ಹುಮನಾಬಾದ: ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ನಾಗಾಯ್ನಾ ಹಿರೇಮಠ ಅವರಿಗೆ ಸಲ್ಲಿಸಲಾಯಿತು. ಪ್ರತಿ ಟನ್ ಕಬ್ಬಿಗೆ 2400 ರೂ. ಬೆಂಬಲ ಬೆಲೆ ನೀಡಬೇಕು. ತೋರಿ ಪ್ರತಿ ಕ್ವಿಂಟಲ್‌ಗೆ 8 ಸಾವಿರ ಬೆಲೆ ನಿಗ ದಿಗೊಳಿಸಿ ಖರೀದಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. 12 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘ ಜಿಲ್ಲಾಧ್ಯಕ್ಷ ಮಲ್ಲಿಕರ್ಜುನ ಸ್ವಾಮಿ ಮಾತನಾಡಿ, ಕುಮಾರಸ್ವಾಮಿ ಮುಖ್ಯಮಂತ್ರಿ ಅವಧಿಯಲ್ಲಿ ರೈತರ ಸಾಲಮನ್ನಾ ಮಾಡಿದ್ದು, ಇಂದಿಗೂ ಅನೇಕ ರೈತರ ಸಾಲಮನ್ನಾ ಪರಿಹಾರ ದೊರೆತ್ತಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಪರಿಹಾರ ದೊರೆಯುವಂತೆ ಮಾಡಬೇಕು.
ಕೂಡಲೇ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಗಮನ ಸೆಳೆದು ರೈತರಿಗೆ ಸಿಗಬೇಕಾದ ಪರಿಹಾರಗಳು ಕೊಡಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಮಿ ನೇತೃತ್ವದಲ್ಲಿ ಸಭೆ ನಡೆಯಿತು.
ರಾಜ್ಯ ಉಪಾಧ್ಯಕ್ಷ ಖಾಸಿಮ್‌ಅಲಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಶಾಂತಮಕ್ಕಾ ಹಂಜನಾಳ, ಜಿಲ್ಲಾ ಉಪಾಧ್ಯಕ್ಷ ಕರಬಸಪ್ಪಾ ಹುಡಗಿ, ಹುಮನಾಬಾದ ತಾಲೂಕ ಅಧ್ಯಕ್ಷ ಮುಖೀಮೊದ್ದಿನ್ ಪಟೇಲ್, ಉಪಾಧ್ಯಕ್ಷ ಕಾಶಪ್ಪಾ ಹುಡಗಿ, ಬೀದರ ತಾಲೂಕ ಅಧ್ಯಕ್ಷ ವಿಠಲರೆಡ್ಡಿ ಅಣದೂರ ಉಪಾಧ್ಯಕ್ಷ ಅನಿಲ ಬೌವಗಿ, ವಿಜಯಕುಮಾರ ಬೌವಗಿ, ಬಸವಕಲ್ಯಾಣ ತಾಲೂಕಾಧ್ಯಕ್ಷ ರುದ್ರಸ್ವಾಮಿ, ಸಂತೋಷಕುಮಾರ ಗುದಗೆ, ರಿಯಾಜ ಪಟೇಲ್, ಷಣ್ಮುಮುಖಪ್ಪಾ ಅಣದೂರ ಇದ್ದರು.