ಧಾರವಾಡ: ಸಮಾಜದಲ್ಲಿ ಇದೀಗ ಮಾನವ ಕಳ್ಳ ಸಾಗಾಣಿಕೆಯು ಬಹುದೊಡ್ಡ ಸಮಸ್ಯೆಯಾಗಿ ಬೆಳೆದಿದ್ದು, ಅದರಲ್ಲೂ ಮಾನವ ಕಳ್ಳ ಸಾಗಾಣಿಕೆಗೆ ಹೆಚ್ಚಾಗಿ ಬಲಿಯಾಗುತ್ತಿರುವವರು ಹೆಂಗಸರು ಮತ್ತು ಮಕ್ಕಳು. ಇದರಿಂದ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಪೀಠಾಧ್ಯಕ್ಷೆ ಎಸ್. ನಾಗಶ್ರೀ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ, ಬೆಳಕು ಮಹಿಳಾ ಸಂಘ, ಧಾರವಾಡ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಸಿವಿಲ್ ನ್ಯಾಯಾಲಯ ಆವರಣದ ಎಡಿಆರ್ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಡತನದಲ್ಲಿರುವ ಹೆಣ್ಣು ಮಕ್ಕಳಿಗೆ ಹಣದ ಸಹಾಯ ಅಗತ್ಯವಿರುತ್ತದೆ. ಹೆಂಗಸರು ಆಮಿಷಗಳಿಗೆ ಬಲಿಯಾಗಿ ಮೋಸ ಹೋಗುವುದನ್ನು ತಡೆಯಬೇಕು. ಮಕ್ಕಳನ್ನು ಪೋಷಕರು ತುಂಬಾ ಜಾಗೃತೆಯಿಂದ ಬೆಳೆಸಬೇಕು. ಮಕ್ಕಳಿಗೆ ಯಾವುದು ಸರಿ ಯಾವುದು ತಪ್ಪು ಎಂಬ ವಿಚಾರಗಳನ್ನು ತಿಳಿಸಿಕೊಡಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತಾ ಸಿ.ಎಂ. ಮಾತನಾಡಿ, ದೇಶದಲ್ಲಿ ಪ್ರಜೆಗಳಿಗೆ ಅನೇಕ ಕಾಯ್ದೆ ಕಾನೂನುಗಳಿವೆ. ಅವುಗಳ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತ ಎಸ್.ಶ್ವೇತಾ ಮಾತನಾಡಿ, ನಮ್ಮ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುತ್ತಿರಬೇಕು. ಮಾನವ ಕಳ್ಳ ಸಾಗಾಣಿಕೆಯ ಕಾಯ್ದೆ ಕಾನೂನುಗಳ ಬಗ್ಗೆ ಎಲ್ಲರಲ್ಲಿ ಅರಿವು ಮೂಡಿಸಬೇಕು. ದುಡ್ಡಿನ ಆಮಿಷ ಒಡ್ಡಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಂಡು ಮೋಸ ಮಾಡುವ ಸಂಭವಗಳಿರುತ್ತವೆ. ಬಡತನದಲ್ಲಿರುವವರು ಮತ್ತು ಅವಿದ್ಯಾವಂತರು ಇಂತಹ ಆಮಿಷಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. ಮಹಿಳೆಯರು ಎಚ್ಚೆತ್ತುಕೊಳ್ಳಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲೆ ನೂರಜಹಾನ್ ಕಿಲ್ಲೇದಾರ, ಫಾದರ್ ಪೀಟರ್ ಆಶೀರ್ವಾದಪ್ಪ ಉಪನ್ಯಾಸ ನೀಡಿದರು.
ಧಾರವಾಡ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಪೊಲೀಸ್‌ಪಾಟೀಲ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ ಯರಗಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಡಾ| ಎಚ್.ಎಚ್. ಕುಕನೂರ, ಬೆಳಕು ಮಹಿಳಾ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಪಾಟೀಲ, ಕಾರ್ಮಿಕ ಅಧಿಕಾರಿ ಲಲಿತಾ ಸಾತೇನಹಳ್ಳಿ ಇದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ|ಕಮಲಾ ಬೈಲೂರ ಸ್ವಾಗತಿಸಿದರು. ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಎಸ್. ಜೋಗುರ ವಂದಿಸಿದರು.