Advertisement
ಬದುಕು ಬದಲಿಸಿದ ಕಲೆ
ಪಿಯು ಶಿಕ್ಷಣದ ಬಳಿಕ ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆಯಲ್ಲಿ ವಿಧಿಯುಕ್ತವಾಗಿ ಚಿತ್ರಕಲೆಯನ್ನು ಅಭ್ಯಸಿಸಿದ ಮನೋಜ್‌ಗೆ ಈಗ 37ರ ಹರೆಯ. ಶಾಲೆಯಲ್ಲಿ ಕಲಿತ ವಿದ್ಯೆಯ ಜತೆಗೆ ಸ್ವಂತ ಪರಿಶ್ರಮದ ಫಲವಾಗಿ ಜಲವರ್ಣ ಶೈಲಿಯ ಚಿತ್ರಗಳ ರಚನೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಮೈಸೂರು ಶೈಲಿಯ ಸಾಂಪ್ರದಾಯಿಕ ಚಿತ್ರಕಲೆಯಲ್ಲೂ ತರಬೇತಿ ಪಡೆಯಲು ಚಿತ್ರಕಲಾ ಶಾಲೆಯ ಶಿಬಿರ ನೆರವಾಯಿತು. ಸ್ವಯಂ ಪ್ರತಿಭೆಯಿಂದ ಸ್ಪ್ರೇ ಪೈಂಟಿಂಗ್‌ನಲ್ಲೂ ನೈಪುಣ್ಯ ಗಳಿಸಿದರು. ಬಳಿಕ ಮಂಗಳೂರಿನ ಶಾರದಾ ವಿದ್ಯಾಲಯ, ಶುಭೋದಯ ವಿದ್ಯಾಲಯ ಮೂಡುಶೆಡ್ಡೆಗಳಲ್ಲಿ ಚಿತ್ರಕಲಾ ಶಿಕ್ಷಕರಾಗಿ ನೂರಾರು ವಿದ್ಯಾರ್ಥಿಗಳಿಗೆ ಈ ಕಲೆಗಳನ್ನು ಧಾರೆಯೆರೆದರು. ಬೇಸಗೆ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೂಡ ಅವರು ಮಾಹಿತಿ ಒದಗಿಸಿದರು. ಅನಂತರ ಕಲೆಯೇ ಮನೋಜ್‌ಗೆ ಬದುಕು ನೀಡಿತು. ಅಲಂಕಾರಿಕ ವಸ್ತುಗಳ ವಿನೂತನ ಶೈಲಿಯನ್ನೇ ಆರಂಭಿಸಿದರು. ಸಮಾರಂಭಗಳಿಗೆ ಆಕರ್ಷಕವಾದ ವೇದಿಕೆಗಳನ್ನು ನಿರ್ಮಿಸಿದರು. ಶೋಭಾಯಾತ್ರೆ ಇನ್ನಿತರ ಮೆರವಣಿಗೆಗಳಿಗೆ ಬೇಕಾದ ಸ್ತಬ್ಧಚಿತ್ರಗಳ ರಚನೆಯಲ್ಲೂ ಹೆಸರು ಬಂತು.
ಮನೋಜ್‌ರ ಕಲಾ ಪ್ರೌಢಿಮೆ ಅಗಾಧವಾಗಿ ತೆರೆದುಕೊಂಡದ್ದು ಫೈಬರ್ ಕಲಾಕೃತಿಗಳ ನಿರ್ಮಾಣದಲ್ಲಿ. ಆಳೆತ್ತರದ ಹುಲಿ ದನದಂತಹ ಪ್ರಾಣಿಗಳು, ಹೂವಿನಲ್ಲಿ ಕುಳಿತ ಜೇನ್ನೊಣ, ಎತ್ತಿನ ಗಾಡಿ, ನಾನಾ ಬಗೆಯ ಮಂದಿರಗಳು, ಪ್ರಧಾನಿ ನರೇಂದ್ರ ಮೋದಿ ಮೊದಲಾದವರ ಪ್ರತಿಮೆಗಳು, ಯಕ್ಷಗಾನ, ಹುಲಿವೇಷಗಳು ವರ್ಣಮಯವಾಗಿ ಎದ್ದು ನಿಂತು ನೈಜತೆಯನ್ನು ನಾಚಿಸಿದವು. ಮನೆ, ವಿಶ್ರಾಂತಿಧಾಮಗಳು, ಉದ್ಯಾನಗಳಿಗೆ ಬೇಕಾದ ಇಂತಹ ವಿನ್ಯಾಸಗಳ ಜತೆಗೆ ಜಲಪಾತಗಳು, ಕಾರಂಜಿಗಳು, ಸ್ಮಾರಕಗಳಿಗೆ ರಾಷ್ಟ್ರೀಯ ನಾಯಕರ ಪ್ರತಿಕೃತಿಗಳು, ಗೊಮ್ಮಟೇಶ್ವರನಂಥ ವಿಗ್ರಹಗಳು ಅವರ ಬೆರಳುಗಳಿಂದ ಸೃಷ್ಟಿಯಾಗಿವೆ. ಮನ ಸೆಳೆಯುವ ಫೈಬರ್ ಮಂಟಪಗಳೂ ಎದ್ದು ನಿಂತಿವೆ. ಕಾಂಕ್ರೀಟ್ ಅಥವಾ ಪ್ಲಾಸ್ಟರ್ ಆಫ್ ಪ್ಯಾರೀಸ್ ಕಲಾಕೃತಿಗಳಿಗಿಂತ ಫೈಬರ್ ಕಲಾಕೃತಿಗಳು ಬೇಕಾದಲ್ಲಿಗೆ ಒಯ್ಯಲು ಹಗುರವಾಗಿದ್ದು, ಅದಕ್ಕಿಂತಲೂ ಆಕರ್ಷಕವಾಗಿವೆೆಯೆಂದು ಕಂಡವರು ಮೆಚ್ಚಿಕೊಳ್ಳುತ್ತಾರೆ.
ನಿರಂತರ ದುಡಿಮೆ
ಪುಟ್ಟ ಹಕ್ಕಿಯಿಂದ ಆರಂಭಿಸಿ ಏಳು ಅಡಿ ಎತ್ತರದ ಆನೆಯ ತನಕ ಮನೋಜ್ ಕಲಾಕೃತಿಯನ್ನು ತಯಾರಿಸುತ್ತಾರೆ. ಕಬ್ಬಿಣದ ತಂತಿಯಿಂದ ಪ್ರತಿಕೃತಿ ತಯಾರಿಕೆ, ಅದಕ್ಕೆ ಒಣಹುಲ್ಲಿನ ಹೊದಿಕೆ, ಆವೆ ಮಣ್ಣಿನ ಲೇಪನ, ಗೋಣಿ ನಾರೂ ಬೇಕಾಗುತ್ತದೆ. ಅಂತಿಮ ಹಂತದಲ್ಲಿ ಫೈಬರ್ ಹೊದಿಕೆ, ಬೇಕಾದ ಬಣ್ಣಗಳ ಲೇಪನ. ಈ ಸಲಕರಣೆಗಳಲ್ಲದೆ ಕೆಲವು ರಾಸಾಯನಿಕಗಳೂ ಬೇಕಾಗುತ್ತವೆ. ಒಂದು ಆನೆ ತಯಾರಿಕೆಗೆ 25 ದಿನಗಳು ಬೇಕು. 5 ಮಂದಿಯ ನಿರಂತರ ದುಡಿಮೆಯ ಫಲವಾಗಿ ನಿಜವಾದ ಆನೆಯನ್ನು ಬೆಚ್ಚಿ ಬೀಳಿಸುವ ಫೈಬರ್ ಆನೆ ಎದ್ದು ನಿಲ್ಲುತ್ತದೆ.
Related Articles
Advertisement
– ಎಂ. ಎನ್. ಕುಮಾರ್, ಮೆಲ್ಕಾರ್