Advertisement

ಹಾಸ್ಯ ಸಾಹಿತ್ಯ ಲಘುವಲ್ಲ, ಗಂಭೀರ

12:20 PM Nov 05, 2018 | |

ಬೆಂಗಳೂರು: ಲಘುವಾದ ಹಾಸ್ಯ ಸಾಹಿತ್ಯ ಗಂಭೀರವಾಗಿ ವಿಮರ್ಶೆಗೆ ಒಳಪಡಬೇಕಿದೆ ಎಂದು ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ. ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ ಹಾಗೂ ಶ್ರೀ ಗಣೇಶ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಲೇಖಕಿ ಟಿ.ಸುನಂದಮ್ಮ ಸ್ಮರಣೆ ಮತ್ತು ಟಿ.ಸುನಂದಮ್ಮ ಸಾಹಿತ್ಯ ಸಂಪುಟ -1 ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

Advertisement

ಟಿ.ಸುನಂದಮ್ಮ ಅವರು ಲಘು ಸಂಗತಿಗಳಿಂದ ಹಾಸ್ಯವನ್ನು ಹುಡುಕಿ ಬಹಳ ಗಂಭೀರವಾದ ಸಾಹಿತ್ಯ ಕೃಷಿ ಮಾಡುತ್ತಿದ್ದರು. ಹೀಗಾಗಿಯೇ ಅವರ ಹಾಸ್ಯ ಸಾಹಿತ್ಯ ಆರೋಗ್ಯಕರ ರೀತಿಯಲ್ಲಿದೆ. ಅದರಿಂದ ಅನ್ಯರ ಮನಸ್ಸಿಗೆ ನೋವಾಗುವುದಿಲ್ಲ. ಹಾಸ್ಯ ಸಾಹಿತ್ಯವನ್ನು ಗಂಭೀರವಾಗಿ ವಿಮರ್ಶೆ ಮಾಡುವುದನ್ನೇ ಸಾಹಿತ್ಯ ಲೋಕ ಮರೆತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸುನಂದಮ್ಮ ಅವರ ಬದುಕು ಧೀಮಂತವಾದುದು. ಹೀಗಾಗಿ ಅವರ ಬರವಣಿಗೆಯಲ್ಲಿ ಬಡತನ, ಕಣ್ಣೀರಿನ ವಸ್ತು ವಿಚಾರಗಳಿಲ್ಲ. ಅವರ ಸಾಹಿತ್ಯದಲ್ಲಿ ಹಾಸ್ಯದ ವಿಚಾರಗಳು ಸಮೃದ್ಧವಾಗಿವೆ. ಸುನಂದಮ್ಮ ಅವರ ಕಾಲ ಕೂಡ ಕನ್ನಡ ಸಾಹಿತ್ಯ ಲೋಕದಲ್ಲಿ ಶ್ರೀಮಂತವಾದುದು.

ಕಿರಿಯ ಲೇಖಕರನ್ನು ಪ್ರೋತ್ಸಾಹಿಸುವ ಹಿರಿಯ ಸಾಹಿತಿಗಳ ದೊಡ್ಡ ಬಳಗವೇ ಇತ್ತು. ರಾಶಿ, ಕೊರವಂಜಿ ಡಾ.ಶಿವರಾಮ, ಬೀಚಿ ಹೀಗೆ ಅನೇಕ ಹಿರಿಯ ಸಾಹಿತಿಗಳ ಪ್ರೋತ್ಸಾಹದಿಂದಲೇ ಟಿ.ಸುನಂದಮ್ಮ ಅವರು ಸಾಹಿತ್ಯ ಲೋಕದಲ್ಲಿ ತಮ್ಮ ಛಾಪು ಮೂಡಿಸಲು ಸಾಧ್ಯವಾಯಿತು ಎಂದು ಹೇಳಿದರು.

ಸಾಹಿತಿ ಪ್ರೊ.ಅ.ರಾ.ಮಿತ್ರ ಮಾತನಾಡಿ, ಹಾಸ್ಯಗಾರ ವಿಷಯದ ಒಳಗಿಳಿದು ಹೊರಬರುತ್ತಾನೆ. ಹೀಗಾಗಿ ಹಾಸ್ಯಗಾರರಿಗೆ ಬದುಕಿನ ಪ್ರತಿಘಟನೆಗಳಲ್ಲೂ ಹಾಸ್ಯ ಕಾಣುವುದು. ಅಂದಿನ ಕಾಲದ ಹೆಣ್ಣು ಮಕ್ಕಳ ಮನೋಧರ್ಮ ಚೆನ್ನಾಗಿ ಅರಿತ ಟಿ.ಸುನಂದಮ್ಮ ಅವರ ಬರವಣಿಗೆಯಲ್ಲಿ ಸ್ತ್ರೀವಾದವೇ ನಗೆ ಬರಹಗಳಾಗಿ ಮೂಡಿ ಬಂದಿವೆ. ಅಂದರೆ ಅವರು ಸ್ತ್ರೀವಾದದ ವಿರೋಧಿ ಎಂದು ಅರ್ಥವಲ್ಲ.

Advertisement

ಅಂದಿನ ಕಾಲದ ಹೆಣ್ಣಿನ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಅರಿತ ಅವರು ಅವಳ ಭಾವಲೋಕವನ್ನೇ ತಮ್ಮ ಹಾಸ್ಯ ಬರವಣಿಗೆಯಲ್ಲಿ ತೆರೆದಿಟ್ಟಿದ್ದಾರೆ. ಟಿ.ಸುನಂದಮ್ಮ ಅವರು ಈ ಶತಮಾನದ ಅಪೂರ್ವ ಮಹಿಳೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಆಪ್ತ ಸಲಹೆಗಾರ್ತಿ ಶಾಂತಾ ನಾಗರಾಜ್‌, ಪತ್ರಕರ್ತೆ ಡಾ.ಆರ್‌.ಪೂರ್ಣಿಮಾ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next