ಕಾಪು : ವಲಸೆ ಬಂದು, ಜನತಾ ಕರ್ಫ್ಯೂ ಮತ್ತು ಲಾಕ್ ಡೌನ್ ಕಾರಣದಿಂದಾಗಿ ಕಾಪುವಿನಲ್ಲಿ ಸಿಲುಕಿಕೊಂಡಿದ್ದ 20 ಜನರನ್ನು ಊರಿಗೆ ಕಳುಹಿಸಿಕೊಡುವ ಮೂಲಕ ಆಪದ್ಭಾಂಧವ ಆಸೀಫ್ ಮತ್ತವರ ಸಂಗಡಿಗರು ಮಾದರಿಯಾಗಿದ್ದಾರೆ.
ಜನತಾ ಕರ್ಫ್ಯೂಗೆ ಪೂರ್ವದಲ್ಲಿ ಮಹಾರಾಷ್ಟ್ರದಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವಠಾರಕ್ಕೆ ವಲಸೆ ಬಂದಿದ್ದ 10 ಕ್ಕೂ ಅಧಿಕ ಮಂದಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.
ಕಾಪುವಿನ ಸ್ಥಳೀಯ ಸಮಾಜ ಸೇವಕರ ಮೂಲಕವಾಗಿ ಮಾಹಿತಿ ಪಡೆದ ಮೈಮುನಾ ಪೌಂಡೇಶನ್ ರಿ. ಕಾರ್ನಾಡ್ ಮೂಲ್ಕಿ ಇದರ ಸಂಸ್ಥಾಪಕ ಆಸೀಫ್ ಅಪತ್ಭಾಂದವ ಅವರು ಫೇಸ್ಬುಕ್ ಲೈವ್ ಮುಖಾಂತರ ದಾನಿಗಳ ಸಹಕಾರದೊಂದಿಗೆ ಕೇವಲ 5 ನಿಮಿಷದಲ್ಲಿ10,000 ಸಾವಿರ ರೂಪಾಯಿಯನ್ನು ಸಂಗ್ರಹಿಸಿ, ಆಂಬುಲೆನ್ಸ್ ಮೂಲಕ ಕಾಪುವಿನಿಂದ ಉಡುಪಿ ರೈಲ್ವೆ ನಿಲ್ದಾಣಕ್ಕೆ ತಲುಪಿಸಿ ಅವರ ಊರಿಗೆ ತೆರಳಲು ಟಿಕೆಟ್ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ.
ಕಾಪುವಿನ ಸಮಾಜ ಸೇವಕಿ ನೀತಾ ಪ್ರಭು ಮತ್ತವರ ತಂಡವು ಕಳೆದ ಕೆಲವು ದಿನಗಳಿಂದ ಇವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದು ಶನಿವಾರ ಕೂಡಾ ಅನ್ನ, ಸಾರು ಇತ್ಯಾದಿ ಪದಾರ್ಥಗಳನ್ನು ವಿತರಿಸಿದರು.
ಆಸೀಫ್ ಆಪತ್ಭಾಂದವ, ನೀತಾ ಪ್ರಭು, ಯಾದವ್ ಪೂಜಾರಿ ಕಾಪು, ಪ್ರಶಾಂತ್ ಪೂಜಾರಿ ಕಾಪು, ಶಾಹಿಲ್ ಶೈನ್ ಮೂಲ್ಕಿ, ಶಾದ್ ಮಾನಲ್, ಜೀವನ್ ಮಲ್ಲಾರ್ ಮೊದಲಾದವರು ಮಾಸ್ಕ್, ಸ್ಯಾನಿಟೈಸರ್ ಗಳನ್ನು ಕೂಡಾ ವಿತರಿಸಿದರು.
ವಲಸೆ ಬಂದಿದ್ದವರನ್ನು ಊರಿಗೆ ತಲುಪಿಸುವ ಮಹತ್ಕಾರ್ಯಕ್ಕೆ ಕಾಪು ಪುರಸಭೆಯ ಅಧ್ಯಕ್ಷ ಅನಿಲ್ ಕುಮಾರ್, ಕಾಪು ಪೊಲೀಸ್ ಠಾಣಾಧಿಕಾರಿ ಎಸ್. ಐ ರಾಘವೇಂದ್ರ ಸಿ., ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ, ಹರೀಶ್ ಕಿನ್ನಿಗೋಳಿ, ಗೋವರ್ಧನ್ ಶೇರಿಗಾರ್, ಅನಿತ್ ಶೆಟ್ಟಿ ಸಹಕರಿಸಿದರು.