ಹುನಗುಂದ: ಕೊರೊನಾ ವೈರಸ್ ತಡೆಗೆ ಲಾಕ್ ಡೌನ್ ಆದೇಶದಿಂದ ತೊಗರಿ ಹಾಗೂ ಕಡಲೆ ಬೆಳೆಗಾರರು ಕಂಗಾಲಾಗಿದ್ದಾರೆ. ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿಸಿದ್ದು, ಲಾಕ್‌ಡೌನ್ ಆದೇಶದಿಂದಾಗಿ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಅಲ್ಲದೇ ಹಿಂಗಾರು ಹಂಗಾಮಿನ ಕಡಲೆ ಬೆಳೆ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ರೈತರು ಹೆಸರು ನೋಂದಣಿ ಮಾಡಿದ್ದರೂ ಖರೀದಿ ಕೇಂದ್ರಗಳು ಮುಚ್ಚಿವೆ. ಮಾರಾಟ ಮಾಡಿದ ಬೆಳೆಗೆ ಹಣವೂ ಇಲ್ಲದೇ, ಕಡಲೆ ಬೆಳೆ ಮಾರಾಟವಾಗದೇ ಹುಳು (ನುಶಿ) ಹತ್ತುವ ಆತಂಕವನ್ನು ರೈತರು ಎದುರಿಸುತ್ತಿದ್ದಾರೆ.
ಮಾರ್ಚ್‌ನಲ್ಲಿ ಸರ್ಕಾರ ಸಹಕಾರ ಮಹಾ ಮಂಡಳಿಯ ನೇತೃತ್ವದಲ್ಲಿ ಹುನಗುಂದ ಟಿಎಪಿಸಿಎಂಎಸ್, ಸೂಳೇಬಾವಿ ಎಸ್‌ಸಿಒ, ಕೂಡಲಸಂಗಮ ಸಿಂಗನಗುತ್ತಿ, ಕಂದಗಲ್ಲ, ಚಿಕ್ಕಾದಾಪುರದ ನಾಲ್ಕು ಪಿಕೆಪಿಎಸ್ ಕೇಂದ್ರ ಸೇರಿದಂತೆ 6 ಕೇಂದ್ರಗಳಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲಾಗಿದೆ. ಹುನಗುಂದದ ಒಂದು ಕೇಂದ್ರದಲ್ಲಿ 1335 ಜನ ರೈತರು ತೊಗರಿ ಮಾರಾಟಕ್ಕಾಗಿ ನೋಂದಣಿ ಮಾಡಿಸಿದ್ದರೂ ಅದರಲ್ಲಿ 1295 ಜನ ರೈತರ 11975 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಖರೀದಿಯಾಗಿ ತಿಂಗಳು ಕಳೆದಿದ್ದು, ಒಂದಿಬ್ಬರೂ ರೈತರ ಖಾತೆಗಳಿಗೆ ಹಣ ಜಮೆ ಆಗಿದ್ದು ಬಿಟ್ಟರೇ ಉಳಿದ ಸಾವಿರಾರು ಜನ ತಾಲೂಕಿನ ರೈತರು ತೊಗರಿ ಬೆಂಬಲ ಬೆಲೆಯ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕೊರೊನಾ ಭೀತಿಯಿಂದ ತಾಲೂಕಿನ ಎಲ್ಲ ಕಡಲೆ ಖರೀದಿ ಕೇಂದ್ರ ಬಂದ್ ಮಾಡಲಾಗಿದೆ. ಹೀಗಾಗಿ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬೇಕು ಎಂದು ನಿರ್ಧರಿಸಿ ನೋಂದಣಿ ಮಾಡಿಸಿರುವ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಮಾರ್ಚ್17 ರವರೆಗೆ ತೊಗರಿಯನ್ನು ತಾಲೂಕಿನ ಆರು ಕೇಂದ್ರಗಳಲ್ಲಿ ಖರೀದಿಸಲಾಗಿದೆ. ಬೆಂಬಲ ಬೆಲೆ ಹಣವನ್ನು ರೈತರ ಖಾತೆಗೆ ಜಮಾ ಆಗುತ್ತಿದ್ದು ಮಾಸಾಮತ್ಯದವರೆಗೆ ಎಲ್ಲ ರೈತರ ಖಾತೆಗೆ ಹಣ ಜಮೆಯಾಗಲಿದೆ.
ಮುತ್ತು ಕುದರಿಮನಿ,
ಖರೀದಿದಾರರು ಟಿಎಪಿಸಿಎಂಎಸ್
ಹುನಗುಂದ.