ಹುಮನಾಬಾದ: ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಕಲಬುರಗಿ ಧರ್ಮಕ್ಷೇತ್ರದ ಶ್ರೇಷ್ಟ ಗುರು ಪೊಟ್ಲಾ ಸ್ಟ್ಯಾನಿಲೊಬೊ ಹೇಳಿದರು.
ಪಟ್ಟಣದ ಆರ್ಬಿಟ್ ಸಂಸ್ಥೆಯಲ್ಲಿ ಆರ್ಬಿಟ್ ಸಂಸ್ಥೆ ಹಾಗೂ ಜಿಲ್ಲಾ ಆಡಳಿತ ಶನಿವಾರ ಏರ್ಪಡಿಸಿದ್ದ ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಮತ್ತು ಪರಿಸರಸ್ನೇಹಿ ಚೀಲಗಳ ಪ್ರದರ್ಶನ ಅನಾವರಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಇದು ಸರ್ಕಾರ ಅಥವಾ ಯಾವುದೋ ಸ್ವಯಂ ಸೇವಾ ಸಂಸ್ಥೆಯ ಜವಾಬ್ದಾರಿ ಎಂದು ನಿರ್ಲಕ್ಷಿಸದೇ ಈ ಪರಿಸರದಲ್ಲಿ ನೆಲೆಸುವ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಎಂದು ಭಾವಿಸಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ ಎಂದು ಹೇಳಿದರು.
ಬೀದರ ಸರ್ಕಾರಿ ಆಸ್ಪತ್ರೆ ಮನೋವೈದ್ಯ ಡಾ|ಅಭಿಜೀತ ಪಾಟೀಲ ಮಾನಾಡಿ, ಮಾನಸಿಕ ಆರೋಗ್ಯವೇ ದೇಹದ ಆರೋಗ್ಯ. ಈ ನಿಟ್ಟಿನಲ್ಲಿ ತಾಳ್ಮೆ ಕಳೆದುಕೊಳ್ಳದೇ ಪ್ರತಿಯೊಬ್ಬರು ಸಮಧಾನ ಚಿತ್ತದಿಂದ ಕರ್ತವ್ಯ ನಿರ್ವಹಿಸಬೇಕು. ಸಣ್ಣಪುಟ್ಟ ವಿಷಯಗಳಿಗೆ ಸಹನೆ ಕಳೆದುಕೊಳ್ಳದೇ ಕರ್ತವ್ಯದಲ್ಲಿ ತೊಡಗಿಸಿಕೊಂಡಲ್ಲಿ ನೆಮ್ಮದಿಯಿಂದ ಜಿವನ ಸಾಗಿಸಲು ಸಾಧ್ಯ ಎಂದು ಹೇಳಿದರು.
ಆರ್ಬಿಟ್ ಸಂಸ್ಥೆಯ ನಿರ್ದೇಶಕ ಫಾದರ ಅನೀಲ ಕ್ಲಾಸ್ತಾ, ಪರಿಸರ ಸಂರಕ್ಷಣೆ ಹಾಗೂ ಜಲ ಸಂರಕ್ಷಣೆ ಕುರಿತು ಮಾತನಾಡಿದರು. ಹುಮನಾಬಾದ ಶಾಂತಿಕಿರಣ ನಿರ್ದೇಶಕಿ ಸಿಸ್ಟರ್ ಜೀನಾ ಇಂಗು ಗುಂಡಿ ತೋಡುವ ಮೂಲಕ ಮಳೆ ನೀರು ಸಂರಕ್ಷಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.