Advertisement

Humanitarian service: ಬಸ್‌ ಸಿಬಂದಿ ಸಮಯಪ್ರಜ್ಞೆಗೆ ಎಲ್ಲರ ಶಹಬ್ಬಾಸ್‌!

03:37 AM Aug 01, 2024 | Team Udayavani |

ಮಂಗಳೂರು: ಇವರು ಆಸ್ಪತ್ರೆಯ ವೈದ್ಯರಲ್ಲ, ಆ್ಯಂಬುಲೆನ್ಸ್‌ ಚಾಲಕರೂ ಅಲ್ಲ, ಆದರೂ ಬಸ್‌ನಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಹಠಾತ್‌ ಎದೆನೋವು ಕಾಣಿಸಿಕೊಂಡಾಗ ಅವರನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುವ ಮಾನವೀಯ ಕೆಲಸವನ್ನು ಮಾಡಿದ್ದಾರೆ, ಸಮಯಪ್ರಜ್ಞೆ ಮೆರೆದಿದ್ದಾರೆ. ಅವರ ಈ ಸಾಹ ಸಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Advertisement

ಇದು ಸಿಟಿ ಬಸ್‌ ಚಾಲಕ, ನಿರ್ವಾಹಕರಿಬ್ಬರ ಮಾನ ವೀಯ ಕಳ ಕಳಿ, ಸಮಯ ಪ್ರಜ್ಞೆಯ ಕಥೆ. ಕುಂಜತ್ತಬೈಲ್‌ನಿಂದ ಮಂಗಳಾದೇವಿಗೆ ಸಂಚರಿಸುವ ಕೃಷ್ಣಪ್ರಸಾದ್‌ ಎಂಬ 13ಎಫ್‌ ರೂಟ್‌ ಬಸ್‌ಗೆ ಕೋಡಿಕಲ್‌ ಕ್ರಾಸ್‌ ಬಳಿ ಖಾಸಗಿ ಕಾಲೇಜು ವಿದ್ಯಾರ್ಥಿಗಳು ಹತ್ತಿದ್ದಾರೆ. ಬಸ್‌ ಲೇಡಿಹಿಲ್‌ ಸಮೀಪಿಸುತ್ತಿದ್ದಂತೆ ಇದರಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಎದೆನೋವು ಕಾಣಿಸಿಕೊಂಡಿತ್ತು. ಈ ವಿಷಯವನ್ನು ಸ್ನೇಹಿತರು ನಿರ್ವಾಹಕರ ಗಮನಕ್ಕೆ ತಂದರು.

ಹೃದಯಾಘಾತದ ಮುನ್ಸೂಚನೆ ಸಿಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಬಸ್‌ ಅನ್ನು ಪ್ರಯಾಣಿಕರ ಸಮೇತ ನೇರ ಆಸ್ಪತ್ರೆಗೆ ಕೊಂಡೊಯ್ದು ಅವರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಸ್ಸಿನ ಚಾಲಕ, ನಿರ್ವಾಹಕರಾದ ಗಜೇಂದ್ರ ಕುಂದರ್‌, ಮಹೇಶ್‌ ಪೂಜಾರಿ, ಸುರೇಶ್‌ ಕುಮಾರ್‌ ಅವರು ಮಾನವೀಯತೆ ಮೆರೆದವರು.

ವಿದ್ಯಾರ್ಥಿನಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ
“ವಿದ್ಯಾರ್ಥಿನಿಗೆ ಎದೆ ನೋವು ಆಗುವ ವಿಷಯವನ್ನು ಸ್ನೇಹಿತರು ನಮಗೆ ತಿಳಿಸಿದರು. ಆ ವಿದ್ಯಾರ್ಥಿನಿ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಆಗ ಏನನ್ನೂ ಯೋಚನೆ ಮಾಡದೆ ಬಸ್‌ ಅನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ಯುವ ನಿರ್ಧಾರಕ್ಕೆ ಬಂದೆವು. ಲೇಡಿಹಿಲ್‌ನಿಂದ ಲಾಲ್‌ಬಾಗ್‌, ಬಳ್ಳಾಲ್‌ಬಾಗ್‌, ಪಿವಿಎಸ್‌, ಜ್ಯೋತಿ ಮಾರ್ಗವಾಗಿ ಕಂಕನಾಡಿ ಆಸ್ಪತ್ರೆಗೆ ತೆರಳಿದೆವು. ಕೆಲವು ಕಡೆ ಸಿಗ್ನಲ್‌, ವಾಹನ, ಟ್ರಾಫಿಕ್‌ ಜಾಂ ಇತ್ತು. ಬಸ್‌ಗೆ ಯಾವುದೇ ಪ್ರಯಾಣಿಕರನ್ನು ಹತ್ತಿಸಲಿಲ್ಲ, ಇಳಿಸಲಿಲ್ಲ. ನೇರವಾಗಿ ಆರು ನಿಮಿಷದಲ್ಲಿ ಆಸ್ಪತ್ರೆಗೆ ತಲುಪಿದೆವು’ ಎನ್ನುತ್ತಾರೆ ನಿರ್ವಾಹ ಕ ಸುರೇಶ್‌ ಕುಮಾರ್‌.

ನಾನು ಸುಮಾರು 28 ವರ್ಷದಿಂದ ಬಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಈ ಹಿಂದೆಯೂ ಕೆಲವು ಬಾರಿ ಪ್ರಯಾಣಿಕರಿಗೆ ಇದೇ ರೀತಿ ಆರೋಗ್ಯ ಸಮಸ್ಯೆ ಕಂಡುಬಂದಿತ್ತು. ತತ್‌ಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಿದ್ದೆವು. ಬಸ್‌ನಲ್ಲಿ ಪ್ರಯಾಣಿಕರ ಜವಾಬ್ದಾರಿ ನಮ್ಮ ಮೇಲೂ ಇದ್ದು, ಆರೋಗ್ಯ ಸಮಸ್ಯೆಯ ವೇಳೆ ಯಾರಾದರೂ ಮಾನವೀಯತೆ ಮೆರೆಯಲೇಬೇಕು ಎನ್ನುತ್ತಾರೆ ಸುರೇಶ್‌.

Advertisement

ಮಾನವೀಯ ಸೇವೆಗೆ ಸಮ್ಮಾನ
ಬಸ್‌ ನಿರ್ವಾಹಕ, ಚಾಲಕರಿಗೆ ಅಭಿನಂದನೆಗಳ ಸುರಿಮಳೆ ಬರುತ್ತಿದೆ. ಮಂಗಳೂರು ಫ್ರೆಂಡ್ಸ್‌ ವತಿಯಿಂದ ಕುಂಜತ್ತಬೈಲ್‌ ನಲ್ಲಿ ಬುಧವಾರ ಸಮ್ಮಾನಿಸಲಾಯಿತು. ಚಂದ್ರಕಲಾ ಡಿ.ರಾವ್‌, ಚಂದ್ರಕಲಾ ಜೋಗಿ, ಕವಿತಾ ವಾಸು, ಮಮತ ಶೆಟ್ಟಿ, ಲೀಡಿಯ, ಮೀನ ಟೆಲ್ಲಿಸ್‌, ಚಂದ್ರಿಕಾ ರೈ, ಸುರೇಖಾ ಚಂದ್ರಹಾಸ್‌ ಉಳ್ಳಾಲ್‌, ಸುನಿತ ಲೋಬೋ, ಮಮತ ಶೆಟ್ಟಿ, ಸಿಂಥಿಯ ಮುಂತಾದವರು ಉಪಸ್ಥಿತರಿದ್ದರು. ಅದೇ ರೀತಿ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ ವತಿಯಿಂದಲೂ ಅಭಿನಂದಿಸಲಾಯಿತು.

ವಿದ್ಯಾರ್ಥಿನಿ ಆರೋಗ್ಯ ಸ್ಥಿರ
ಎದೆನೋವು ಕಾಣಿಸಿಕೊಂಡ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯ ಆರೋಗ್ಯ ಸ್ಥಿರವಾಗಿದೆ. ಆಸ್ಪತ್ರೆಗೆ ದಾಖಲಾದ ಕೂಡಲೇ ಅವರನ್ನು ವಿವಿಧ ಪರೀಕ್ಷೆಗೆ ಒಳಪಡಿಸಲಾಗಿತ್ತು. ಯಾವುದೇ ಸಮಸ್ಯೆ ಇಲ್ಲದ ಕಾರಣಕ್ಕೆ ಸದ್ಯ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next