ಹುಮನಾಬಾದ: ಹೈದ್ರಾಬಾದ ಕರ್ನಾಟಕದ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಪಟ್ಟಣದ ಶ್ರೀ ವೀರಭದ್ರೇಶ್ವರ ದೇವರ ಜಾತ್ರೆ ನಿಮಿತ್ತ ರವಿವಾರ ಅಗ್ನಿ ತುಳಿಯಲು ರಾಜ್ಯ ಸೇರಿದಂತೆ ನೆರೆಯ ರಾಜ್ಯಗಳ ಲಕ್ಷಾಂತರ ಭಕ್ತರು ಹರಿದು ಬಂದಿದ್ದರು.
ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ಭಕ್ತರು ಆಗಮಿಸಿ ಭಕ್ತಿ ಭಾವದಿಂದ ಅಗ್ನಿ ತುಳಿದರು. ಶನಿವಾರ ರಾತ್ರಿ 10 ಗಂಟೆಗೆ ದೇವರ ಪಲ್ಲಕ್ಕಿಯ ಮೆರವಣಿಗೆ ದೇವಸ್ಥಾನದಿಂದ ಅಗ್ನಿ ತುಳಿಯಲು ಹೊರಟು, ಪಟ್ಟಣದ ಪ್ರಮುಖ ಬೀದಿಗಳ ಮೂಲಕ ರವಿವಾರ ಬೆಳಗ್ಗೆ 7 ಗಂಟೆಗೆ ಅಗ್ನಿ ಕುಂಡಕ್ಕೆ ಆಗಮಿಸಿತು.
ಮೊದಲಿಗೆ ದೇವರು ಅಗ್ನಿ ತುಳಿಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ದೇವರ ಮಂಚ ಅಗ್ನಿ ಕುಂಡಕ್ಕೆ ಪ್ರದಕ್ಷಣೆ ಹಾಕಿದ ಬಳಿಕ ಭಕ್ತರಿಗೆ ಆಗ್ನಿ ತುಳಿಯಲು ಅನುವು ಮಾಡಿಕೊಡಲಾಯಿತು. ದೇವರ ಪಲ್ಲಕ್ಕಿ ಮೆರವಣಿಗೆ ರವಿವಾರ ಬೆಳಗ್ಗೆ 12 ಗಂಟೆಗೆ ಮರಳಿ ದೇವಸ್ಥಾನಕ್ಕೆ ಸೇರಿತು.
ಒಂದು ಬಾರಿ ಅಗ್ನಿ ತುಳಿದರೆ ತಪ್ಪದೆ ಪ್ರತಿವರ್ಷ ಅಗ್ನಿ ತುಳಿಯಲೇ ಬೇಕಾದ ನಿಯಮ ಇರುವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೂಡ ಬೇರೆ ಊರುಗಳಲ್ಲಿ ವಾಸವಾಗಿದ್ದರೂ ಕೂಡ ಕುಟುಂಬ ಸಮೇತ ಜಾತ್ರೆಗೆ ಆಗಮಿಸಿ ದೇವರಿಗೆ ಶಾಲು ಹೊದಿಸುವುದು, ಸಕ್ಕರೆ ಪೇಡಾ ಸೇರಿದಂತೆ ಇತರೆ ನೈವೇದ್ಯಗಳನ್ನು ಅರ್ಪಿಸಿ ಭಕ್ತಿ ಸಮರ್ಪಿಸುವ ವಾಡಿಕೆ ಇದೆ. ಅದರಂತೆ ಭಕ್ತರು ಇಂದಿಗೂ ಆ ಪರಂಪರೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಭಕ್ತರು ಅಗ್ನಿ ಕುಂಡದ ಎದುರಿಗೆ ಗಂಟೆಗಳ ಕಾಲ ಸರದಿಯಲ್ಲಿ ನಿಂತು ವೀರಭದ್ರನಿಗೆ ಜಯಕಾರ ಹಾಕುತ್ತ ಮುಂದೆ ಸಾಗಿ ಅಗ್ನಿ ತುಳಿದು ಭಕ್ತಿಭಾವ ಮೆರೆದರು. ಪ್ರತಿವರ್ಷ ಅಗ್ನಿ ಕುಂಡದಿಂದ ಕಲ್ಲೂರ ರಸ್ತೆವರೆಗೆ ಭಕ್ತಾದಿಗಳು ಅಗ್ನಿ ತುಳಿಯಲು ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ, ಇದೀಗ ಅಗ್ನಿ ಕುಂಡ ದೊಡ್ಡದಾಗಿರುವ ಹಿನ್ನೆಲೆಯಲ್ಲಿ ಹೆಚ್ಚು ಜನರು ಒಂದೇ ಬಾರಿಗೆ ಅಗ್ನಿ ತುಳಿದರು. ಜಿಲ್ಲೆಯ ಕೆಲ ಗ್ರಾಮಗಳ ಭಕ್ತಾದಿಗಳು ಕಾಲು ನಡುಗೆಯಲ್ಲಿ ಆಗಮಿಸಿ ಅಗ್ನಿ ತುಳಿದು ದೇವರ ದರ್ಶನ ಪಡೆದರು.
ಭಕ್ತರಿಗೆ ಅನ್ನದಾಸೋಹ: ಪಟ್ಟಣದ ವಿವಿಧ ಸರ್ಕಾರಿ ಇಲಾಖೆಗಳು, ಪಟ್ಟಣದ ಗಣ್ಯ ವ್ಯಕ್ತಿಗಳು, ಸಂಘ ಸಂಸ್ಥೆಯವರು, ಯುವ ಸಮೋಹದವರು, ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಅನ್ನದಾಸೊಹದ ವ್ಯವಸ್ಥೆ ಮಾಡಿರುವುದು ವಿಶೇಷವಾಗಿತ್ತು.
ಪಟ್ಟಣದ ಪ್ರವಾಸಿ ಮಂದಿರ ಪಂಚಾಯತ ರಾಜ್ ಇಲಾಖೆ, ಎಪಿಎಂಸಿ ಹತ್ತಿರ, ಪೊಲೀಸ್ ಠಾಣೆ ಎದುರಿಗೆ, ಉದ್ಯಮಿ ದತ್ತಕುಮಾರ ಚಿದ್ರಿ ಅಂಗಡಿ ಹತ್ತಿರ, ಸರ್ದಾರ ಪಟೇಲ ವೃತ್ತ, ಬಾಲಾಜಿ ವೃತ್ತ, ಜೇರಪೆಟ ಬಡಾವಣೆ, ಕಲ್ಲೂರ ರಸ್ತೆ, ಅರಣ್ಯ ಇಲಾಖೆ ಪ್ರಾಂಗಣ, ಜೂನಿಯರ್ ಕಾಲೇಜು ಮೈದಾನ, ಪಂಚಾಯತ ರಾಜ್ ಇಲಾಖೆ ಎದುರಿಗೆ ಸೇರಿದಂತೆ ಇತರೆ ವಾರ್ಡ್‌ಗಳಲ್ಲಿಯೂ ಅನ್ನದಾಸೊಹ ನಡೆಯಿತು. ಬಂದ ಭಕ್ತಾದಿಗಳಿಗೆ ಅನ್ನ, ಕಿಚಡಿ ಚಟ್ನಿ, ಭಜ್ಜಿ, ಜೋಳದ ರೊಟ್ಟಿ, ಸಜ್ಜ ರೊಟ್ಟಿ, ಉಪ್ಪಿಟ್ಟು, ಸೀರಾ ಸೇರಿದಂತೆ ಕುಡಿಯುವ ನೀರು, ಚಹಾ ವ್ಯವಸ್ಥೆ ಕೂಡ ಮಾಡಲಾಗಿತ್ತು. ಜಾತ್ರೆಗೆ ಆಗಮಿಸಿದ ಲಕ್ಷಾಂತರ ಜನರು ಪ್ರಸಾದ ಸ್ವೀಕರಿಸಿ ದಾಸೋಹಿಗಳಿಗೆ ಹರಸಿದರು.