Advertisement

ಹುಮನಾಬಾದ:ಯುಜಿಡಿ ಕಾಮಗಾರಿ ಮಣ್ಣು ಪಾಲು?

04:54 PM Feb 04, 2021 | Team Udayavani |

ಹುಮನಾಬಾದ: ಪಟ್ಟಣದಲ್ಲಿ ಬಹುಕೋಟಿ ವೆಚ್ಚದಲ್ಲಿ 2013ರಲ್ಲಿ ಆರಂಭಗೊಂಡ ಯುಜಿಡಿ (ಒಳಚರಂಡಿ) ಕಾಮಗಾರಿ ಇಂದಿಗೂ ಅಪೂರ್ಣವಿದ್ದರೂ ಪುರಸಭೆ
ತನ್ನ ಸುಪರ್ದಿಗೆ ಕಾಮಗಾರಿ ಹಸ್ತಾಂತರಿಸಿಕೊಳ್ಳಲು ಮುಂದಾಗಿದ್ದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ. ಹೀಗಾಗಿ ಬಹುಕೋಟಿ ಯೋಜನೆ ಮಣ್ಣು ಪಾಲಾಯಿತೇ ಎಂದು ಪುರಸಭೆ ಸದಸ್ಯರು ಅಧಿಕಾರಿಗಳಿಗೆ ಪ್ರಶ್ನಿಸುವಂತಾಗಿದೆ.

Advertisement

ಕಳೆದ 2013ರಲ್ಲಿ ಪಟ್ಟಣದ 19 ವಾರ್ಡ್‌ಗಳಲ್ಲಿ ಯುಜಿಡಿ (ಒಳ ಚರಂಡಿ) ಕಾಮಗಾರಿ ಕ್ರಿಯಾಯೋಜನೆ ರೂಪಿಸಿ ಸುಮಾರು 16.49 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭಗೊಂಡಿತ್ತು. ನಂತರದ ದಿನಗಳಲ್ಲಿ ಕೆಲ ವಾರ್ಡ್‌ಗಳಲ್ಲಿ ಕಾಮಗಾರಿಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮತ್ತೆ ಅಂದಾಜು 10 ಕೋಟಿ ಹೆಚ್ಚಿನ ಅನುದಾನದಲ್ಲಿ ಕಾಮಗಾರಿ ನಡೆದಿದೆ ಎಂದು ಸದಸ್ಯರು ತಿಳಿಸಿದ್ದು, ಒಟ್ಟಾರೆ ಸುಮಾರು 28 ಕೋಟಿಗೂ ಅಧಿಕ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ.

ಈವರೆಗೆ ಬಹುತೇಕ ಅನುದಾನ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಪಾವತಿಸಲಾಗಿದೆ ಎಂದು ಖುದ್ದು ಪುರಸಭೆ ಸದಸ್ಯರು ಹೇಳುತ್ತಿದ್ದಾರೆ. ಪುರಸಭೆ
ಮುಖ್ಯಾಧಿಕಾರಿಗಳು ಖುದ್ದು ಸ್ಥಳ ಪರಿಶೀಲಿಸಿ ಕಾಮಗಾರಿ ಬಗ್ಗೆ ತಿಳಿದು ಹಣ ಬಿಡುಗಡೆ ಮಾಡಿದ್ದಾರಾ? ಎಂಬ ಪ್ರಶ್ನೆಗೆ ಮುಖ್ಯಾಧಿಕಾರಿಗಳು ಉತ್ತರಿಸಬೇಕಿದೆ.

ಕಾಮಗಾರಿ ಮುನ್ನವೇ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ನಿರ್ಮಾಣವಾಗಿದ್ದವು. ನಂತರ ಯುಜಿಡಿ ಕಾಮಗಾರಿಗಾಗಿ ಸಿಸಿ ರಸ್ತೆಗಳನ್ನು ಅಗೆಯಲಾಗಿತ್ತು.
ಕೆಲ ವರ್ಷ ಪಟ್ಟಣದ ಬಹುತೇಕ ವಾರ್ಡ್‌ಗಳಲ್ಲಿ ಸಿಸಿ ರಸ್ತೆಗಳಿಗೆ ಜನರು ಛೀಮಾರಿ ಕೂಡ ಹಾಕಿದರು. ಕಾಮಗಾರಿಗೆ ಅಗೆದ ರಸ್ತೆಗಳನ್ನು ಖುದ್ದು ಗುತ್ತಿಗೆ
ಪಡೆದಿರುವ ಗುತ್ತೆದಾರರು ರಸ್ತೆ ಮರು ನಿರ್ಮಾಣ ಮಾಡಬೇಕಿತ್ತು. ಅಥವಾ ರಸ್ತೆ ದುರಸ್ತಿಗಾಗಿ ಪುರಸಭೆಗೆ ಅನುದಾನ ನೀಡಬೇಕಿತ್ತು. ಈ ಬಗ್ಗೆ ಯಾವುದೇ
ಮಾಹಿತಿ ಅ ಧಿಕಾರಿಗಳಿಂದ ಲಭ್ಯವಾಗಿಲ್ಲ. ಅಲ್ಲದೆ, ಗುತ್ತಿಗೆ ಪಡೆದ ವ್ಯಕ್ತಿಗಳೂ ಪಟ್ಟಣದಿಂದ ಜಾಗ ಖಾಲಿ ಮಾಡಿದ್ದಾರೆ.

ಹಾಳಾದ ಸಿಸಿ ರಸ್ತೆಗಳನ್ನು ಯುಜಿಡಿ ಗುತ್ತಿಗೆದಾರನಿಂದ ದುರಸ್ತಿ ಮಾಡುವ ಬದಲಿಗೆ ಪುರಸಭೆ ವತಿಯಿಂದ ಎಲ್ಲ ಕಡೆಗಳಲ್ಲಿ ಹೊಸ ಸಿಸಿ ರಸ್ತೆ ನಿರ್ಮಾಣ ಮಾಡುವ ಮೂಲಕ ಯುಜಿಡಿ ಕಾಮಗಾರಿಗಾಗಿ ಅಗೆದ ರಸ್ತೆಗಳನ್ನು ಮುಚ್ಚುವ ಕೆಲಸ ಮಾಡಿದ್ದು, ದುರಸ್ತಿ ಅನುದಾನ ಎಲ್ಲಿ ಹೋಯಿತು? ಎಂಬ ಪ್ರಶ್ನೆಗೆ ಅಧಿ  ಕಾರಿಗಳು ಉತ್ತರಿಸಬೇಕಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಕೆಲ ಸದಸ್ಯರು ಒತ್ತಾಯಿಸುತ್ತಿದ್ದಾರೆ.

Advertisement

ಯುಜಿಡಿ ಕಾಮಗಾರಿ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧೆಡೆ ಪೈಪ್‌ಲೈನ್‌ ಹಾಗೂ ಮ್ಯಾನ್‌ಹೋಲ್‌ ಅಳವಡಿಸುವ ಕಾಮಗಾರಿ ನಡೆದಿದೆ. ಆದರೆ, ಪಟ್ಟಣದಲ್ಲಿನ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಶಾಸಕ ರಾಜಶೇಖರ ಪಾಟೀಲ ಕೂಡ ಪ್ರಾಯೋಗಿಕವಾಗಿ ವೀಕ್ಷಿಸುವವರೆಗೂ ಹಸ್ತಾಂತರಿಸುವ ಕೆಲಸ ಮಾಡಬೇಡಿ ಎಂದು ಸಭೆಯಲ್ಲಿ ಸೂಚಿಸಿದ್ದಾರೆ.
ಅಫ್ಸರ್ ಮಿಯ್ಯಾ , ಪುರಸಭೆ ಸದಸ್ಯ

ಯುಜಿಡಿ ಕಾಮಗಾರಿ ಹಿನ್ನೆಲೆಯಲ್ಲಿ ಬಹುತೇಕ ಸಿಸಿ ರಸ್ತೆಗಳಲ್ಲಿ ಮ್ಯಾನ್‌ ಹೋಲ್‌ ಬಿಡಲಾಗಿದೆ. ಪ್ರಾಯೋಗಿಕ ಪರೀಕ್ಷೆ ನಡೆದು ಯಶಸ್ವಿಯಾದರೆ ಮ್ಯಾನ್‌ಹೋಲ್‌
ಮುಚ್ಚುವ ಕಾರ್ಯ ನಡೆಯಬೇಕು. ಯಾವ ಕಡೆ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದು ಪರಿಹರಿಸುವ ಕಾರ್ಯ ಗುತ್ತೆದಾರ ಮಾಡಬೇಕು. ಯೋಜನೆ ಯಶಸ್ವಿಯಾಗದಿದ್ದರೆ ಸಮಗ್ರ ತನಿಖೆ ನಡೆಸಿ ಸಂಬಂಧಿ ಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕು.
ರಮೇಶ ಕಲ್ಲೂರ್‌, ಪುರಸಭೆ ಸದಸ್ಯರು

ಯುಜಿಡಿ ಕಾಮಗಾರಿ ಪುರಸಭೆಗೆ ಹಸ್ತಾಂತರಿಸಿಕೊಳ್ಳಲು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಪಾಯೋಗಿಕ ಪರೀಕ್ಷೆ ನಂತರ ಸಭೆ ನಡೆಸಿ ಮಾಹಿತಿ ಪಡೆದು ತೀರ್ಮಾನ ತೆಗೆದುಕೊಳ್ಳುವ ನಿಟ್ಟಿನಲ್ಲಿ ಶಾಸಕರು ಸಲಹೆ ನೀಡಿದ್ದಾರೆ. ಮುಂದಿನ ಸಭೆಯಲ್ಲಿ ಯುಜಿಡಿ ಕಾಮಗಾರಿಗೆ ಸಂಬಂಧಿ ಸಿದವರನ್ನು ಕರೆದು ಮಾಹಿತಿ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ವರೆಗೆ ಕಾಮಗಾರಿಗೆ ಎಷ್ಟು ಅನುದಾನ ಖರ್ಚಾಗಿದೆ, ಎಷ್ಟು ಪಾವತಿ ಮಾಡಲಾಗಿದೆ ಎಂಬ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಶಂಬುಲಿಂಗ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ

*ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next