Advertisement
ಅರ್ಚಕರಾದ ಮಹಾಬಲೇಶ್ವರ ಭಟ್ಟರು ಅನೇಕ ವರ್ಷಗಳಿಂದಲೂ ಸಾವಯವ ಕೃಷಿಕರಾಗಿದ್ದಾರೆ. ಅರ್ಚಕ ವೃತ್ತಿಯ ಜತೆಗೆ ಅಡಿಕೆ ಪ್ರಮುಖ ಬೆಳೆ. ಜತೆಗೆ ಕೊಕೋ, ಕಾಳುಮೆಣಸು, ಬಾಳೆ. ಆದರೆ ಇದೆಲ್ಲಾ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿರಲಿಲ್ಲ. ತೋಟದ ನಡುನಡುವೆ ಅಡಿಕೆ ಮರದ ಸೋಗೆ ಕೆಂಪಾಗಿ ಎದ್ದು ಕಾಣುತ್ತಿತ್ತು.
ತಮ್ಮ ಅಡಿಕೆ ತೋಟದ ಸುಮಾರು 380 ಅಡಿಕೆ ಮರಗಳಿಗೆ ಕಂಪನಿಗಳಿಂದ ಸಾವಯವ ಗೊಬ್ಬರ ಖರೀದಿ ಮಾಡಿ ಹಾಕುತ್ತಿದ್ದರು. 17 ವರ್ಷಗಳಿಂದ ಇದೇ ರೀತಿ ಮಾಡುತ್ತಾ ಬಂದಿದ್ದರೂ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಅದೊಂದು ದಿನ ಕೃಷಿ ಋಷಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಲ್ಲಿಂದ ವಿವಿಧ ಪ್ರಯೋಗ ಮಾಡುತ್ತಲೇ ಇದ್ದರು. ಬಳಿಕ ನೆಕ್ಕರಕಳೆಯ ಸುಬ್ರಹ್ಮಣ್ಯ ಪ್ರಸಾದ್ ಎಂಬ ಕೃಷಿಕರು ನೀಡಿದ ಮಾಹಿತಿ ಆಧಾರದಲ್ಲಿ ತಾವೇ ಸ್ವತಃ ಗೊಬ್ಬರ ತಯಾರು ಮಾಡಲು ಶುರು ಮಾಡಿದರು. ಅದಕ್ಕಾಗಿಯೇ ದೇಸೀ ಗೋವನ್ನು ಸಾಕಲು ಆರಂಭಿಸಿದರು. ಅದುವರೆಗೆ ಇದ್ದ ವಿವಿಧ ತಳಿಯ ಗೋವುಗಳ ಸಾಕಾಣಿಗೆ ದೂರ ಮಾಡಿ ದೇಸೀ ತಳಿಯ ಗೋವನ್ನು ಸಾಕಿದರು. ಅದುವರೆಗೆ ಇದ್ದ ಗೋಬರ್ ಗ್ಯಾಸ್, ಸ್ಲರಿ ಪದ್ದತಿ ಬಿಟ್ಟರು. ಕೇವಲ ದೇಸೀ ಗೋವಿನ ಸೆಗಣಿ ಸಂಗ್ರಹಿಸಿ ಅದರ ಮೂಲಕವೇ ಗೊಬ್ಬರ ತಯಾರು ಮಾಡಿ ಅಡಿಕೆ ಮರ ಸಹಿತ ತಮ್ಮೆಲ್ಲಾ ಕೃಷಿಗೆ ಹಾಕಿದರು. ಕೆಲವೇ ಸಮಯದಲ್ಲಿ ಬದಲಾವಣೆ ಕಂಡರು. ಈಗ ಸೆಗಣಿಗಾಗಿಯೇ ಗೋವನ್ನು ಸಾಕಲು ಶುರು ಮಾಡಿದ್ದಾರೆ. ದನ ಹಾಲು ಕೊಡುವುದಕ್ಕಾಗಿಯೇ ಇರುವುದು ಎಂಬ ಭಾವವೇ ಇಲ್ಲ. ಹಾಲಿನಿಂದಲೇ ಲಾಭ ಅಲ್ಲ ಎಂಬ ಮನೋಭಾವ ಬೆಳೆಸಿದ್ದಾರೆ.
Related Articles
Advertisement
ಲಾಭ ಹೇಗೆ?ದನದ ಸೆಗಣಿ ಹೇಗೆ ಲಾಭ ಎಂಬುದನ್ನೂ ಅವರೇ ವಿವರಿಸುತ್ತಾರೆ. ಅವರ 2 ದನಗಳು ದಿನಕ್ಕೆ 17 ಕೆಜಿ ಸೆಗಣಿ ಹಾಕುತ್ತದೆ. ಇವನೆಲ್ಲ ಸಂಗ್ರಹ ಮಾಡುತ್ತಾ ಸುಮಾರು 700 ಕೆಜಿ ಸೆಗಣಿ ಸಂಗ್ರಹವಾದ ಬಳಿಕ ಅದಕ್ಕೆ ಜೀವಾಮೃತ ಸಿಂಪಡಣೆ ಮಾಡಿ ಅನಂತರ 2 ತಿಂಗಳ ಕಾಲ ಮುಚ್ಚಿಡುತ್ತಾರೆ. ಅನಂತರ 700 ಕೆಜಿಗೆ ತಲಾ ಶೇ. 30 ರಂತೆ ಹೊಂಗೆ, ಹರಳಿಂಡಿ, ಬೇವಿನಹಿಂಡಿ ಹಾಗೂ ರಾಕ್ ಪಾಸ್ಪೇಟ್‌ನೊಂದಿಗೆ ಮಿಶ್ರಣ ಮಾಡಿ ಗೋಣಿಯಲ್ಲಿ ತುಂಬಿ ಕೃಷಿಗೆ ಅಳವಡಿಸುತ್ತಿದ್ದಾರೆ. ಈಗ ಅಡಿಕೆ ಮರದ ಸೋಗೆ, ಹಿಂಗಾರ ಉದ್ದ ಬರುತ್ತಿದೆ, ಹಳದಿಯಾಗಿಯೇ ಇರುತ್ತಿದ್ದ ಅಡಿಕೆ ಮರದ ಸೋಗೆ ಹಸುರಾಗಿದೆ. — ಬಾಲಕೃಷ್ಣ ಭೀಮಗುಳಿ