ಹುಣಸಗಿ: ಸಮಾಜ ಸುಧಾರಣೆಯಲ್ಲಿ ಮತ್ತು ಸಮಾಜದಲ್ಲಿನ ಅನಾಚಾರ, ಅನಿಷ್ಟ ಪದ್ಧತಿ, ಮೌಡ್ಯತೆ, ಕಂದಾಚಾರ, ಜಾತಿ ಮತ ಪಂಥವನ್ನು ತೊಡೆದು ಹಾಕುವಲ್ಲಿ ಶ್ರಮಿಸಿದ ಶರಣ ಸಂತರಲ್ಲಿ ನಾರಾಯಣ ಗುರ ಒಬ್ಬರು ಎಂದು ಶಾಸಕ ರಾಜುಗೌಡ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೂಮಿ ಮೇಲೆ ಜನಿಸಿದ ಮಾನವರು ಎಲ್ಲರೂ ಸಮಾನರು, ಇಲ್ಲಿ ಯಾರು ಮೇಲಲ್ಲ, ಯಾರು ಕೀಳಲ್ಲ ಎಂಬ ಸಂದೇಶವನ್ನು ಜನರಿಗೆ ತೋರಿಸಿಕೊಟ್ಟವರು. ಅವರು ತಮ್ಮ ಸಣ್ಣ ವಯಸ್ಸಿನಲ್ಲಿಯೇ ವೇದ ಉಪನಿಷತ್ತು, ಪುರಾಣ ಮಹಾಕಾವ್ಯಗಳ ಕುರಿತು ಅಧ್ಯಯನ ನಡೆಸಿ ಉನ್ನತ ಜ್ಞಾನ ಪಡೆದುಕೊಂಡಿದ್ದರು ಎಂದರು. ಎಲ್ಲ ಜಾತಿ ಜನಾಂಗಗಳ ಮಕ್ಕಳಿಗೆ ವಸತಿ ಶಾಲೆ ಆರಂಭಿಸಿ ಕೂಡಿ ಬಾಳುವಂತೆ ಬದುಕು ತೋರಿಸಿಕೊಟ್ಟ ಶ್ರೇಷ್ಠ ಶರಣರ ಸಂತರಲ್ಲಿ ಅಗ್ರಗಣ್ಯರು ಎಂದರು.
ನಂತರ ಮಾತನಾಡಿದ ಹುಣಸಗಿ ತಹಶೀಲ್ದಾರ್ ಸುರೇಶ ಚವಲ್ಕರ್, ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ಎಂಬಂತೆ ಸರ್ವ ಜನಾಂಗದವರಿಗೂ ಸಮಾನ ಶಿಕ್ಷಣ ದೊರೆಯಬೇಕು ಎಂಬ ಕನಸು ಕಂಡಿದ್ದ ಅವರು ವಯಸ್ಕರಿಗಾಗಿ ರಾತ್ರಿ ಶಾಲೆ ಆರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ತಾಪಂ ಕಾರ್ಯನಿವಾಹಕ ಅಧಿಕಾರಿ ಅಮರೇಶ, ಬಾಲಯ್ಯ ಗುತ್ತೇದಾರ, ಯಲ್ಲಪ್ಪ ಕುರಕುಂದಿ, ಸೇರಿದಂತೆ ಆರ್ಯ ಈಡಿಗ ಸಮಾಜದ ಬಾಂಧವರು ಇತರರು ಇದ್ದರು.