ಬೆಂಗಳೂರು: ರಾಜಸ್ಥಾನದಿಂದ ಮಧ್ಯವರ್ತಿಯೊಬ್ಬನ ಮೂಲಕ ಬೆಂಗಳೂರಿಗೆ ಮಾನವ ಕಳ್ಳ ಸಾಗಣೆ ಆಗುತ್ತಿದ್ದ ಅಪ್ರಾಪ್ತ ಯುವಕ ಮತ್ತು ಯುವತಿಯನ್ನು ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಪೊಲೀಸರು ರಕ್ಷಣೆ ಮಾಡಿದ್ದಾರೆ.
ಶುಕ್ರವಾರ ಸಂಜೆ ಅಪ್ರಾಪ್ತರನ್ನು ರಕ್ಷಣೆ ಮಾಡಿದ ರೈಲ್ವೆ ರಕ್ಷಣಾ ಪಡೆ, ಇಬ್ಬರೊಂದಿಗೂ ಆಪ್ತ ಸಮಾಲೋಚನೆ ನಡೆಸಿ, ನಂತರ ಅವರ ಪೋಷಕರಿಗೆ ಒಪ್ಪಿಸಿದೆ. ಅಪ್ರಾಪ್ತ ಮಕ್ಕಳ ನಾಪತ್ತೆ ಮತ್ತು ಅಕ್ರಮ ಮಾನವ ಕಳ್ಳ ಸಾಗಣೆ ಕುರಿತು ರೈಲ್ವೆ ಪೊಲೀಸರು “ನನ್ನೇ ಫರಿಶ್ತೇ’ ಎಂಬ ಯೋಜನೆ ಅಡಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಅದೇ ರೀತಿ ಶುಕ್ರವಾರ ಸಂಜೆ ಮಧ್ಯವರ್ತಿಯೊಬ್ಬನ ಜತೆ 16 ವರ್ಷದ ಯುವಕ ಮತ್ತು 17 ವರ್ಷದ ಯುವತಿ ರೈಲು ನಿಲ್ದಾಣದಲ್ಲಿ ಬರುತ್ತಿದ್ದರು. ಅನುಮಾನಗೊಂಡ ವಿಶೇಷ ಪಡೆಯ ಅಧಿಕಾರಿಯೊಬ್ಬರು, ವಿಚಾರಣೆ ನಡೆಸಲು ಅವರ ಬಳಿ ಹೋಗುತ್ತಿದ್ದಂತೆ ಮಧ್ಯವರ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಹಿಂಬಾಲಿಸಿದರೂ ಸಿಕ್ಕಿಲ್ಲ.
ನಂತರ ಇಬ್ಬರು ಅಪ್ರಾಪ್ತರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ, ತಾವು ರಾಜಸ್ಥಾನದಿಂದ ಬಂದಿದ್ದು, ತಮ್ಮನ್ನು ಕರೆತಂದ ವ್ಯಕ್ತಿ ಬೆಂಗಳೂರನಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಹೇಳಿದ್ದ ಎಂದು ಹೇಳಿಕೆ ನೀಡಿದ್ದಾರೆ. ಅಸಲಿಗೆ ಈ ಇಬ್ಬರೂ ಅಪ್ರಾಪ್ತರನ್ನು ಆರೋಪಿಯು ಬೇರೊಬ್ಬರಿಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಕೆಲಸ ಕೊಡಿಸುವ ಭರವಸೆ: ಮನೆಯಲ್ಲಿ ಬಡತನವಿದ್ದ ಹಿನ್ನೆಲೆಯಲ್ಲಿ ಆರೋಪಿಯನ್ನು ಅಪ್ರಾಪ್ತರ ಪೋಷಕರು ಸಂಪರ್ಕಿಸಿದ್ದರು. ಈ ವೇಳೆ ಆರೋಪಿ, ಬೆಂಗಳೂರಿನಲ್ಲಿ ಪರಿಚಯಸ್ಥರ ಮೂಲಕ ಕೆಲಸ ಕೊಡಿಸುವುದಾಗಿ ನಂಬಿಸಿ ಇಲ್ಲಿಗೆ ಕರೆತಂದಿದ್ದಾನೆ. ಆದರೆ, ಆರೋಪಿ ಸುಳ್ಳು ಹೇಳಿರುವುದನ್ನು ತಿಳಿದ ಪೋಷಕರು ರಾಜಸ್ಥಾನದ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಅಷ್ಟರಲ್ಲಿ ಆರೋಪಿ ಇಬ್ಬರನ್ನೂ ಬೆಂಗಳೂರಿಗೆ ಕರೆತಂದಿದ್ದ.
ಅನಂತರ ಇಬ್ಬರಿಗೆ ಆಪ್ತಸಮಾಲೋಚನೆ ನಡೆಸಿದಾಗ ಯುವತಿಯ ಬಳಿ ಆಕೆಯ ಪೋಷಕರ ಸಂಪರ್ಕ ಸಂಖ್ಯೆ ಇತ್ತು. ಕೂಡಲೇ ಅವರನ್ನು ಸಂಪರ್ಕಿಸಿ ಇಬ್ಬರನ್ನು ಅವರ ಪೋಷಕರಿಗೆ ಒಪ್ಪಿಸಲಾಗಿದೆ. ಎಂದು ರೈಲ್ವೆ ವಿಭಾಗದ ಪೊಲೀಸರು ಹೇಳಿದರು.
1,400 ಮಂದಿ ರಕ್ಷಣೆ: “ನನ್ನೇ ಫರಿಶ್ತೇ’ ಯೋಜನೆಯಡಿ ಪ್ರಸಕ್ತ ವರ್ಷದಲ್ಲಿ ಬೆಂಗಳೂರಿನ ವಿವಿಧ ರೈಲು ನಿಲ್ದಾಣಗಳಲ್ಲಿ 1,400 ಮಂದಿ ಹಾಗೂ ರಾಜ್ಯಾದ್ಯಂತ 2,300 ಮಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ರೈಲ್ವೆ ವಿಭಾಗದ ಪೊಲೀಸರು ಹೇಳಿದರು.