ಎಂ.ಕೆ.ಹುಬ್ಬಳ್ಳಿ: ಪಟ್ಟಣದ ಬಸ್ ನಿಲ್ದಾಣದ ಅಂಗಡಿ ಬಳಿ ಲಾಕ್‌ಡೌನ್ ಮಧ್ಯೆ ಅನಾಥಳಂತೆ ಇದ್ದ ಅಜ್ಜಿಯೊಬ್ಬರನ್ನು ಮರಳಿ ಗೂಡು ಸೇರಿಸಲಾಗಿದೆ.
ಕಳೆದ ಎರಡ್ಮೂರು ದಿನಗಳಿಂದ ಪಟ್ಟಣದಲ್ಲಿ ಸಾರ್ವಜನಿಕರು ನೀಡುವ ಆಹಾರ ಸೇವಿಸುತ್ತ ಒಬ್ಬಂಟಿಯಾಗಿದ್ದ ಅಜ್ಜಿಯನ್ನು ಗಮನಿಸಿದ ಪಟ್ಟಣದ ರೈತಸೇವಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ತಂಡ ಆಕೆಯ ಕುಟುಂಬಸ್ಥರಿಗೆ ಮಾಹಿತಿ ಮುಟ್ಟಿಸಿ (ಊರಿಗೆ)ಮನೆಗೆ ಕಳಿಸುವ ಮಾನವೀಯ ಕಾರ್ಯ ಮಾಡಿದೆ.
ಅಜ್ಜಿಯ ಬಳಿ ತೆರಳಿ ಆಕೆಗೆ ಧೈರ್ಯ ತುಂಬಿ, ಚಹಾ-ಬಿಸ್ಕಿಟ್ ನೀಡಿ ಮಾತನಾಡಿಸಿದಾಗ, ತಾನು ಬೆಳಗಾವಿ ಬಳಿಯ ಕಾಕತಿ ಗ್ರಾಮದವಳು ಎಂದಿದ್ದಾಳೆ. ತಕ್ಷಣವೇ ಈ ವಿಷಯವನ್ನು ಪತ್ರಕರ್ತ ಶಿವಾನಂದ ವಿಭೂತಿಮಠ ಸ್ಥಳೀಯ ಪೊಲೀಸ್ ಠಾಣೆ, ಪಪಂ ಮುಖ್ಯಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ತಿಳಿಸಿದ್ದಾರೆ. ಸಂಸ್ಥೆಯ ಅಧ್ಯಕ್ಷ ದೊಡ್ಡಪ್ಪ ಗಣಾಚಾರಿ, ತಮ್ಮ ಪರಿಚಯಸ್ಥರಾದ ಕಾಕತಿ ಪೊಲೀಸ್ ಠಾಣೆ ಸಿಬ್ಬಂದಿಯೊಬ್ಬರಿಗೆ ಮಾಹಿತಿ ಮುಟ್ಟಿಸಿದಾಗ, ಅವರು ಅಲ್ಲಿನ ಸ್ಥಳೀಯ ವಾಟ್ಸ್ ಆ್ಯಪ್ ಗ್ರೂಪ್ ಗಳಿಗೆ ಅಜ್ಜಿ ಫೋಟೋ ಹಾಕಿ ಸ್ಥಳೀಯರಿಂದ ಮಾಹಿತಿ ಕಲೆ ಹಾಕಿದ್ದಾರೆ.
ಅಜ್ಜಿ ಅದೇ ಗ್ರಾಮದ ಅಕ್ಕವ್ವ ಬಡಗುಳಿ ಎಂಬುದು ಗೊತ್ತಾದಾಗ, ಕುಟುಂಬಸ್ಥರಿಗೆ ಅಜ್ಜಿ ಎಂ.ಕೆ.ಹುಬ್ಬಳ್ಳಿಯಲ್ಲಿ ಇರುವ ಬಗ್ಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಅಜ್ಜಿ ಸಂಬಂಧಿ ಸುನೀಲ ಬಡಗುಳಿ, ಅಜ್ಜಿಗೆ ಸಮಾಧಾನ ಹೇಳಿ ತಮ್ಮೂರಿಗೆ ಕರೆದ್ಯೊಯ್ದಿದ್ದಾರೆ.
ಅಜ್ಜಿ ನಾವಿಲ್ಲದ ವೇಳೆ ಮನೆಯಿಂದ ಬಂದಿದ್ದಾರೆ. ಅಜ್ಜಿ ಸ್ವಲ್ಪ ಮಾನಸಿಕ ಅಸ್ವಸ್ಥೆ ಇದ್ದಾರೆಂದು. ಈ ಹಿಂದೆಯೂ ಒಮ್ಮೆ ಮನೆಯಿಂದ ಹೊರಹೋಗಿದ್ದರೆಂದು ತಿಳಿಸಿದ್ದಾರೆ. ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ ಅವರು ಸುನೀಲ್ ಜತೆ ಮಾತನಾಡಿ ಅಜ್ಜಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅಜ್ಜಿಗೆ ತೊಂದರೆಯಾಗದಂತೆ ನೋಡಿಕೊಳ್ಳವಂತೆ ಸೂಚಿಸಿದರು.
ಸಾಮಾಜಿಕ ಕಾರ್ಯಕರ್ತರಾದ ವೀರಭದ್ರ ಕಲ್ಯಾಣಿ, ದಯಾನಂದ ಬಡಿಗೇರ, ಈರಯ್ಯ ವಿಭೂತಿಮಠ, ಬಸಯ್ಯ ಪೂಜೇರ, ಶಿವಕುಮಾರ ಗಣಾಚಾರಿ, ಅರುಣ ದೇಸಾಯಿ ಸೇರಿದಂತೆ ಪಟ್ಟಣದ ಹಲವರು ಈ ಸೇವಾ ಕಾರ್ಯದಲ್ಲಿ ಕೈಜೊಡಿಸಿದ್ದಾರೆ.