Advertisement

ಸರ್ಕಾರಿ ಆಸ್ಪತ್ರೆ ಪ್ರಾಂಗಣದಲ್ಲಿ ವಾಹನ ನಿಲುಗಡೆಗೆ ಬ್ರೇಕ್‌

10:14 AM Jul 25, 2019 | Naveen |

ಹುಮನಾಬಾದ: ಪಟ್ಟಣದ ಸರ್ಕಾರಿ ಆಸ್ಪತ್ರೆ ಪ್ರಾಂಗಣದಲ್ಲಿ ವಾಹನಗಳ ಅನಧಿಕೃತವಾಗಿ ನಿಲುಗಡೆಗೆ ಬ್ರೇಕ್‌ ಹಾಕಲಾಗಿದೆ. ಅಷ್ಟುಕ್ಕೂ ನಿಯಮ ಮೀರಿ ಯಾರಾದರೂ ನಿಲ್ಲಿಸಿದರೆ ಪೊಲೀಸರು ಜಪ್ತಿ ಮಾಡಿ ದಂಡ ಹಾಕುತ್ತಿರುವ ಕಾರಣ ಶೇ.90ರಷ್ಟು ವಾಹನ ನಿಲುಗಡೆ ಸದ್ಯ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಆಸ್ಪತೆ ಸಿಬ್ಬಂದಿ ನೆಮ್ಮದಿಯಿಂದ ಕೆಲಸ ಮಾಡಲು ಅನುಕೂಲವಾಗಿದೆ.

Advertisement

ಆಸ್ಪತ್ರೆಗೆ ರೋಗಿಗಳನ್ನು ವಾಹನದಲ್ಲಿ ಕರೆದುಕೊಂಡು ಬರುವುದು ಸಹಜ. ಅದೇ ಉದ್ದೇಶಕ್ಕಾಗಿ ಬಂದರೇ ಈ ಸಮಸ್ಯೆ ಉದ್ಭವ ಆಗುತ್ತಿರಲಿಲ್ಲ. ಆದರೆ ಇಲ್ಲಿ ನಿಲ್ಲುವ ವಾಹನಗಳು ಮತ್ತು ರೋಗಿಗಳಿಗೆ ಯಾವುದೇ ಸಂಬಂಧ ಇಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿತ್ತು. ವೈಯಕ್ತಿಕ ಕೆಲಸಕ್ಕೆ ಊರಿಗೆ ಹೋಗುವವರೆಲ್ಲ ತಮ್ಮ ವಾಹನವನ್ನು ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದರೆ ಶುಲ್ಕ ಪಾವತಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಆಸ್ಪತ್ರೆಯಲ್ಲಿ ನಿಲ್ಲಿಸುತ್ತಿದ್ದರು. ಕಾರು, ಬೈಕ್‌ ಸೇರಿದಂತೆ ವಿವಿಧ ವಾಹನಗಳನ್ನು ಎಲ್ಲಿ ಬೇಕಲ್ಲಿ ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿದ್ದರು. ಜತೆಯಲ್ಲಿ ಅದೆಷ್ಟೋ ಕಾರು ಮತ್ತಿತರ ವಾಹನಗಳು ರಾತ್ರಿಹೊತ್ತು ಅಲ್ಲೇ ನಿಲ್ಲುತ್ತಿದ್ದವು. ಇದರಿಂದ ತುರ್ತು ಚಿಕಿತ್ಸೆಗೆ ಬರುವ ರೋಗಿಗಳು ಮತ್ತು ಸಿಬ್ಬಂದಿಗೆ ತೀವ್ರ ತೊಂದರೆಯಾಗುತ್ತಿತ್ತು. ಈ ಹಿಂದೆ ಅದೆಷ್ಟೋ ಬಾರಿ ಮನವಿ ಮಾಡಿದರೂ ಪ್ರ್ರಯೋಜನವಾಗಿರಲಿಲ್ಲ. ಸಮಸ್ಯೆ ಇತ್ಯರ್ಥಕ್ಕಾಗಿ ಸಿಪಿಐ ಜೆ.ಎಸ್‌.ನ್ಯಾಮಗೌಡರ, ಸಂಚಾರ ಪಿಎಸ್‌ಐ ಬಸವರಾಜ ಚಿತ್ತಕೋಟಾ ಹಾಗೂ ಸಿಬ್ಬಂದಿ ಸಹಯೋಗದೊಂದಿಗೆ ಈಚೆಗೆ ಕೈಗೊಂಡ ಕಾರ್ಯಾಚರಣೆ ಪರಿಣಾಮ ಆಸ್ಪತ್ರೆ ಪಾಂಗಣದಲ್ಲಿ ನಿಲ್ಲುವ ಬೈಕ್‌ ಮತ್ತು ಕಾರಗಳನ್ನು ಜಪ್ತಿ ಮಾಡಿ ದಂಡ ವಿಧಿಸಿದ್ದಾರೆ. ಹಾಗಾಗಿ ಅನಧಿಕೃತ ವಾಹನಗಳ ನಿಲುಗಡೆ ಶೇ.95ರಷ್ಟು ಕಡಿಮೆಯಾಗಿದೆ. ಇದರಿಂದ ಸಿಬ್ಬಂದಿ ನೆಮ್ಮದಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ.

ಕಾರು, ಬೈಕ್‌ ನಿಲ್ಲಿಸುವವರ ವಿರೋಧಿಗಳು ಖಂಡಿತ ಅಲ್ಲ. ಸಾರ್ವಜನಿಕ ಆಸ್ಪತ್ರೆ ಆಗಿರುವುದರಿಂದ ಅದರಲ್ಲೂ ವಿಶೇಷವಾಗಿ ಆಸ್ಪತ್ರೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಮೇಲಿಂದ ಮೇಲೆ ಸಂಭವಿಸುವ ರಸ್ತೆ ಅಪಘಾತ ಇತ್ಯಾದಿ ಕಾರಣ ರೋಗಿಗಳ ತುರ್ತು ಚಿಕಿತ್ಸೆ ಕೈಗೊಳ್ಳಬೇಕಾಗುತ್ತದೆ. ಆ ವೇಳೆ ರೋಗಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಆಗುವ ತೊಂದರೆ ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ಹಿತದೃಷ್ಟಿ ಇಟ್ಟುಕೊಂಡು ನಡೆಸುತ್ತಿರುವ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು.
ಡಾ| ನಾಗನಾಥ ಹುಲ್ಸೂರೆ
ಮುಖ್ಯ ಆರೋಗ್ಯ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next