Advertisement

ಠೇವಣಿದಾರರ ಹಿತ ಕಾಯಲು ಸರ್ಕಾರ ಬದ್ಧ: ಸಚಿವ ಕೃಷ್ಣ ಬೈರೇಗೌಡ

11:08 PM Dec 16, 2024 | Team Udayavani |

ಸುವರ್ಣ ವಿಕಾಸಸೌಧ: ಬಡವರಿಗೆ ಹಣ ವಂಚಿಸುವ ಮೋಸದ ಕಂಪನಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕಕ್ಕೆ ಹಲವು ಪ್ರಮುಖ ತಿದ್ದುಪಡಿಗಳನ್ನು ತರಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Advertisement

ಸೋಮವಾರ ವಿಧಾನಸಭೆಯಲ್ಲಿ “ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕ 2024′ ಮಂಡಿಸಿ ಮಾತನಾಡಿದರು. “2003-04ರಲ್ಲಿ ವಿನಿವಿಂಕ್‌ ಶಾಸ್ತ್ರಿ ಚಿಟ್‌ಫಂಡ್‌ ಸ್ಕೀಂನಿಂದ ಸಾವಿರಾರು ಜನ ಬಡ ಠೇವಣಿದಾರರು ಹಣ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕ ಜಾರಿಗೊಳಿಸಲಾಗಿತ್ತು ಎಂದರು.

ಚೈನ್‌ಲಿಂಕ್‌, ಚಿಟ್‌ಫಂಡ್‌, ಪಿರಮಿಡ್‌ ಮಾದರಿ ಹಾಗೂ ಹಣ ಡಬ್ಲಿಂಗ್‌ ಮಾಡುವ ಆಮಿಷ ಒಡ್ಡಿ ಜನರಿಂದ ಹಣ ಠೇವಣಿ ಪಡೆದು ವಂಚಿಸುವ ಕಂಪನಿಗಳಿಗೆ ಕಡಿವಾಣ ಹಾಕುವುದು ಈ ಕಾನೂನಿನ ಮುಖ್ಯ ಉದ್ದೇಶ. ಇದು ಬಂದು 20 ವರ್ಷ ಆಯ್ತು. ಆದರೂ ಪ್ರಕರಣಗಳು ದಾಖಲಾಗುತ್ತಿದ್ದು, ವಿದೇಯಕ್ಕೆ ಬಲ ತುಂಬುವ ಕೆಲಸ ಮಾಡಲಾಗಿದೆ.

ಕೆಲವರು ಕಂಪನಿ ತೆರೆದು ಹಗರಣ ಮಾಡಿ, ಠಾಣೆಯಲ್ಲಿ ಕೇಸ್‌ ದಾಖಲಾಗುವ ಮೊದಲೇ ಆ ಕಂಪನಿ ನಿರ್ದೇಶಕ ಹುದ್ದೆಯಿಂದ ನಿರ್ಗಮಿಸಿರುತ್ತಾರೆ. ನಿರ್ಗಮಿತ ನಿರ್ದೇಶಕರನ್ನು ವಿಚಾರಿಸುವ ಅವಕಾಶ ಹಳೇ ಕಾನೂನಿನಲ್ಲಿಲ್ಲ. ಹೊಸ ತಿದ್ದುಪಡಿಯಲ್ಲಿ ಅದಕ್ಕೆ ಅವಕಾಶ ನೀಡಲಾಗಿದೆ. ವಂಚಕ ಕಂಪನಿಗಳ ಮಾಹಿತಿ ಸಿಕ್ಕ ಕೂಡಲೇ ಪ್ರಚಾರ-ಜಾಹೀರಾತುಗಳಿಗೆ ತಡೆಯೊಡ್ಡುವ ಅಧಿಕಾರವನ್ನು ಉಪ-ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ ಎಂದರು.

ಮೈಕ್ರೋ ಫೈನಾನ್ಸ್‌ ಕಂಪನಿಗಳ ವಿರುದ್ಧ ಕ್ರಮ
ಗ್ರಾಮೀಣರನ್ನು ಶೋಷಿಸುತ್ತಿರುವ ಮೈಕ್ರೋ ಫೈನಾನ್ಸ್‌, ಹೌಸಿಂಗ್‌ ಸ್ಕೀಂ ಹಾಗೂ ಗೋಲ್ಡ್‌ ಲೋನ್‌ ಕಂಪನಿಗಳ ವಂಚನೆಗಳ ಬಗ್ಗೆ ಗಮನ ಸೆಳೆದ ವಿಪಕ್ಷ ಸದಸ್ಯರು ಅದಕ್ಕೂ ಕ್ರಮವಹಿಸಬೇಕು ಎಂದರು. ಇದಕ್ಕೆ ಸಚಿವ ಕೃಷ್ಣಬೈರೇಗೌಡ ಸ್ಪಂದಿಸಿ,”ಹೌಸಿಂಗ್‌ ಸ್ಕೀಂ, ಮೈಕ್ರೋ ಲೆಂಡಿಂಗ್‌, ಗೋಲ್ಡ್‌ಲೋನ್‌ ನಂತರ ಅಕ್ರಮಗಳನ್ನು ತಡೆಯಲು ಪ್ರತ್ಯೇಕ ಕಾನೂನು ಇದೆ. ಆ ಚಟುವಟಿಕೆಗಳು ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ವಿಧೇಯಕದ ಅಡಿ ಬರುವುದಿಲ್ಲ. ಆದರೆ, ಆ ಕಾನೂನುಗಳನ್ನೂ ಸಹ ಬಲಪಡಿಸಬೇಕು ಎಂದು ಮುಖ್ಯಮಂತ್ರಿಗಲು ಸೂಚಿಸಿದ್ದಾರೆ ಎಂದರು. ಇಂಥ ಮೋಸದ ಕಂಪನಿಗಳನ್ನು ಪೂರ್ಣ ನಿಲ್ಲಿಸಲು ಚಿಂತಿಸಲಾಗಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next