ಧಾರವಾಡ: ಮಾನವ ಹಕ್ಕುಗಳು ಜಾರಿಯಾಗಿ 70 ವರ್ಷವಾದರೂ ಸಹಿತ ಇಂದಿಗೂ ದೇಶದ ಎಲ್ಲ ಕಡೆಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ವಿಷಾದಕರ ಸಂಗತಿ ಎಂದು ಕವಿವಿ ಮೌಲ್ಯಮಾಪನ ಕುಲಸಚಿವ ಡಾ| ಎನ್.ಎಂ.ಸಾಲಿ ಅಭಿಪ್ರಾಯಪಟ್ಟರು.
ಕರ್ನಾಟಕ ಕಲಾ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗ ಮತ್ತು ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ರಾಜ್ಯಶಾಸ್ತ್ರ ವಿಷಯದ ಕಾಲೇಜು ಶಿಕ್ಷಕರ ವೇದಿಕೆ ಜಂಟಿಯಾಗಿ ಕಾಲೇಜಿನ ಬಿಬಿಎ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದೂರದೃಷ್ಟಿಯುಳ್ಳ ಮಾನವ ಹಕ್ಕುಗಳು ಎಂಬ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಹೆಸರಿನಲ್ಲಿ ನಾವು ಗುಲಾಮಗಿರಿ ಒಳಗಾಗಿದ್ದು, ಇಂದು ಎಲ್ಲ ಕೇತ್ರಗಳಲ್ಲಿ ಲಿಂಗ, ಧರ್ಮ, ಜಾತಿ ಮತ್ತು ವ್ಯಕ್ತಿಗಳ ಮಧ್ಯೆ ಅಸಮಾನತೆ ಕಾಣುತ್ತಿದ್ದೇವೆ. ಆದ್ದರಿಂದ ಮಾನವ ಹಕ್ಕುಗಳ ಕುರಿತು ಚಿಂತನೆ, ಚರ್ಚೆ ಮತ್ತು ವಿಮರ್ಶೆಗಳು ನಡೆಯಬೇಕು ಎಂದರು.
ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ| ಶಿವಾನಂದ ಶೆಟ್ಟರ್ ಮಾತನಾಡಿ, ಮಹಾತ್ಮಾ ಗಾಂಧೀಜಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಂತರ ಭಾರತದಲ್ಲಿ ಮಾನವ ಹಕ್ಕುಗಳ ಕುರಿತು ಚರ್ಚೆ ಬಹಳಷ್ಟು ತೀವ್ರಗೊಂಡಿತು. 1975ರ ಆಂತರಿಕ ತುರ್ತು ಪರಿಸ್ಥಿತಿಯು ಪ್ರಜಾಪ್ರಭುತ್ವದ ಮೌಲ್ಯಗಳ ಹರಣ, ಪತ್ರಿಕಾ ಸ್ವಾತಂತ್ರ ಮತ್ತು ವ್ಯಕ್ತಿಯ ಹಕ್ಕುಗಳನ್ನು ಧಮನ ಮಾಡಲಾಯಿತು ಎಂದರು.
ಪ್ರಾಚಾರ್ಯ ಡಾ| ಬಿ.ಎಫ್. ಚಾಕಲಬ್ಬಿ ಮಾತನಾಡಿ, ಭಾರತೀಯ ಸಂವಿಧಾನವು ನಮಗೆ ಕರ್ತವ್ಯ ಮತ್ತು ಹಕ್ಕುಗಳನ್ನು ಸಮಾನಾಗಿ ನೀಡಿದೆ. ಇವುಗಳನ್ನು ರಕ್ಷಿಸಬೇಕಾದ ಕರ್ತವ್ಯ ನಮ್ಮ ಮೇಲಿದೆ. ಇಂತಹ ವಿಚಾರ ಸಂಕಿರಣ ಮತ್ತು ಚರ್ಚೆಗಳು ಶೈಕ್ಷಣಿಕ ವಲಯದಲ್ಲಿ ನಡೆಯಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ರಾಜ್ಯಶಾಸ್ತ್ರ ವಿಷಯದ ಶಿಕ್ಷಕರ ವೇದಿಕೆ ಅಧ್ಯಕ್ಷ ಪ್ರೊ| ಪಿ.ಎಂ. ರಾಮಗಿರಿ ಮಾತನಾಡಿದರು. ಪ್ರಾಧ್ಯಾಪಕ ಡಾ| ಎಂ.ಬಿ. ದಳಪತಿ, ಪ್ರೊ | ಎಂ.ಬಿ. ಹಳ್ಳಿ, ಪ್ರೊ | ಎಸ್.ಸಿ. ಪಟ್ಟಣಶೆಟ್ಟಿ, ಡಾ| ವಿಜಯಕುಮಾರ ಬೆಟಗಾರ್ ಸೇರಿದಂತೆ ಕವಿವಿಯ 200ಕ್ಕೂ ಹೆಚ್ಚು ವಿವಿಧ ಕಾಲೇಜುಗಳ ರಾಜ್ಯಶಾಸ್ತ್ರ ವಿಷಯದ ಪ್ರಾಧ್ಯಾಪಕರು ಭಾಗವಹಿಸಿದ್ದರು.
ಇಂದು ದೇಶದಲ್ಲಿ ಮೇಧಾ ಪಾಟ್ಕರ್, ಸುಂದರಲಾಲ್ ಬಹುಗುಣ, ಅಗರವಾಲ್, ಅಣ್ಣಾ ಹಜಾರೆ ಮತ್ತು ಆಂಗ್ ಸ್ಯಾನ್ ಸೂಕಿ ಇವರೆಲ್ಲರೂ ಒಂದಿಲ್ಲೊಂದು ಕ್ಷೇತ್ರದಲ್ಲಿ ಮಾನವ ಹಕ್ಕುಗಳ ರಕ್ಷಣೆಯ ಸಲುವಾಗಿ ಹೋರಾಟ ಮಾಡಿದವರು. ಮನುಷ್ಯನಿಗೆ ಸ್ವಾಭಾವಿಕವಾಗಿ ನೈಸರ್ಗಿಕ ಹಕ್ಕುಗಳು ಇವೆ. ಅವುಗಳ ರಕ್ಷಣೆ ಪ್ರಭುತ್ವದ ಹೊಣೆ.
ಡಾ| ಶಿವಾನಂದ ಶೆಟ್ಟರ್, ಗಾಂಧಿ
ವಿಭಾಗದ ಮುಖ್ಯಸ್ಥರು, ಕವಿವಿ ಧಾರವಾಡ