Advertisement
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಗೌರವಾನ್ವಿತನಾಗಿ ಆತ್ಮ ಗೌರವದಿಂದ ಜೀವನ ನಡೆಸಲು ಹಕ್ಕು ಉಳ್ಳವನಾಗಿದ್ದು, ಇದಕ್ಕೆ ಚ್ಯುತಿ ಬಂದಲ್ಲಿ ಮಾನವ ಹಕ್ಕಿನ ಉಲ್ಲಂಘನೆ ಆಗಲಿದೆ. ಸಮಾಜದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದ್ದು, ಅಸಮಾನತೆ ವಿರುದ್ಧ ಎಸ್‌ಸಿ, ಎಸ್ಟಿ ಕಾಯಿದೆ ಜಾರಿಗೆ ತಂದಿದ್ದರೂ ಸಹ ಇನ್ನೂ ಇದರ ಉಲ್ಲಂಘನೆ ನಡೆಯುತ್ತಿದೆ. ಮಾನವ ಹಕ್ಕುಗಳ ಕುರಿತು ಪ್ರತಿಯೊಬ್ಬರೂ ಅರಿವು ಹೊಂದಿದ್ದು, ಅವುಗಳನ್ನು ಗೌರವಿಸಿ, ರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಜಿಲ್ಲಾ ನ್ಯಾಯಾಧೀಶರು ಹೇಳಿದರು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ| ಪ್ರಕಾಶ್ ಕಣಿವೆ, ಪ್ರತಿಯೊಬ್ಬ ವ್ಯಕ್ತಿಗೂ ಹುಟ್ಟಿನಿಂದಲೇ ಮಾನವ ಹಕ್ಕುಗಳು ದೊರೆಯುತ್ತವೆ. ಇವುಗಳ ರಕ್ಷಣೆ ಸರಕಾರಗಳ ಕರ್ತವ್ಯ. 1 ಮತ್ತು 2ನೇ ಮಹಾಯುದ್ದದಲ್ಲಿ ವ್ಯಾಪಕ ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದ್ದು, 1948ರ ಡಿಸೆಂಬರ್ 10 ರಂದು ವಿಶ್ವ ಸಂಸ್ಥೆ ಮಾನವ ಹಕ್ಕುಗಳ ರಕ್ಷಣೆಗೆ ಕರೆ ನೀಡಿದೆ. ಭಾರತ ಸಂವಿಧಾನದಲ್ಲೂ ಸಹ ಮಾನವ ಹಕ್ಕುಗಳನ್ನು ಅಳವಡಿಸಲಾಗಿದೆ. ಆದರೆ ಭಾರತದಲ್ಲಿ ತುರ್ತು ಪರಿಸ್ಥಿತಿಯ ವೇಳೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾನವ ಹಕ್ಕು ಉಲ್ಲಂಘನೆ ನಡೆಯಿತು. ಮಾನವ ಹಕ್ಕುಗಳನ್ನು ಗೌರವಿಸುವ ಉದ್ದೇಶದಿಂದಲೇ ಯಾವುದೇ ಅಪರಾಧಿಯನ್ನೂ ಸಹ ಸೂಕ್ತ ಕಾಲಾವಕಾಶ ನೀಡಿ, ವಿಚಾರಣೆ ಅನಂತರವೇ ಶಿಕ್ಷೆಗೆ ಒಳಪಡಿಸಲಾಗುತ್ತಿದೆ. ಇದಕ್ಕೆ ಮುಂಬೈ ದಾಳಿಯ ಆರೋಪಿ ಕಸಬ್‌ನ ವಿಚಾರಣೆಯೆ ಸಾಕ್ಷಿ. ಯಾವುದೇ ವ್ಯಕ್ತಿ ಸಮಾಜದಲ್ಲಿ ಗೌರವದಿಂದ ಜೀವಿಸುವ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ಸರಕಾರಿ ಅಭಿಯೋಜಕಿ ಶಾಂತಾ ಬಾಯಿ ಉಪಸ್ಥಿತರಿದ್ದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಶ್ರೀಪತಿ ಆಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಉಪಾಧ್ಯಕ್ಷ ಪೃಥ್ವಿರಾಜ ಹೆಗ್ಡೆ ಸ್ವಾಗತಿಸಿದರು. ವಕೀಲ ಶ್ರೀಶ ಆಚಾರ್ಯ ನಿರೂಪಿಸಿದರು.