ಬೆಂಗಳೂರು: ಮೊಬೈಲ್ ಮತ್ತು ಇಂಟರ್‌ನೆಟ್‌ನ ಆವೃತ್ತಿಗಳ ಅಪ್‌ಡೇಟ್‌ನಲ್ಲಿರುವ ಉತ್ಸಾಹ ಮನುಷ್ಯತ್ವವನ್ನು ಅಪ್‌ಡೇಟ್‌ನಲ್ಲಿ ಆಗುತ್ತಿಲ್ಲ ಎಂದು ಅಧ್ಯಾತ್ಮ ಸದ್ಗುರು ಜಗ್ಗಿ ವಾಸುದೇವ ಬೇಸರ ವ್ಯಕ್ತಪಡಿಸಿದರು. ನಗರದಲ್ಲಿ ಸೋಮವಾರ ನೂರು ಹಾಸಿಗೆಗಳ ನೂತನ ಎಂ.ಎಸ್. ರಾಮಯ್ಯ ಇಂಡಿಕ್ ಸ್ಪೆಷಾಲಿಟಿ ಆಯುರ್ವೇದ ರಿಸ್ಟೋರೇಷನ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ನಮಗೆ ಅತ್ಯವಶ್ಯಕ. ಆದರೆ, ಜೀವನಮಟ್ಟ ಸುಧಾರಣೆಗೆ ಅದೊಂದು ಪೂರಕ ವ್ಯವಸ್ಥೆ ಅಷ್ಟೇ. ಇಂದು ಬಹುತೇಕ ಯುವಕರು ಸದಾ ಇಂಟರ್‌ನೆಟ್‌ನಲ್ಲಿ ತಡಕಾಡುತ್ತಿರುತ್ತಾರೆ. ಈ ಬಗ್ಗೆ ಕುತೂಹಲದಿಂದ ವಿದೇಶಿ ತಜ್ಞರೊಬ್ಬರೊಂದಿಗೆ ನಾನು ಚರ್ಚಿಸಿದಾಗ, “ಹೀಗೆ ಹುಡುಕಾಡುವವರ ಪೈಕಿ ಬಹುತೇಕರು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾರೆ’ ಎನ್ನುವುದು ತಿಳಿಯಿತು.
ಹಾಗಿದ್ದರೆ, ಈ ತಂತ್ರಜ್ಞಾನ ಇರುವುದು ಈ ಉದ್ದೇಶಕ್ಕಾಗಿಯೇ ಎಂಬ ಅಸಮಾಧಾನ ವ್ಯಕ್ತಪಡಿಸಿದರು. ಮನುಷ್ಯತ್ವ ಅಪ್‌ಡೇಟ್ ಮಾಡಿಕೊಳ್ಳಲು ಸಾಧ್ಯವಾದರೆ, ಉತ್ತಮ ಜೀವನ ನಮ್ಮದಾಗುತ್ತದೆ. ಇಲ್ಲವಾದರೆ, ಗುಹೆಯೊಳಗಿನ ನಿವಾಸಿ ಆಗುತ್ತೇವೆ ಎಂದು ಯುವಕರಿಗೆ ಕಿವಿಮಾತು ಹೇಳಿದರು.
ಗಡಿ ಮೀರಿದ ತಂತ್ರಜ್ಞಾನ: ಇಡೀ ಜಗತ್ತಿನೊಂದಿಗೆ ಸಂವಹನ ನಡೆಸಬಹುದಾದ ತಂತ್ರಜ್ಞಾನ ಇದೆ. ಈ ಮೂಲಕ ತಂತ್ರಜ್ಞಾನವು ರಾಜ್ಯ, ದೇಶ, ಜಾತಿ-ಧರ್ಮಗಳ ಗಡಿಯನ್ನು ಮೀರುವಂತೆ ಮಾಡಿದ್ದು, ಈ ನಿಟ್ಟಿನಲ್ಲಿ ಬಳಕೆ ಮಾಡಿಕೊಳ್ಳುವ ಹೊಣೆಗಾರಿಕೆ ಈಗಿನ ಪೀಳಿಗೆ ಮೇಲಿದೆ ಎಂದು ಹೇಳಿದರು.
ಕಲಿಕಾ ಮಾಹಿತಿಯು ತಂತ್ರಜ್ಞಾನದ ಮೂಲಕ ದೊರೆಯುತ್ತದೆ. ಆದರೆ, ಶಿಕ್ಷಿತರಿಂದಲೇ ಪರಿಸರ ನಾಶವಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಪದ್ಧತಿ ಬದಲಾಗಬೇಕಿದೆ. ಶಿಕ್ಷಣ ಅಂಕಿ-ಸಂಖ್ಯೆಗಳ ಆಟ ಆಗಬಾರದು ಎಂದು ಸೂಚ್ಯವಾಗಿ ಹೇಳಿದರು. ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್.ಜಯರಾಂ ಉಪಸ್ಥಿತರಿದ್ದರು.
ಗುರೂಜಿಗಳ ಶಾಪಿಂಗ್ ಬೇಡ: ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, “ಅನೇಕ ಗುರೂಜಿಗಳು ನಿಮ್ಮ ಮುಂದಿದ್ದಾರೆ. ಅವರ ಶಾಪಿಂಗ್‌ನಲ್ಲಿ ನೀವು ತೊಡಗಿಕೊಳ್ಳಬೇಡಿ. ಹಾಗೊಂದು ವೇಳೆ ಅವರ ಹಿಂದೆಬಿದ್ದರೆ, ನೀವು ಗುಂಪುಗಳಿಗೆ ಸೀಮಿತವಾಗುತ್ತೀರಿ. ಆದ್ದರಿಂದ ಅವರಲ್ಲಿನ ಒಳ್ಳೆಯ ಅಂಶಗಳನ್ನು ಪಡೆಯಿರಿ. ಜೀವನದಲ್ಲಿ ಅಳವಡಿಸಿಕೊಳ್ಳಿರಿ’ ಎಂದು ಸದ್ಗುರು ಜಗ್ಗಿವಾಸುದೇವ ಸಲಹೆ ಮಾಡಿದರು.