆಲ್ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಕೆಲ ವರ್ಷಗಳ ಕಾಲ ತೊಂದರೆ ಅನುಭವಿಸಿದರು.
ನಂತರ ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗೆ ಒಂದರಂತೆ ಗ್ರಂಥಾಲಯ ಆರಂಭಿಸಲಾಗಿದ್ದರಿಂದ ಗ್ರಂಥಾಲಯದಲ್ಲಿನ ಪುಸ್ತಕಗಳು ಮತ್ತು ಕಥೆ ಕಾದಂಬರಿ ಹಸ್ತಾಂತರಿಸಲಾಯಿತು. ಸದ್ಯ ಗ್ರಂಥಾಲಯ ಇಲಾಖೆಯೇ ನಿರ್ವಹಣೆ ಮಾಡುತ್ತಿದ್ದು, 450ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ.
ಹುಣಸಗಿ ಪಟ್ಟಣಕ್ಕೆ ಗ್ರಂಥಾಲಯಕ್ಕೆ ಸೂಕ್ತ ನಿವೇಶನ ನೀಡಿದಲ್ಲಿ ಮತ್ತೆ ಈ ಮೊದಲಿನಂತೆ ಶಾಖಾ ಗ್ರಂಥಾಲಯ ಆರಂಭಕ್ಕೆ ಮುಂದಾಗುವುದಾಗಿ ಅಧಿಕಾರಿ ತಿಳಿಸಿದ್ದಾರೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಹುಣಸಗಿ ಪಟ್ಟಣದಲ್ಲಿ ಎರಡು ಪದವಿ ಕಾಲೇಜುಗಳು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಆದ್ದರಿಂದ ಗ್ರಂಥಾಲಯಕ್ಕೆ ಅವಶ್ಯ ಇರುವ ನಿವೇಶನವನ್ನು ಸ್ಥಳೀಯ ಜನಪ್ರತಿನಿಧಿಗಳು ಒದಗಿಸಿಕೊಡುವಲ್ಲಿ ಮುತುವರ್ಜಿ ವಹಿಸಬೇಕು ಎಂದು ಕರವೇ ಅಧ್ಯಕ್ಷ ಈರಣ್ಣ ಅಗ್ನಿ ಒತ್ತಾಯಿಸಿದ್ದಾರೆ.