ಹುಮನಾಬಾದ: ಪಟ್ಟಣದ ಶ್ರೀ ವೀರಭದ್ರೇಶ್ವರ ದೇವರ ಜಾತ್ರೆ ನಿಮಿತ್ತ ಸೋಮವಾರ ರಾತ್ರಿಯಿಂದ ಅಗ್ನಿ ತುಳಿಯಲು ರಾಜ್ಯ ಸೇರಿದಂತೆ ನೆರೆ ರಾಜ್ಯಗಳ ಲಕ್ಷಾಂತರ ಭಕ್ತರು ಹರಿದು ಬಂದಿದ್ದರು. ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ಭಕ್ತರು ಆಗಮಿಸಿ ಭಕ್ತಿ ಭಾವದಿಂದ ಅಗ್ನಿ ತುಳಿದು ಪುನೀತರಾದರು. ಆದರೆ, ಅಗ್ನಿ ತುಳಿಯುವ ಭಕ್ತರಿಗೆ ಈ ವರ್ಷ ಕಟ್ಟಿಗೆ ದೊರೆಯದ ಹಿನ್ನೆಲೆಯಲ್ಲಿ ನಿರಾಸೆ ಮೂಡಿಸಿತ್ತು. ಕೊರೊನಾ ಕಟ್ಟುನಿಟ್ಟಿನ ನಿಯಮಗಳ ಮಧ್ಯೆ ಭಕ್ತರಿಗೆ ಅಗ್ನಿ ಪ್ರವೇಶಿಸುವ ಭಾಗ್ಯ ದೊರೆತಿದೆ.
ಅಗ್ನಿ ತುಳಿಯಲು ದೇವಸ್ಥಾನದಿಂದ ಸೋಮವಾರ ರಾತ್ರಿ 9.30ಕ್ಕೆ ದೇವರ ಪಲ್ಲಕ್ಕಿ ಮೆರವಣಿಗೆ ಹೊರಟು, ಪಟ್ಟಣದ ಪ್ರಮುಖ ಬೀದಿಗಳ ಮೂಲಕ ರಾತ್ರಿ 11ಕ್ಕೆ ಅಗ್ನಿ ಕುಂಡಕ್ಕೆ ಆಗಮಿಸಿತು. ಮೊದಲಿಗೆ ದೇವರು ಅಗ್ನಿ ತುಳಿಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ದೇವರ ಮಂಚ ಅಗ್ನಿ ಕುಂಡಕ್ಕೆ ಪ್ರದಕ್ಷಣೆ ಹಾಕಲಾಯಿತು. ನಂತರ ಭಕ್ತರಿಗೆ ಅಗ್ನಿ ತುಳಿಯಲು ಅನುವು ಮಾಡಿಕೊಡಲಾಯಿತು. ದೇವರ ಪಲ್ಲಕ್ಕಿ ಮೆರವಣಿಗೆ ರಾತ್ರಿ 12 ಗಂಟೆಗೆ ಮರಳಿ ದೇವಸ್ಥಾನಕ್ಕೆ ಸೇರಿತು.
ಭಕ್ತರು ದೇವರಿಗೆ ಶಾಲು ಹೊದಿಸುವುದು, ಸಕ್ಕರೆ ಪೇಢಾ ಸೇರಿದಂತೆ ಇತರೆ ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಭಕ್ತರಿಗೆ ದೂರದಿಂದಲೇ ದೇವರ ದರ್ಶನ ಮಾಡುವ ಭಾಗ್ಯ ಲಭಿಸಿದ್ದು, ವಿವಿಧ ಯಾವ ಸೇವೆಗಳಿಗೂ ಅವಕಾಶ ದೊರೆತಿಲ್ಲ. ಸೋಮವಾರ ಮಧ್ಯಾಹ್ನದ ವೇಳೆಗೆ ಅಗ್ನಿ ಕುಂಡದ ಎದುರಿಗೆ ಗಂಟೆಗಳ ಕಾಲ ಸರದಿಯಲ್ಲಿ ನಿಂತ ಭಕ್ತರು ವೀರಭದ್ರನಿಗೆ ಜಯಕಾರ ಹಾಕುತ್ತ ಮುಂದೆ ಸಾಗಿ ಅಗ್ನಿ ತುಳಿದರು.
ಜಾತ್ರೆ ಯಶಸ್ವಿ: ಶ್ರಮಿಕರಿಗೆ ಅಭಿನಂದನೆ ಶ್ರೀ ವೀರಭದ್ರೇಶ್ವರ ಜಾತ್ರೆ ನಿಮಿತ್ತ ಸತತವಾಗಿ ಕಳೆದ 13 ದಿನಗಳಿಂದ ಜಾತ್ರೆ ಯಶಸ್ವಿಗಾಗಿ ಶ್ರಮಿಸಿದವರಿಗೆ ಶಾಸಕ ರಾಜಶೇಖರ ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಭದ್ರೇಶ್ವರ ಜಾತ್ರೆಗೆ ಅನೇಕ ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡಿದ್ದಾರೆ. ಜಾತ್ರೆಗೆ ಹರಿದು ಬರುವ ಲಕ್ಷಾಂತರ ಜನರಿಗೆ ವಿವಿಧ ಮೂಲ ಸೌಕರ್ಯ ಒದಗಿಸಿ, ಪಟ್ಟಣ ಸ್ವಚ್ಛತೆ ಕಾಪಾಡಿದ ಸ್ಥಳಿಯ ಪುರಸಭೆಯ ಅಧಿಕಾರಿಗಳು, ಕಾರ್ಮಿಕರು, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಸ್ಥಳಿಯ ವಿವಿಧ ಸಂಘ, ಸಂಸ್ಥೆಗಳ ಪ್ರತಿನಿ ಧಿಗಳು, ಸಿಬ್ಬಂದಿ, ಪಟ್ಟಣದ ಸ್ವಯಂ ಸೇವಕರು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಬಂಧಿಸದಂತೆ ನೋಡಿಕೊಳ್ಳಲು ಹಾಗೂ ರಸ್ತೆಗಳಲ್ಲಿ ಯಾವುದೇ ಸಂಚಾರ ಸಮಸ್ಯೆ ಉಂಟಾಗದಂತೆ ಪೊಲೀಸ್ ಅಧಿ ಕಾರಿಗಳು ಹಾಗೂ ಸಿಬ್ಬಂದಿ ಉತ್ತಮ ಬಂದೋಬಸ್ತ್ ಮಾಡಿದ್ದಾರೆ. ವಿವಿಧ ಇಲಾಖೆಗಳ ಅ ಧಿಕಾರಿಗಳು ಹಾಗೂ ಸಿಬ್ಬಂದಿ ಜಾತ್ರೆಯಲ್ಲಿ ಸತತ ಶ್ರಮಿಸಿ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡಿದು ಅವರಿಗೆಲ್ಲ ಅಭಿನಂದನೆ ಸಲ್ಲಿಸುತ್ತೇನೆ ಎಂದರು.