Advertisement

ಗಿಫ್ಟ್ ಬಾಕ್ಸ್‌ನೊಳಗೆ ಮಾನವ ಕಳ್ಳ ಸಾಗಣೆ

09:41 AM Nov 23, 2019 | mahesh |

“ಇಲ್ಲಿ ದೈಹಿಕವಾಗಿ ಹೊಡೆದಾಡುವ ನಾಯಕನಿಲ್ಲ. ಗಟ್ಟಿಮನಸುಗಳ ಕಟ್ಟೆ ಒಡೆದ ಜೀವಗಳ ಕಥೆಯೇ ಇಲ್ಲಿ ನಾಯಕ ಮತ್ತು ನಾಯಕಿ…’

Advertisement

-ಇದು “ಗಿಫ್ಟ್ ಬಾಕ್ಸ್‌’ ಚಿತ್ರದ ನಿರ್ದೇಶಕ ರಘು ಎಸ್‌.ಪಿ ಹೇಳಿದ ಮಾತು. ಅವರ ನಿರ್ದೇಶನದ ಎರಡನೇ ಸಿನಿಮಾ ಇದು. ಈ ಹಿಂದೆ ನಿರ್ದೇಶಿಸಿದ್ದ “ಪಲ್ಲಟ’ ರಾಜ್ಯ ಪ್ರಶಸ್ತಿ ಪಡೆದಿತ್ತು. ಈಗ ನೋಡುಗರಿಗೆ ಹೊಸ ವಿಷಯ ಹೊತ್ತು “ಗಿಫ್ಟ್’ ಕೊಡಲು ಬಂದಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್‌,
ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡಲಾಯಿತು. ಅಂದು ಜಿ.ಎನ್‌. ಮೋಹನ್‌ ಹಾಗೂ ಪೊಲೀಸ್‌
ಮಾಜಿ ಅಧಿಕಾರಿ ಲೋಕೇಶ್‌ ಟ್ರೇಲರ್‌, ಲಿರಿಕಲ್‌ ವಿಡಿಯೋಗೆ ಚಾಲನೆ ಕೊಟ್ಟರು.

ಮೊದಲು ಮಾತಿಗಿಳಿದ ನಿರ್ದೇಶಕ ರಘು ಎಸ್‌.ಪಿ, “ಸಮಾನ ಮನಸ್ಕರು ಸೇರಿ ಸಿನಿಮಾ ಮಾಡಬೇಕು ಅಂತ ಹೊರಟಾಗ ಹುಟ್ಟಿದ ಚಿತ್ರವಿದು. ಇಲ್ಲಿ ಎರಡು ವಿಷಯಗಳ ಮೇಲೆ ಕಥೆ ಹೆಣೆಯಲಾಗಿದೆ. ಮಾನವ ಕಳ್ಳಸಾಗಣೆ ಮತ್ತು ಲಾಕ್ಡ್ ಇನ್‌ ಸಿಂಡ್ರೋಮ್‌ ಎಂಬ ನರರೋಗ ಚಿತ್ರದ ಕಥಾವಸ್ತು. ಮುಗ್ದ ಯುವಕನೊಬ್ಬ ತನಗೆ ಅರಿವಿಲ್ಲದಂತೆ ಮಾನವ ಕಳ್ಳಸಾಗಣೆ ಜಾಲದಲ್ಲಿ ಸಿಕ್ಕಿಕೊಳ್ಳುವ ಚಿತ್ರವಿದು. ಇಲ್ಲಿ ನಾಯಕನದು ನಂಬಿದವರಿಗೆ ಸುಳ್ಳು ಹೇಳುವ, ನಂಬಿಕೆ ದ್ರೋಹ ಬಗೆಯುವ ಹಾಗೂ ಮುಗ್ದ  ಹೆಣ್ಣುಮಕ್ಕಳನ್ನು ಹಿಂಸಿಸುವ ಮನಸ್ಥಿತಿ ತೋರಿಸುತ್ತದೆ. ಇಲ್ಲಿ ಸವಾಲು, ಹೋರಾಟ ಹಾಗೂ ಬೆಳವಣಿಗೆ ಕುರಿತ ಅಂಶಗಳಿವೆ.

ಮಾನವ ಕಳ್ಳಸಾಗಣೆ ಕಥೆಯ ಜೊತೆಗೆ ಮನೋವಿಜ್ಞಾನದ ವಿಷಯಗಳೂ ಇಲ್ಲಿವೆ. 38 ದಿನಗಳ ಕಾಲ ಮೈಸೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಸಿಂಕ್‌ ಸೌಂಡ್‌ ಚಿತ್ರದ ಇನ್ನೊಂದು ಆಕರ್ಷಣೆ. ಪ್ರತಿಯೊಂದು ಪಾತ್ರಕ್ಕೂ ಇಲ್ಲಿ ವಿಶೇಷ ಜಾಗವಿದೆ. ಯು/ಎ ಪ್ರಮಾಣ ಪತ್ರ ನೀಡಿದ್ದು, ಇಷ್ಟರಲ್ಲೇ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ’ ಎಂದರು ರಘು.

ನಾಯಕ ರಿತ್ವಿಕ್‌ ಮಠದ್‌ ಅವರಿಗೆ ಇದು ಮೊದಲ ಅನುಭವ. ನಿರ್ದೇಶಕರು ಕರೆದು ಅವಕಾಶ ಕೊಟ್ಟಾಗ, ಸಂಗೀತ ಯಾರು ಮಾಡ್ತಾರೋ ಏನೋ ಎಂಬ ಕುತೂಹಲವಿತ್ತಂತೆ. ಯಾಕೆಂದರೆ, ಅವರಿಗೆ ಸಂಗೀತದ
ಮೇಲೆ ಹೆಚ್ಚು ಆಸಕ್ತಿ ಇತ್ತಂತೆ. ಕೊನೆಗೆ ವಾಸು ದೀಕ್ಷಿತ್‌ ಅಂತ ಗೊತ್ತಾದಾಗ ನಿರೀಕ್ಷೆ ಇನ್ನಷ್ಟು ಹೆಚ್ಚಾಯಿತಂತೆ. ಆ ನಿರೀಕ್ಷೆಗೆ ತಕ್ಕ ಹಾಡುಗಳು ಕೊಟ್ಟಿದ್ದಾರೆ ಎಂದರು ರಿತ್ವಿಕ್‌ ಮಠದ್‌.
ನಾಯಕಿ ದೀಪ್ತಿ ಮೋಹನ್‌ ಅವರ ವೃತ್ತಿ ಜೀವನದ ವಿಶೇಷ ಚಿತ್ರ ಇದಾಗುವ ನಂಬಿಕೆ ಇದೆಯಂತೆ. “ಎಲ್ಲೇ ಅವಕಾಶ ಹುಡುಕಿ ಹೋದರೂ, ಮಾತುಕತೆ ಮುಗಿದ ಬಳಿಕ ನಿಮ್ಮ ಹೈಟ್‌ ಒಂದೇ ಸಮಸ್ಯೆ ಅಂತ ಹೇಳಿ ಆ ಅವಕಾಶ ಕೈ ತಪ್ಪಿಹೋಗುತ್ತಿತ್ತಂತೆ. ಹಾಗೆಯೇ ಈ ಚಿತ್ರಕ್ಕೂ ನಿರ್ದೇಶಕರು ಕಾಲ್‌ ಮಾಡಿದಾಗ, ನೇರವಾಗಿ, ಸರ್‌ ನನ್ನ ಹೈಟ್‌ ಇಷ್ಟಿದೆ. ನೀವು ಭೇಟಿಯಾಗಿ ಕಥೆ ಹೇಳಿ ಆಮೇಲೆ ಹೈಟ್‌ ಜಾಸ್ತಿ ಎಂಬ ಕಾರಣಕ್ಕೆ ರಿಜೆಕ್ಟ್ ಮಾಡುವುದಾದರೆ ಬೇಡ ಅಂದರಂತೆ. ನಿರ್ದೇಶಕರು, ಅಂಥದ್ದೇನೂ ಆಗಲ್ಲ ಅಂದಾಗ ಕಥೆ ಕೇಳಿ ಒಪ್ಪಿದರಂತೆ. ಪಾತ್ರ ಚಾಲೆಂಜಿಂಗ್‌ ಆಗಿದೆ. ಮೇಕಪ್‌ ಗಾಗಿಯೇ ಗಂಟೆಗಟ್ಟಲೆ ಕೂರಬೇಕಿತ್ತು. ಉಮಾ ಮಹೇಶ್ವರ್‌ ಅದ್ಭುತ ಮೇಕಪ್‌ ಮಾಡಿದ್ದಾರೆ.

Advertisement

ಹೊಸಬಗೆಯ ಚಿತ್ರದಲ್ಲಿ ನಟಿಸಿದ ಖುಷಿ ನನ್ನದು’ ಎಂದರು ದೀಪ್ತಿ ಮೋಹನ್‌. ಅಮಿತಾ ಕುಲಾಲ್‌ ಅವರಿಗೂ ಇಲ್ಲೊಂದು ವಿಶೇಷ ಪಾತ್ರ ಸಿಕ್ಕಿದೆಯಂತೆ. ಸಿನಿಮಾಗೂ ಮೊದಲು ಒಂದಷ್ಟು ತರಬೇತಿ ಪಡೆದಿದ್ದೇನೆ. ಚಿತ್ರ ಮುಗಿಯುವ ಹೊತ್ತಿಗೆ ಒಳ್ಳೆಯ ಅನುಭವ ಆಗಿದೆ’ ಅಂದರು ಅಮಿತಾ.
ವಾಸು ದೀಕ್ಷಿತ್‌ ಅವರಿಗೆ ನಿರ್ದೇಶಕರು ಕಾಲ್‌ ಮಾಡಿ, ಮಾತನಾಡಿದಾಗ, ನಾನು ಲೈವ್‌ ಸಂಗೀತಕ್ಕೆ ಹೆಚ್ಚು ಒತ್ತು ಕೊಡ್ತೀನಿ. ಲೈವ್‌ಗೆ ಓಕೆ ಎಂದರೆ, ನಾನು ಸಂಗೀತ  ಮಾಡ್ತೀನಿ ಅಂದರಂತೆ. ಅದಕ್ಕೆ ನಿರ್ದೇಶಕರು ಅಸ್ತು ಅಂದಿದ್ದೇ ತಡ, ಒಳ್ಳೆಯ ಹಾಡು, ಸಂಗೀತ ಕಟ್ಟಿಕೊಡಲು ಸಾಧ್ಯವಾಗಿದೆ ಎನ್ನುತ್ತಾರೆ ವಾಸು. ಹಳ್ಳಿಚಿತ್ರ ಬ್ಯಾನರ್‌ನ ಈ ಚಿತ್ರಕ್ಕೆ ರಾಘವೇಂದ್ರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಮುರಳಿ ಗುಂಡಣ್ಣ, ಶಿವಾಜಿ ಜಾಧವ್‌, ಪ್ರಸಾದ್‌ ಹುಣಸೂರ್‌, ಪ್ರೊ.ಲಕ್ಷ್ಮಿ ಚಂದ್ರಶೇಖರ್‌ ಇಂದಿರಾ ನಾಯರ್‌ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next