ಹುಮನಾಬಾದ: ಪಟ್ಟಣದ ಆರ್‌ಟಿಒ ಚೆಕ್‌ಪೊಸ್ಟ್ ಬಳಿ 5 ವರ್ಷಗಳ ಹಿಂದೆ ನಿರ್ಮಿಸಿದ್ದ ಪರಿಶಿಷ್ಟ ವರ್ಗದ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿ ವಸತಿ ನಿಲಯ ಬಳಕೆ ಇಲ್ಲದೇ ಪಾಳುಬಿದ್ದಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಬೇಡಿಕೆ ಪರಿಗಣಿಸಿ ಕ್ಷೇತ್ರದ ಶಾಸಕ ರಾಜಶೇಖರ ಬಿ.ಪಾಟೀಲ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ತಂದ ಅನುದಾನದಲ್ಲಿ 50 ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಕಟ್ಟಡ ನಿರ್ಮಿಸಿ ಕಟ್ಟಡವನ್ನು ಅವರೇ ಉದ್ಘಾಟಿಸಿದ್ದರು.
Advertisement
10 ಕೊಠಡಿ, ಸ್ನಾನದ ಕೋಣೆ, ಶೌಚಾಲಯ, ಅಡುಗೆ ಕೋಣೆ, ಆಹಾರ ಸಾಮಗ್ರಿ ದಾಸ್ತಾನು ಕೋಣೆ, ವಸತಿ ನಿಲಯ ಮೇಲ್ವಿಚಾರಕ ಕೊಠಡಿ ಸೇರಿ 12ಕ್ಕೂ ಅಧಿಕ ಕೋಣೆಗಳಿವೆ. ಪ್ರಾಂಗಣದಲ್ಲಿ ಬಟ್ಟೆ ಸ್ವಚ್ಛಗೊಳಿಸುವ ಬಂಡೆಗಳನ್ನು ಅಳವಡಿಸಲಾಗಿದೆ. ಉದ್ಘಾಟನೆಯಾದ ಆರಂಭದಲ್ಲಿ ಕೆಲ ತಿಂಗಳ ಕಾಲ ಮಾತ್ರ ಇದು ಸಮರ್ಪಕ ಬಳಕೆಯಲ್ಲಿತ್ತು. ತದನಂತರ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಿ ಬರುವುದು ಕಷ್ಟಸಾಧ್ಯವಾದ ಕಾರಣ ಈ ವಿದ್ಯಾರ್ಥಿಗಳಿಗೆ ಹುಮನಾಬಾದ ವಾಂಜ್ರಿ ಬಡಾವಣೆಯಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ.
Related Articles
Advertisement
ದಾಖಲೆಗಳೆಲ್ಲ ಚೆಲ್ಲಾಪಿಲ್ಲಿ: ವಸತಿ ನಿಲಯ ಮೇಲ್ವಿಚಾರಕ ಕೊಠಡಿಯಲ್ಲಿರುವ ಅತ್ಯಂತ ಮಹತ್ವದ ಅಲಮಾರಾ ಬಾಗಿಲು ತೆರೆದಿದ್ದು, ದಾಖಲೆಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ವಿದ್ಯಾರ್ಥಿಗಳು ಓದುವ ಇನ್ನೂ ಮೊದಲಾದ ಕೊಠಡಿಗಳೆಲ್ಲೆಲ್ಲ ಕಸ ತುಂಬಿದೆ. ಮೇಲ್ವಿಚಾರಕರ ಕೋಣೆ ಸೇರಿದಂತೆ ಯಾವೊಂದು ಕೊಠಡಿಗಳಿಗೂ ಬೀಗಗಳೇ ಇಲ್ಲವಾಗಿವೆ. ವಸತಿ ನಿಲಯದ ಪ್ರಾಂಗಣದಲ್ಲೆಡೆ ಗಿಡಗಂಟಿ ಬೆಳೆದಿವೆ. ಪ್ರವೇಶ ದ್ವಾರದ ಬಾಗಿಲಿಗೂ ಬೀಗ ಇಲ್ಲದ್ದರಿಂದ ಯಾರು ಯಾವಾಗ ಬೇಕಾದರೂ ಬರಬಹುದು, ಏನು ಬೇಕಾದರೂ ಮಾಡಿಕೊಂಡು ಹೋಗಬಹುದು ಎಂಬ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿ ತರಲಾದ ಕೋಟ್ಯಂತರ ರೂ. ಅನುದಾನದಲ್ಲಿ ನಿರ್ಮಿಸಿದ ವಿದ್ಯಾರ್ಥಿ ವಸತಿ ನಿಲಯ ಉದ್ದೇಶಿತ ಕೆಲಸಕ್ಕೆ ಬಳಕೆಯಾಗದೇ ಹಾಳುಕೊಂಪೆ ಆಗುತ್ತದೆ ಎಂದರೇ ಏನರ್ಥ. ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಬಳಕೆ ಆಗುವಂತೆ ನೋಡಿಕೊಳ್ಳಬೇಕು. ಸದ್ಯ ಬಳಕೆ ಆಗದೇ ಇದ್ದರೆ ಕನಿಷ್ಟ ಮೇಲಿಂದ ಮೇಲೆ ಸ್ವತ್ಛಗೊಳಿಸುವುದು, ಅಲ್ಲಿನ ಸಾಮಗ್ರಿ, ವಿವಿಧ ಉಪಕರಣಗಳು ಹಾಳಾಗದ ರೀತಿ ನೋಡಿಕೊಳ್ಳುವ ಕಾರ್ಯವಾದರೂ ನಡೆಯಬೇಕು ಎಂಬುದು ಸಾರ್ವಜನಿಕರ ಒತ್ತಾಸೆ.
ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ಷೇತ್ರದ ಶಾಸಕರು ವಿಶೇಷ ಪ್ರಯತ್ನದಿಂದ ಅನುದಾನ ತಂದು ಅಭಿವೃದ್ಧಿ ಪಡಿಸಿದ್ದು ಒಳ್ಳೆ ಸುದ್ದಿ. ಆದರೇ ಕೋಟ್ಯಂತರ ರೂ. ಅನುದಾನದಲ್ಲಿ ನಿರ್ಮಿಸಿದ ಕಟ್ಟಡ ಉದ್ದೇಶಿತ ಕೆಲಸಕ್ಕಾಗಿ ಬಳಕೆಯಾಗದಿದ್ದರೆ ಏನು ಪ್ರಯೋಜನ.
ನಿತ್ಯ ಶಾಲೆಗೆ ಬಂದು ಹೋಗಲು ದೂರವಾಗುವ ವಿಚಾರವನ್ನು ನಿರ್ಮಿಸುವುದಕ್ಕೂ ಮುನ್ನ ಏಕೆ ವಿವೇಚಿಸಲಿಲ್ಲ? ಶಾಸಕರ ದೃಷ್ಟಿಯಲ್ಲಿ ಅದು ಅಭಿವೃದ್ಧಿ ಆದರೂ ಬಡವರಿಗೆ ತಲುಪದ ಅಭಿವೃದ್ಧಿ ನಮ್ಮ ಪ್ರಕಾರ ಅಭಿವೃದ್ಧಿ ಹೆಸರಲ್ಲಿ ಸರ್ಕಾರದ ಕೋಟ್ಯಂತರ ಹಣ ಪೋಲಾಗಲು ಮೂಲ ಎಂದರೂ ತಪ್ಪಾಗದು. ದಕ್ಷ ಆಡಳತಕ್ಕೆ ಹೆಸರಾದ ಜಿಲ್ಲಾ ಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಹಣಾ ಅ ಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಬಳಕೆಗೆ ಯೋಗ ಸ್ಥಿತಿಗೆ ತರಬೇಕು.ಸೋಮನಾಥ ಪಾಟೀಲ,
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ಈ ವಿದ್ಯಾರ್ಥಿ ವಸತಿ ನಿಲಯ ನಿರ್ಮಿಸಲಾಗಿತ್ತು. ಆದರೆ ವಿದ್ಯಾರ್ಥಿಗಳು ನಿತ್ಯ ನಾಲ್ಕೈದು ಕಿ.ಮೀ. ಸುತ್ತಾಡಿ ಶಾಲೆಗೆ ಹೋಗಿ ಬರುವುದು ಕಷ್ಟಸಾಧ್ಯವಾಯಿತು. ಮಕ್ಕಳ ಬೇಡಿಕೆಗೆ ಅನುಗುಣವಾಗಿ ವಾಂಜ್ರಿ ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಅಧಿಕಾರಿಗಳು ಹೇಳುತ್ತಿದ್ದಾರೆ. ಇಲ್ಲಿಂದ ಮಕ್ಕಳು ಸ್ಥಳಾಂತರವಾದ ನಂತರದ ದಿನಗಳಿಂದ ಮೇಲ್ವಿಚಾರಣೆ ಮಾಡುವವರು ಯಾರೂ ಇಲ್ಲದ ಕಾರಣ ಪಾಳು ಬಿದ್ದಿರುವುದು ತಮ್ಮಿಂದ ಗಮನಕ್ಕೆ ಬಂದಿದೆ. ಯಾವುದಕ್ಕೂ ಕ್ಷೇತ್ರದ ಶಾಸಕರು ಮತ್ತು ಮೇಲಧಿಕಾರಿಗಳ ಮಾರ್ಗದರ್ಶನ ಪಡೆದು ಸಾಧ್ಯವಾದಷ್ಟು ಶೀಘ್ರ ಬಳಕೆಗೆ ಯೋಗ್ಯ ಸ್ಥಿತಿಗೆ ತರಲು ಪ್ರಾಮಾಣಿಕ ಯತ್ನಿಸಲಾಗುವುದು.
ವೈಜಪ್ಪ ಫುಲೆ, ತಾಪಂ ಇಒ