Advertisement

ಮಾನವತೆ ಮರೆತ ಅಪ್ಪ-ಅಮ್ಮ

11:19 AM Jan 28, 2018 | |

ಬೆಂಗಳೂರು: ಮಕ್ಕಳು ತಪ್ಪು ಮಾಡುವುದು ಸಹಜ. ಹುಡುಗಾಟದ ಬುದ್ಧಿಯ ಮಕ್ಕಳು ಹಾಗೇನಾದರೂ ತಪ್ಪು ಮಾಡಿದರೆ ಒಂದೆರಡು ಏಟು ಹಾಕುವುದು, ಜೋರಾಗಿ ಗದರಿ ಹೆದರಿಸುವುದು, ಇಲ್ಲವೆ ತೀರಾ ಹಟ ಮಾಡಿ, ಮಾತು ಕೇಳದೆ ಪುಂಡಾಟಕ್ಕೆ ಬಿದ್ದರೆ ಒಂದೆರಡು ಗಂಟೆ ರೂಮಿನೊಳಗೆ ಕೂಡಿ ಹಾಕುವುದು ಎಲ್ಲ ಅಪ್ಪ, ಅಮ್ಮಂದಿರು ಮಾಡುವ ಕೆಲಸ.

Advertisement

ಆದರೆ ಇಲ್ಲೊಬ್ಬ ವ್ಯಕ್ತಿ, ತನ್ನ ಹತ್ತು ವರ್ಷದ ಮಗನೊಂದಿಗೆ ತೀರಾ ಅಮಾನವೀಯವಾಗಿ ವರ್ತಿಸಿದ್ದಾನೆ. ಅದೆಂಥ ಅಮಾನವೀಯ, ಮೃಗೀಯ ವರ್ತನೆ ಎಂದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೀಕ್ಷಿಸಿದವರು, ಮರುಕವಿಲ್ಲದೆ ಮಗನ ಥಳಿಸಿದ ತಂದೆಗೆ ಬಾಯಿಗೆ ಬಂದಂತೆ ಬೈದಿದ್ದಾರೆ. ಅಮಾನವೀಯ ವರ್ತನೆಯನ್ನ ಖಂಡಿಸಿದ್ದಾರೆ. ತಂದೆಯನ್ನ ಜೈಲಿಗೆ ಹಾಕಿ ಎಂದೂ ಹಲವರು ಆಗ್ರಹಿಸಿದ್ದಾರೆ. ಅದರಂತೆ ಮಗನನ್ನು ಮನಸೋಯಿಚ್ಛೆ ಥಳಿಸಿದ ತಂದೆ ಈಗ ಪೊಲೀಸರ ವಶದಲ್ಲಿದ್ದಾನೆ.

ಅಂದಹಾಗೆ ತಂದೆ, ತನ್ನ ಹತ್ತರ ಹರೆಯದ ಮಗನನ್ನು ಮನಸೋಯಿಚ್ಛೆ ಥಳಿಸಿದ ಘಟನೆ ನಡೆದಿರುವುದ ನಗರದ ಕೆಂಗೇರಿಯಲ್ಲಿ. ಕೆಂಗೇರಿಯ ಗ್ಲೋಬಲ್‌ ವಿಲೇಜ್‌ ಸಮೀಪದ ನಿವಾಸಿ ಮಹೇಂದ್ರ (30) ಮಗನೊಂದಿಗೆ ಮೃಗೀಯವಾಗಿ ವರ್ತಿಸಿದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದಾನೆ. ಕಳೆದ ಹತ್ತು ವರ್ಷಗಳ ಹಿಂದೆ ಪತ್ನಿ ಅಶ್ವಿ‌ನಿ ಹಾಗೂ ಪುತ್ರ ಪುನೀತ್‌ (10) ಜತೆ ನಗರಕ್ಕೆ ಬಂದಿದ್ದ ಮಹೇಂದ್ರ, 8 ವರ್ಷಗಳಿಂದ ಫ್ಲಂಬರ್‌ ಕೆಲಸ ಮಾಡುತ್ತಿದ್ದಾನೆ. ಕೆಂಗೇರಿಯ ಗ್ಲೋಬಲ್‌ ವಿಲೇಜ್‌ ಸಮೀಪದ ಬಾಡಿಗೆ ಮನೆಯೊಂದರಲ್ಲಿ ಕುಟುಂಬ ನೆಲೆಸಿದೆ. 

ಮಗನೋ ಮಹಾನ್‌ ಸುಳ್ಳುಬುರುಕ: ಮೂರನೇ ತರಗತಿ ಓದುತ್ತಿರುವ ಪುನೀತ್‌ಗೆ, ವಿದ್ಯಾಭ್ಯಾಸದ ಮೇಲೆ ಆಸಕ್ತಿ ಕೊಂಚ ಕಡಿಮೆಯೇ. ಹೀಗಾಗಿ ಹೋಮ್‌ ವರ್ಕ್‌, ಶಾಲೆಯಲ್ಲಿ ಮಾಡುವ ಪಾಠ ಹಾಗೂ ಇತರ ಶೈಕ್ಷಣಿಕ ವಿಷಯಗಳಿಗೆ ಸಂಬಂಧಿಸಿದಂತೆ ಅಪ್ಪ, ಅಮ್ಮನೆದುರು ಬರೀ ಸುಳ್ಳು ಹೇಳುತ್ತಿದ್ದ. ಕೆಲವೊಮ್ಮೆ ಸ್ಕೂಲ್‌ ಡೈರಿಯಲ್ಲಿ ಹೋಮ್‌ ವರ್ಕ್‌ ಏನೆಂದು ಬರೆದ ಹಾಳೆಯನ್ನೇ ಕಿತ್ತೆಸೆದು,

“ಇವತ್ತು ಏನೂ ಹೋಮ್‌ ವರ್ಕ್‌ ಕೊಟ್ಟಿಲ್ಲ’ ಎಂದು ಸುಳ್ಳು ಹೇಳಿ, ಆತರಾಮಾಗಿರುತ್ತಿದ್ದ. ಇದರಿಂದ ಆಕ್ರೋಶಗೊಂಡ ಮಹೇಂದ್ರ, ಮಗನನ್ನು ಮನಬಂದಂತೆ ಬೆಲ್ಟ್ನಿಂದ ಹೊಡೆದು, ನಾಲ್ಕಾರು ಬಾರಿ ಮಂಚದ ಮೇಲೆ ಎತ್ತಿ ಬಿಸಾಕಿ, ಕಾಲಿನಿಂದ ಒದ್ದು, ತುಳಿದಿದ್ದ. ಒಂದೆಡೆ ಅಪ್ಪನ ರೌದ್ರಾವತಾರದಿಂದ ಬಿದ್ದ ಪೆಟ್ಟುಗಳ ನೋವು ತಾಳದೆ ಬಾಲಕ ಬೊಬ್ಬೆ ಹೊಡೆದು ಅಳುತ್ತಿದ್ದರೆ, ಅತ್ತ ಆತನ ತಾಯಿ ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಳು. ಪ್ರಕರಣ ನಡೆದು ಈಗ್ಗೆ ಒಂದೂವರೆ ತಿಂಗಳಾಗಿದೆ.

Advertisement

ಮೊಬೈಲ್‌ ಕೆಟ್ಟಾಗ ಗುಟ್ಟು ರಟ್ಟಾಯ್ತು!: ಇತ್ತೀಚೆಗೆ ಅಶ್ವಿ‌ನಿ ಅವರ ಮೊಬೈಲ್‌ ಕೆಟ್ಟುಹೋಗಿದ್ದು, ಅದನ್ನು ಮಹೇಂದ್ರನೇ ತೆಗೆದುಕೊಂಡು ಹೋಗಿ ರಿಪೇರಿ ಮಾಡಲೆಂದು ಕೆಂಗೇರಿಯ ಮೊಬೈಲ್‌ ಶಾಪ್‌ ಒಂದಕ್ಕೆ ಕೊಟ್ಟುಬಂದಿದ್ದ. ಈ ವೇಳೆ ಮೊಬೈಲ್‌ನಲ್ಲಿ ಸೆರೆಯಾಗಿದ್ದ ಮಗನನ್ನು ಥಳಿಸುವ ವೀಡಿಯೋ ಕಂಡ ಮೊಬೈ;ಲ್‌ ರಿಪೇರಿ ಮಾಡುವ ಸಿಬ್ಬಂದಿ, ವೀಡಿಯೋವನ್ನು ತನ್ನ ಮೊಬೈಲ್‌ಗೆ ಕಳಿಸಿಕೊಂಡಿದ್ದಾನೆ.

ನಂತರ ವಾಟ್ಸ್‌ಆ್ಯಪ್‌ ಮೂಲಕ ತನ್ನೆಲ್ಲ ಸ್ನೇಹಿತರಿಗೆ ಶೇರ್‌ ಮಾಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಈ ವೀಡಿಯೋ ಫೇಸ್‌ಬುಕ್‌, ಟ್ವಿಟ್ಟರ್‌, ಯುಟೂಬ್‌ ಸೇರಿ ಎಲ್ಲ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ ವೈರಲ… ಆಗಿದೆ. ಕೆಂಗೇರಿ ವ್ಯಾಪ್ತಿಯಲ್ಲೇ ಈ ಪ್ರಕರಣ ನಡೆದಿದೆ ಎಂಬ ವಿಚಾರ ಜ.26ರಂದು  ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿದೆ.

ಕೂಡಲೇ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಕೆಂಗೇರಿ ಪೊಲೀಸರು, ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಬಾಲಕನ ಪೋಷಕರನ್ನು ಪತ್ತೆಹಚ್ಚಿ ಶನಿವಾರ ಮಹೇಂದ್ರನನ್ನು ಬಂಧಿಸಿದ್ದಾರೆ. ಸದ್ಯ ಬಾಲಕ ಪುನೀತ್‌ನನ್ನು ಬಾಸ್ಕೋ ಸಂಸ್ಥೆ ವಶಕ್ಕೆ ನೀಡಲಾಗಿದೆ. ಮಗುವಿಗೆ ಕೌನ್ಸೆಲಿಂಗ್‌ ನಡೆಸಲಾಗಿದೆ. ಮತ್ತೆ ಕಿರುಕುಳ ನೀಡುವುದಿಲ್ಲ ಎಂಬ ಮುಚ್ಚಳಿಕೆ ಬರೆದುಕೊಟ್ಟರೆ ಮಗುವನ್ನು ಪೋಷಕರ ವಶಕ್ಕೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ವೀಡಿಯೋದಲ್ಲೇನಿದೆ?: ಆ ವ್ಯಕ್ತಿ ತನ್ನ ಮಗನೊಂದಿಗೆ ವರ್ತಿಸಿರುವ ರೀತಿ ಕಂಡರೆ ಎಂಥವರಿಗೂ ಆತನ ಮೇಲೆ ಕೆಂಡದಂಥ ಕೋಪ ಬಾರದೆ ಇರದು. ಮೊದಲು ಬೆಲ್ಟ್ ಬಿಚ್ಚಿಕೊಂಡು ತನ್ನೆಲ್ಲಾ ಶಕ್ತಿ ಬಿಟ್ಟು ಆ ಚಿಕ್ಕ ಹುಡುಗನ ಮೈ, ಕೈಗೆ ಜೋರಾಗಿ ಬಾರಿಸುತ್ತಾನೆ. ಇಂಥ ಮೂರ್‍ನಾಲ್ಕು ಪೆಟ್ಟುಗಳನ್ನು ತಿಂದ ಹುಡುಗ ಜರ್ಜರಿತನಾಗುತ್ತಾನೆ. ನಿಂತಲ್ಲೇ ನಡುಗುತ್ತಾನೆ.

ಅಳುತ್ತಾನೆ. ಅಪ್ಪ ಹೊಡಿಬೇಡಪ್ಪ ಎಂದು ಗೋಳಾಡುತ್ತಾನೆ. ಆದರೆ ಆ ಅಪ್ಪನ ಕಲ್ಲು ಹೃದಯ ಕರಗುವುದಿಲ್ಲ. ಬದಲಿಗೆ ಮಗ ಅತ್ತಷ್ಟೂ ಆತನ ಕೋಪ ಮತ್ತಷ್ಟು ನೆತ್ತಿಗೇರುತ್ತದೆ. ಕೋಪದಲ್ಲಿ ಬೆಲ್ಟ್ ಬಿಸಾಡುವ ಆತ, ಮಗನನ್ನ ಅನಾಮತ್ತಾಗಿ ಮೇಲಕ್ಕೆತ್ತಿ ಮಂಚದ ಮೇಲೆ ಎಸೆಯುತ್ತಾನೆ. ಒಮ್ಮೆ ಎತ್ತಿ ಬಿಸಾಡಿದ ನಂತರವೂ ಆ ವ್ಯಕ್ತಿಯ ಕೋಪ ಇಳಿಯುವುದಿಲ್ಲ. ಆ ಅಮಾಯಕ ಮಗನನ್ನ ಮತ್ತೂಮ್ಮೆ ಮೇಲಕ್ಕೆತ್ತಿ ಎಸೆಯುತ್ತಾನೆ.

ಆಗಲೂ ಸಮಾಧಾನವಾಗುವುದಿಲ್ಲ. ತನ್ನ ಮೈಯಲ್ಲಿನ ಎಲ್ಲ ಶಕ್ತಿಯನ್ನ ಬಳಸಿ ಮತ್ತೆರಡು ಬಾರಿ ಮಗನನ್ನು ಮೇಲಕ್ಕೆತ್ತಿ ಮಂಚದ ಮೇಲೆ ಬಿಸಾಕುತ್ತಾನೆ. ನಂತರ ಕಾಲು ಹಿಡಿದು ಮಂಚದಿಂದ ಎಳೆದು ನೆಲದ ಮೇಲೆಸೆಯುತ್ತಾನೆ. ಅಷ್ಟೂ ಸಾಲದೆಂಬಂತೆ ನೆಲದ ಮೇಲೆ ಬಿದ್ದ ಮಗನಿಗೆ ಕಾಲಿಂದ ಒದೆಯುತ್ತಾನೆ. ಮಗ ತೆವಳಿಕೊಂಡು ಹೋಗುತ್ತಿದ್ದರೆ, ಆತನನ್ನು ಕಾಲಲ್ಲಿ ತುಳಿಯುತ್ತನೆ.

ತಂದೆ ಹೇಳುವುದೇನು?: “ನನ್ನ ಮಗ ಬರೀ ಸುಳ್ಳು ಹೇಳುತ್ತಿದ್ದ. ನನ್ನ ಮಾತು ಕೇಳುತ್ತಿರಲಿಲ್ಲ. ಶಾಲೆಗೆ ಹೋಗಲು ಹಠ ಮಾಡುತ್ತಿದ್ದ. ಇದರಿಂದ ಕೋಪಗೊಂಡು ಆತನಿಗೆ ಮ್ಮೆ ಹೊಡೆದಿದ್ದೆ. ನಾನು ಹೀಗೆ ಹೊಡೆಯುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುವಂತೆ ನಾನೇ ನನ್ನ ಪತ್ನಿಗೆ ತಿಳಿಸಿದ್ದೆ. ಮುಂದೇನಾದರೂ ಪುನೀತ್‌ ಮತ್ತೆ ಹಠ ಮಾಡಿದರೆ, ಸುಳ್ಳು ಹೇಳಿದರೆ ಆ ವಿಡಿಯೋ ಅವನಿಗೆ ತೋರಿಸಿ ಹೆದರಿಸುವಂತೆ ಪತ್ನಿಗೆ ತಿಳಿಸಿದ್ದೆ. ಇದೇ ಉದ್ದೇಶದಿಂದಲೇ ಘಟನೆಯನ್ನು ಚಿತ್ರೀಕರಿಸಲು ಹೇಳಿದ್ದೆ,’ ಎಂದು ಮಹೇಂದ್ರ ವಿಚಾರಣೆ ವೇಳೆ ಹೇಳಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next