Advertisement

ಹುಮನಾಬಾದ ಪಟ್ಟಣಕ್ಕೆ ಶ್ರೀಗಳ ಭೇಟಿ ಅವಿಸ್ಮರಣೀಯ

03:45 PM Dec 30, 2019 | Team Udayavani |

ಹುಮನಾಬಾದ: ಉಡುಪಿ ಕೃಷ್ಣ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹುಮನಾಬಾದ ಪಟ್ಟಣಕ್ಕೆ ಭೇಟಿ ನೀಡಿದ ಆ ಪವಿತ್ರ ದಿನ ಐತಿಹಾಸಿಕ ದಾಖಲೆಯಾಗಿದ್ದು, ಭಕ್ತರ ಪಾಲಿಗೆ ಅದು ಅವಿಸ್ಮರಣೀಯವಾಗಿದೆ.

Advertisement

2005ರ ಸೆಪ್ಟೆಂಬರ್‌ 23 ಹುಮನಾಬಾದ ಪಟ್ಟಣದ ಜನರ ಪಾಲಿಗೆ ಅಚ್ಚಳಿಯದೇ ಉಳಿಯುವ ದಿನವಾಗಿದೆ. ಶ್ರೀಗಳ ಕಲ್ಯಾಣ ಕರ್ನಾಟಕ ಭೇಟಿ ಅತ್ಯಂತ ವಿರಳವಾದದ್ದು. ಅದರಲ್ಲೂ ಬೀದರ್‌ ಜಿಲ್ಲೆ ಭೇಟಿಯಂತೂ ಕಷ್ಟಸಾಧ್ಯವೆಂದೇ ಎಲ್ಲರೂ ಹೇಳಿದರೂ ಕೂಡ ಪಟ್ಟಣದ ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟರಾವ್‌ ಕುಲ್ಕರ್ಣಿ ಅವರ ಪ್ರಯತ್ನದಿಂದ ಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸಕಲರಿಗೂ ಶ್ರೀಗಳ ದರ್ಶನ ಭಾಗ್ಯ ಕಲ್ಪಿಸಿಕೊಟ್ಟ ಕೀರ್ತಿ ಕುಲಕರ್ಣಿ ಅವರಿಗೆ ಸಲ್ಲಬೇಕು.

ಪಕ್ಕದ ಮಹಾರಾಷ್ಟ್ರದ ಉಮ್ಮರ್ಗಾ ಪಟ್ಟಣದಲ್ಲಿ ಭಕ್ತರೊಬ್ಬರು ಕೃಷ್ಣ ಮಠಕ್ಕೆ ಭೂದಾನ ಮಾಡಿದ್ದ ಆ ಸಂದರ್ಭದಲ್ಲಿ ಶ್ರೀಗಳು ಶ್ರೀಮಠ ನಿರ್ಮಾಣದ ಭೂಮಿ ಪೂಜೆಗಾಗಿ ಅಲ್ಲಿಗೆ ತೆರಳಬೇಕಿತ್ತು. ವಿಷಯ ತಿಳಿದು ಬ್ರಾಹ್ಮಣ ಸಮಾಜದ ಅಧ್ಯಕ್ಷ ವೆಂಕಟರಾವ್‌ ಅವರು ವೇಗವಾಗಿ ಸಿದ್ಧತೆ ಮಾಡಿಕೊಂಡು ಹುಮನಾಬಾದ್‌ಗೆ ಬರಲೇಬೇಕೆಂದು ವಿಶ್ವೇಶ ತೀರ್ಥ ಶ್ರೀಗಳೊಂದಿಗೆ ಹಠ ತೊಟ್ಟರು. ಇಲ್ಲದಿದ್ದರೆ ಹುಮನಾಬಾದ ಜನತೆಗೆ ಅವರ ದರ್ಶನ ಭಾಗ್ಯ ಕಷ್ಟಸಾಧ್ಯವಾಗಿರುತ್ತಿತ್ತು. ಬಂದ ನಂತರ ಭಕ್ತರಿಗೆ ಅನುಭವಿಸಿದ ಪರಮಾನಂದ ಅವಿಸ್ಮರಣೀಯವಾದದ್ದು.

ಬೈಕ್‌ ರ್ಯಾಲಿಯ ಭವ್ಯಸ್ವಾಗತ: ಪಟ್ಟಣದ ಆರ್‌ಟಿಒ ಚೆಕ್‌ಪೊಸ್ಟ್‌ ಸಮೀಪ ಪೂಜ್ಯರ ಆಗಮನ ಆಗುತ್ತಿದ್ದ ವಿಷಯ ತಿಳಿದ ನೂರಾರು ಭಕ್ತರು ಸ್ವಯಂ ಪ್ರೇರಣೆರಣೆಯಿಂದ ಬೈಕ್‌ನಲ್ಲಿ ತೆರಳಿ ಶ್ರೀಗಳ ಸ್ವಾಗತಕ್ಕೆ ಕಾದುನಿಂರು ಚೆಕ್‌ಪೋಸ್ಟ್‌ ನಿಂದ ಬಾಲಾಜಿ ದೇವಸ್ಥಾನದ ವರೆಗೆ ರ್ಯಾಲಿಯಲ್ಲಿ ಸ್ವಾಗತಿಸಿದರು. ಅಲ್ಲಿಂದ ಭಕ್ತರು ದಂಪತಿ ಸಮೇತ ಕೈ ಸರಪಳಿ ಮಾಡಿಕೊಂಡು ಬಹಿರಂಗ ಸಭೆ ನಡೆಯಬೇಕಿದ್ದ ನಗರೇಶ್ವರ ಕಲ್ಯಾಣ ಮಂಟಪದ ವರೆಗೆ ಜೈಘೋಷ ಹೇಳುತ್ತ ವೇದಿಕೆಗೆ ಕರೆದೊಯ್ದಿದ್ದರು.

ಶ್ರೀಗಳ ಆಗಮನದ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಮಾಜ ಹಾಗೂ ಸಕಲ ಸಮಾಜದವರು ಮಾರ್ಗದುದ್ದಕ್ಕೂ ಅಲ್ಪೋಪಹಾರ ಹಾಗೂ ಪಾನೀಯ ವ್ಯವಸ್ಥೆ ಮಾಡಿದ್ದು, ಶ್ರೀಗಳ ದರ್ಶನಕ್ಕಾಗಿ ಕಾದುನಿಂತ ಭಕ್ತರ ದಣಿವಾರಿಸಲು ನೆರವಾಗಿತ್ತು. ಸರಳ ಸಜ್ಜಿನಿಕೆಗೆ ಹೆಸರಾದ ಶ್ರೀಗಳು ಪಾದಪೂಜೆ ನೆರವೇರಿಸಿದ ನಂತರ ವೇದಿಕೆಯಲ್ಲಿ ಸರಳವಾಗಿ ಸನ್ಮಾನಿಸಿಕೊಂಡು, ಹೊಗಳಿಕೆಗೆ ಭಕ್ತರಿಗೆ ಅವಕಾಶ ಕಲ್ಪಿಸದೇ ನೇರವಾಗಿ ಪ್ರವಚನ ಆರಂಭಿಸಿದ್ದು, ಭಕ್ತರ ಪ್ರೀತಿ-ವಿಶ್ವಾಸ ಇಮ್ಮಡಿಗೊಳ್ಳಲು ಕಾರಣವಾಗಿತ್ತು.

Advertisement

ದರ್ಶನದಿಂದ ಕಣ್ಣು ತುಂಬಿಕೊಂಡರೆ, ಅವರ ಆಧ್ಯಾತ್ಮ ಪ್ರವಚನದಿಂದ ಮನತುಂಬಿ ಸಂತೃಪ್ತಿ ವ್ಯಕ್ತಪಡಿಸಿದ್ದು ಗಮನಾರ್ಹವಾಗಿತ್ತು. ಅಂದಿನ ಜಿಲ್ಲಾ ಸಹಕಾರ ಬ್ಯಾಂಕ್‌ ಉಪಾಧ್ಯಕ್ಷರಾಗಿದ್ದ ದಿ.ನಾರಾಯಣರಾವ್‌ ಮನ್ನಳ್ಳಿ, ಗಣ್ಯರಾದ ಸುಧಾಕರರಾವ್‌ ಕುಲಕರ್ಣಿ, ಅಶೋಕ ಗೊಂಬಿ, ಮಾಣಿಕರಾವ್‌ ವಿ.ಮದರ್ಕಿ, ಕೆ.ಪ್ರಭಾಕರ, ದಿನಕರ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಕಿಶೋರ ಕುಲಕರ್ಣಿ, ಕಾಂತು ಕುಲಕರ್ಣಿ, ಕೇಶವರಾವ್‌ ತಳಘಟಕರ್‌, ಅಶೋಕ ಸಿತಾಳ್ಗೇರಿ, ಎ.ಕೆ.ಜೋಷಿ, ಎ.ಜಿ.ಹಿರೇಮಠ ಇನ್ನಿತರರು ಭಕ್ತಿಸೇವೆಯಲ್ಲಿ ಭಾಗಿಯಾಗಿದ್ದರು.

ಆಗ ನಾನಿನ್ನೂ ಚಿಕ್ಕವನಿದ್ದೆ. ನಮ್ಮ ತಾಯಿ ತ್ರೀವೇಣಿ, ತಂದೆ ರಾಮರಾವ್‌ ಕುಲಕರ್ಣಿ ಅವರು ಆಗಾಗ ಉಡುಪಿಗೆ ಹೋಗುತ್ತಿದ್ದ ಹಿನ್ನೆಲೆಯಲ್ಲಿ ಶ್ರೀಗಳ ಜೊತೆಗೆ ಉತ್ತಮ ಬಾಂಧವ್ಯವಿತ್ತು. ಅದೇ ಕಾರಣಕ್ಕೋ ಏನೋ ಗೊತ್ತಿಲ್ಲ ನನಗೆ ಈಗಲೂ ನೆನಪಿದೆ. ಒಂದೊಮ್ಮೆ ಹೈದ್ರಾಬಾದ್‌ಗೆ ತೆರಳುವ ಮಾರ್ಗಮಧ್ಯ ನಮ್ಮ ಮನೆಯಲ್ಲೇ ರಾತ್ರಿ ವಾಸ್ತವ್ಯ ಮಾಡಿದ್ದರು. ಅವರು ಹುಮನಾಬಾದಗೆ ಬರುವ ಮುನ್ನ ಮತ್ತು ನಂತರ ಸಾಕಷ್ಟು ಬಾರಿ ಅವರನ್ನು ಭೇಟಿಯಾಗಿದ್ದೆ. ನನ್ನೊಂದಿಗೆ ಅತ್ಯಂತ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅವರು ಹರಿಪಾದ ಸೇರಿರುವುದರಿಂದ ಹಿಂದೂ ಸಮಾಜ ಒಂದು ಬಹುದೊಡ್ಡ ಶಕ್ತಿಯನ್ನು ಕಳೆದುಕೊಂಡಂತಾಗಿದೆ. ತುಂಬಾ ನೋವಾಗಿದೆ.
ಸುಧಾಕರರಾವ್‌ ಕುಲಕರ್ಣಿ

ನನಗಿನ್ನೂ ಆಗ ಕೇವಲ 33 ವರ್ಷ. ಸಮಾಜ ಸಂಘಟನೆ ಎಂದರೆ ನನಗೆ ಅತ್ಯಂತ ಅಚ್ಚುಮೆಚ್ಚು. ಈ ಭಾಗಕ್ಕೆ ಅಂಥ ಮಹಾತ್ಮರನ್ನು ಕರೆಸುವುದು ಕಷ್ಟಸಾಧ್ಯ ಎಂದು ಅನೇಕ ಹಿರಿಯರು ಹೇಳುತ್ತಿದ್ದರು. ಆ ಮಾತು ಕೇಳಿದಾಗಿಂದ ಒಂದಲ್ಲೊಂದು ದಿನ ಅವರನ್ನು ಕರೆಸಲೇಬೇಕೆಂದು ನಿರ್ಧರಿಸಿದ್ದೆ. ಮಹಾರಾಷ್ಟ್ರ ರಾಜ್ಯದ ಉಮ್ಮರ್ಗಕ್ಕೆ ಅವರು ಹೋಗುವ ಹೂಗುವ ವಿಷಯ ಗೊತ್ತಾಗುತ್ತಿದ್ದಂತೆ ಅವರ ಅನುಮತಿ ಪಡೆಯದೇ ಬ್ರಾಹ್ಮಣ ಸಮಾಜ ಹಾಗೂ ಸಕಲ ಕುಲಜರನ್ನು ಒಗ್ಗೂಡಿಸಿ, ಸಿದ್ಧತೆ ಮಾಡಿಕೊಂಡೆ. ನಂತರ ಶ್ರೀಗಳನ್ನು ಸಂಪರ್ಕಿಸಿದೆ. ನಾ ತೊಟ್ಟ ಹಠಕ್ಕೆ ಅವರು ನೀಡಿದ ಮಾನ್ಯತೆಯಿಂದ ಈ ಭಾಗದ ಭಕ್ತರಿಗೆ ದರ್ಶನ ಕಲ್ಪಿಸಿಕೊಟ್ಟ ಹೆಮ್ಮೆ ನನಗಿದೆ.
ವೆಂಕಟರಾವ್‌ ಕುಲಕರ್ಣಿ,
ಬ್ರಾಹ್ಮಣ ಸಮಾಜ ತಾಲೂಕು ಅಧ್ಯಕ್ಷರು

„ಶಶಿಕಾಂತ ಕೆ.ಭಗೋಜಿ

Advertisement

Udayavani is now on Telegram. Click here to join our channel and stay updated with the latest news.

Next