Advertisement

ನಗುವಿನ ಕಚಗುಳಿಯಿಟ್ಟು ಜೀವನೋತ್ಸಾಹ ತುಂಬುವುದೇ ಹಾಸ್ಯ

06:03 PM Dec 25, 2021 | Team Udayavani |

ಗದಗ: ಜಂಜಡದ ಬದುಕಿನಲ್ಲಿ ಮನುಷ್ಯನ ಮನಸ್ಸು ಖನ್ನತೆಗೆ ಒಳಗಾಗಿ ಬದುಕಿನಲ್ಲಿ ಉಲ್ಲಾಸ, ಉತ್ಸಾಹ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಹಾಸ್ಯ ನಗುವಿನ ಕಚಗುಳಿಯನ್ನಿಟ್ಟು ಜೀವನೋತ್ಸಾಹ ತುಂಬುತ್ತದೆ ಎಂದು ಡಾ|ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ತೋಂಟದಾರ್ಯ ಮಠದಲ್ಲಿ ಜರುಗಿದ ಶಿವಾನುಭವದಲ್ಲಿ ಮಾತನಾಡಿದ ಅವರು, ಬೀಚಿ ತಮ್ಮ ಹಾಸ್ಯ ಬರಹಗಳ ಮೂಲಕ ಕನ್ನಡಿಗರ ಮನೆ ಮಾತಾಗಿದ್ದಾರೆ. ಕನ್ನಡ ಸಾಹಿತ್ಯಕ್ಕೊಂದು ಸೊಗಸನ್ನು ತಂದು ಕೊಟ್ಟಿದ್ದಾರೆ. ಹಾಸ್ಯ ಪ್ರಸಂಗಗಳ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದುವ ಕಾರ್ಯವನ್ನು ಬೀಚಿ ಮಾಡಿದ್ದಾರೆ. ಅವರ ಕೃತಿಗಳನ್ನು ಓದುವ ಮೂಲಕ ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಬೀಚಿ ಮತ್ತು ಹಾಸ್ಯ ವಿಷಯವಾಗಿ ಟಿ.ವಿ. ಹಾಸ್ಯ ಕಲಾವಿದ ಅರುಣ ಕುಲಕರ್ಣಿ ಉಪನ್ಯಾಸ ನೀಡಿ, ಜೀವನದ ಸಣ್ಣ ಸಣ್ಣ ಸಂಗತಿಗಳನ್ನು ಹೇಗೆ ಆಸ್ವಾದಿಸಬೇಕೆಂಬುದನ್ನು ಸರಳವಾಗಿ ತಮ್ಮ ಬರವಣಿಗೆ ಮೂಲಕ ಕನ್ನಡ ಸಾಹಿತ್ಯಕ್ಕೆ ಹೊಸ ಹೊಳಪನ್ನು ನೀಡಿದ್ದಾರೆ. ಹುಡುಕುವ ಕಣ್ಣು, ಛಾಡಿಸುವ ಮನೋಭಾವ, ಚುಚ್ಚು ಮಾತುಗಳ ಮೂಲಕ ಸಮಾಜಕ್ಕೆ ಸಂದೇಶ ನೀಡುವ ಪ್ರಯತ್ನವನ್ನು ಸಾಹಿತ್ಯದ ಮೂಲಕ ಮಾಡಿದ್ದಾರೆ.

ಕಲಿತಿರುವದು ಕಡಿಮೆಯಾದರೂ ಕನ್ನಡ ಭಾಷೆ ಅತ್ಯಂತ ಸಶಕ್ತವಾಗಿ ತಮ್ಮ ಬರವಣಿಗೆಯನ್ನು ತೋರಿದ್ದಾರೆ. ಅವರ ಬರವಣಿಗೆಗೆ ಮೂಲ ಪ್ರೇರಣೆ ಅ.ನ.ಕೃಷ್ಣರಾಯರ ಸಂಧ್ಯಾರಾಗ ಕಾದಂಬರಿಯಾಗಿದೆ. ಏಕಾಂಕ, ರೇಡಿಯೋ ನಾಟಕ, ವಿನೋದ ಬರಹಗಳು, ಸಣ್ಣ ಕತೆಗಳ ಪ್ರಕಾರಗಳಲ್ಲಿ 66 ಪುಸ್ತಕಗಳನ್ನು ಬರೆದಿದ್ದಾರೆ. ವಿಡಂಬನೆಯ ಮೂಲಕ ಪ್ರಸ್ತುತ ಸಮಾಜದ ಸ್ಥಿತಿಗತಿಗಳನ್ನು ಸಮಾಜದ ಮುಂದಿರಿಸಿ ಹಾಸ್ಯದ ಜೊತೆಗೆ ಜಾಗೃತಿಯುಂಟು ಮಾಡುವ
ಕಾರ್ಯವನ್ನು ಬೀಚಿಯವರು ಮಾಡಿದ್ದಾರೆ ಎಂದು ಅನೇಕ ಹಾಸ್ಯ ಪ್ರಸಂಗಗಳನ್ನು ಪ್ರಸ್ತುತಪಡಿಸಿದರು.

ಇದೇ ಸಂದರ್ಭದಲ್ಲಿ ಸೃಷ್ಟಿ ಮೀಡಿಯಾ ಪ್ರತಿಷ್ಠಾನದಿಂದ ಕವಿತಾ ಕಾಶಪ್ಪನವರು ಹಾಗೂ ಬಳಗದವರು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅವರನ್ನು ಸನ್ಮಾನಿಸಿದರು. ಸೌಮ್ಯ ಜಾನ ಪಟ್ಟದಕಲ್ಲು ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಧರ್ಮಗ್ರಂಥ ಪಠಣವನ್ನು ಮಹಾಂತಮ್ಮ ಬಸಮ್ಮ ಚಿತಾಪೂರ, ವಚನ ಚಿಂತನವನ್ನು ನೀಲಮ್ಮ ಬಸಪ್ಪ ಚಿತಾಪೂರ ನೆರವೇರಿಸಿದರು.

Advertisement

ನರೇಗಲ್‌ ಬೀಚಿ ಬಳಗದ ಅಧ್ಯಕ್ಷ ಡಾ.ಆರ್‌.ಕೆ. ಗಚ್ಚಿನಮಠ, ಶಿವಾನುಭವ ಸಮಿತಿ ಚೇರ್ಮನ್‌ ವಿವೇಕಾನಂದಗೌಡ ಪಾಟೀಲ, ಮುರುಘರಾಜೇಂದ್ರ ಬಡ್ನಿ, ರತ್ನಕ್ಕ ಪಾಟೀಲ, ವೀರೇಶ ಬುಳ್ಳಾ, ಶಿವಬಸಪ್ಪ ಯಂಡಿಗೇರಿ, ಸೋಮಶೇಖರ ಪುರಾಣಿಕ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ದಾನಯ್ಯ ಗಣಾಚಾರಿ ಸ್ವಾಗತಿಸಿ, ರತ್ನಕ್ಕ ಪಾಟೀಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next