ಹುನಗುಂದ: ಪಟ್ಟಣ ಪ್ರವೇಶಿಸುವ ರಸ್ತೆ ಹಾಗೂ ಒಳ ರಸ್ತೆಗಳಲ್ಲಿ ನಿರ್ಮಿಸಿರುವ ರಸ್ತೆ ತಡೆ (ಹಂಪ್ಸ್)ಗಳಲ್ಲಿ ಸರ್ಕಾರ ನಿಯಮ ಪಾಲನೆಯಾಗದೇ ಇರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಹುನಗುಂದ ಪಟ್ಟಣ ಪ್ರಮುಖ ಸ್ಥಳವಾಗಿದ್ದು ರಾಜ್ಯ ಹೆದ್ದಾರಿ ಹಾದು ಹೋಗಿರುವುದರಿಂದ ವಾಹನಗಳ ಸಂಚಾರ ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಸೇವಾ ರಸ್ತೆ ಮೂಲಕ ಬಾಗಲಕೋಟೆಯಿಂದ ಪಟ್ಟಣ ಪ್ರವೇಶಿಸುವ ಮತ್ತು ಐತಿಹಾಸಿಕ ಸ್ಥಳ ಕೂಡಲಸಂಗಮದಿಂದ ಹುನಗುಂದ ಪ್ರವೇಶಿಸುವಾಗ ಎಲ್ಲ ಕಡೆಗಳಲ್ಲಿ ರಸ್ತೆ ತಡೆ ನಿರ್ಮಿಸಲಾಗಿದೆ. ಆದರೆ ಸಾರಿಗೆ ಇಲಾಖೆ ನಿಯಮಗಳು ಪಾಲನೆಯಾಗಿಲ್ಲ. ಎಚ್ಚರಿಕೆ, ಬಣ್ಣದ ಬೋರ್ಡ್ ಹೀಗೆ ಸವಾರನಿಗೆ ರಸ್ತೆ ಸಾಗುವ ನಿಯಮಗಳೇ ಕಾಣುತ್ತಿಲ್ಲ.
ಉದಾಹರಣೆಗೆ ಇಲ್ಲಿನ ತಾಲೂಕು ಆಡಳಿತ ಮಿನಿ ವಿಧಾನಸೌಧ ಮುಂದೆ ಎರಡೂ ಬದಿ ಕಡೆ ರಸ್ತೆ ತಡೆ ಹಾಕಲಾಗಿದೆ. ಅವುಗಳಿಗೆ ಕಾನೂನಿನಂತೆ ಬಿಳಿ ಬಣ್ಣದ ಪಟ್ಟಿ ಇಲ್ಲದೆ ಇರುವುದರಿಂದ ಅದು ಸವಾರರಿಗೆ ಕಾಣಿಸದೆ ಈ ಸ್ಥಳದಲ್ಲಿ ಸಾಕಷ್ಟು ಅವಘಡಗಳು ಸಂಭವಿಸಿವೆ.
ಕೆಲವು ಸಲ ಸಣ್ಣಪುಟ್ಟ ಅಪಘಾತಗಳಾದರೆ, ಇನ್ನೂ ಕೆಲವು ಸಲ ತೀವ್ರತರ ಅಪಘಾತಗಳಾಗಿ ಆಸ್ಪತ್ರೆಗೆ ದಾಖಲಾದ ಉದಾಹರಣೆಗಳೂ ಉಂಟು. ಪ್ರತಿನಿತ್ಯ ಇಂತಹ ಘಟನೆಗಳು ನಡೆಯುತ್ತಿದ್ದರೂ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ತಕ್ಷಣ ನಗರ ಪ್ರವೇಶಿಸುವ ಕಡೆ ಹಾಕಿರುವ ರಸ್ತೆಗಳಿಗೆ ಸಾರಿಗೆ ನಿಯಮದಂತೆ ಬೋರ್ಡ್ ಮತ್ತು ಬಣ್ಣ ಬಳಿಯಬೇಕಿದೆ.
ಹುನಗುಂದ ಪ್ರವೇಶಿಸುತ್ತಿರುವ ನಾಲ್ಕು ದಿಕ್ಕುಗಳಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ರಸ್ತೆತಡೆ ನಿರ್ಮಿಸಲಾಗಿದೆ. ನಿಯಮದಂತೆ ರಿಪ್ಲೆಕ್ಟರ್ ಅಳವಡಿಸಲು ಬಿಸಿಲಿನ ಪ್ರಖರತೆ ಕೊರತೆ ಇದ್ದುದರಿಂದ ತಡವಾಗಿದೆ. ಈ ಕುರಿತು ತಹಶೀಲ್ದಾರರು ಈಗಾಗಲೇ ತಿಳಿಸಿದ್ದಾರೆ. ಇಷ್ಟರಲ್ಲೆ ರಿಪ್ಲೆಕ್ಟರ್ ಅಳವಡಿಸಲಾಗುವುದು.
ವೆಂಕಟೇಶ ಹೂಲಗೇರಿ, ಪಿಡಬ್ಲ್ಯುಡಿ ಎಇಇ.
ಬಹುತೇಕ ಇಲಾಖೆ ಅಧಿಕಾರಿಗಳ ಕಾರ್ಯ ಚಟುವಟಿಕೆಯಲ್ಲಿ ನಿರ್ಲಕ್ಷ್ಯ ಮನೋಭಾವ ಎದ್ದು ಕಾಣುತ್ತಿದೆ. ಎಲ್ಲ ಇಲಾಖೆಗಳಲ್ಲಿ ಇರುವ ನಿರ್ಲಕ್ಷ್ಯದಿಂದ ಸಾರ್ವಜನಿಕರು ತಮ್ಮ ಕೆಲಸಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
*ಕೃಷ್ಣ ಜಾಲಿಹಾಳ, ರೈತ ಮುಖಂಡ
*ವೀರೇಶ ಕುರ್ತಕೋಟಿ