Advertisement
ಮಕ್ಕಳ ಮೃಗೀಯ ವರ್ತನೆಇಬ್ಬರು ಪುತ್ರರನ್ನು ಯಾರ್ಯಾರ ಮನೆ ಕೆಲಸ ಮಾಡಿ ಸಲಹಿದೆ. ದೊಡ್ಡವರಾದ ಆನಂತರ ಪ್ರತಿದಿನ ಕುಡಿದು ಬಂದು ವೃದ್ಧೆ, ತಾಯಿ ಎನ್ನುವುದನ್ನು ಲೆಕ್ಕಿಸದೇ ಮನಬಂದಂತೆ ಹೊಡೆಯುತ್ತಿದ್ದು, ಕ್ರೂರ ಮೃಗಗಳಂತೆ ವರ್ತಿಸುತ್ತಿದ್ದರು ಎಂದು ಸುಲೋಚನಾ ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಣ್ಣೀರಿಟ್ಟರು.
2016ರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಸುಲೋಚನಾ ಅಳಲು ತೋಡಿಕೊಂಡಿದ್ದರು. ಆಗ ಅಜೆಕಾರು ಠಾಣೆಯಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಮನೆಯನ್ನು ತಾಯಿಗೆ ಬಿಟ್ಟುಕೊಡುತ್ತೇನೆಂದು ಪುತ್ರ ರಮಾಕಾಂತ ಪೊಲೀಸರಿಗೆ ಬರೆದು ಕೊಟ್ಟಿದ್ದರು. ಆದರೆ ಆಕೆಗೆ ಮನೆ ಮಾತ್ರ ಸಿಗಲೇ ಇಲ್ಲ. 2016ರ ಮಾರ್ಚ್‌ನಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ, ಕುಂದಾಪುರದ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ನೀಡಿದರು. 8 ತಿಂಗಳ ಕಾಲ ವಿಚಾರಣೆ ನಡೆಸಿದ ನ್ಯಾಯ ಮಂಡಳಿ ಪ್ರತಿ ತಿಂಗಳು ರಮಾಕಾಂತ ಅವರ ತಾಯಿಗೆ 6,000 ರೂ. ಪೋಷಣೆ ಭತ್ತೆ ನೀಡಬೇಕೆಂದು ತೀರ್ಪು ನೀಡಿತು. ಆದರೆ ಆತ ವಿಚಾರ ಣೆಗೂ ಹಾಜರಾಗಿಲ್ಲ, ಹಣವನ್ನೂ ನೀಡಿಲ್ಲ. ಮಂಡಳಿಯು ಮನೆ ಸ್ವಾಧೀನದ ಕುರಿತು ಸ್ಪಷ್ಟ ಆದೇಶ ನೀಡದ್ದರಿಂದ ಸುಲೋಚನಾ ಪೈ ಜಿಲ್ಲಾಧಿಕಾರಿಗಳ ಮೊರೆ ಹೋದರು. ವಿಚಾರಣೆ ನಡೆಸಿದ ಜಿಲ್ಲಾಧಿಕಾರಿ, ಮನೆಯನ್ನು ತಾಯಿಗೆ ನೀಡುವಂತೆ ಕಾರ್ಕಳ ತಹಶೀಲ್ದಾರ್‌ಗೆ ಸೂಚಿಸಿದ್ದಾರೆ.
Related Articles
ಇದೇ ವೇಳೆ ಪ್ರತಿಷ್ಠಾನವನ್ನು ಸಂಪರ್ಕಿಸಿದ ಪುತ್ರ ರಮಾಕಾಂತ ನಾನು ಯಾವುದೇ ಕಾರಣಕ್ಕೂ ಮನೆ ಬಿಟ್ಟು ಕೊಡಲಾರೆ; ಏನು ಮಾಡಬೇಕೆಂದು ಗೊತ್ತಿದೆ ಎಂದು ಬೆದರಿಕೆ ಹಾಕಿದ್ದ. ಪ್ರತಿಷ್ಠಾನವು ಕಾರ್ಕಳ ತಹಶೀಲ್ದಾರರನ್ನು ಸಂಪರ್ಕಿಸಿ, ಮನೆಯನ್ನು ಸುಲೋಚನಾ ಸ್ವಾಧೀನಕ್ಕೆ ಒಪ್ಪಿಸುವಂತೆ ಹಾಗೂ ಜೀವ ರಕ್ಷಣೆ ನೀಡಬೇಕೆಂದು ಮನವಿ ಮಾಡಿದೆ.
Advertisement
ನಾಗರಿಕರ ಸಹಾಯ ಅಗತ್ಯಕಾನೂನು ಅಥವಾ ಸರಕಾರಿ ಇಲಾಖೆಗಳಿಂದ ಮಾತ್ರ ಹಿರಿಯ ನಾಗರಿಕರ ರಕ್ಷಣೆ ಸಾಧ್ಯವಿಲ್ಲ. ಅಧಿಕಾರಿಗಳೊಂದಿಗೆ ಸ್ಥಳೀಯ ನಾಗರಿಕರು ಕೈ ಜೋಡಿಸಿದಲ್ಲಿ ಮಾತ್ರ ಅಸಹಾಯಕರನ್ನು ರಕ್ಷಿಸಲು ಸಾಧ್ಯ. ಸುಲೋಚನಾ ಪೈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಒಳ್ಳೆಯ ತೀರ್ಮಾನ ತೆಗೆದುಕೊಂಡಿದ್ದಾರೆ. ಆದರೆ ಗ್ರಾಮದ ನಾಗರಿಕರ ಸಹಕಾರವಿಲ್ಲದೆ ಆಕೆಗೆ ನ್ಯಾಯ ಮತ್ತು ರಕ್ಷಣೆ ಸಿಗುವುದು ಕಷ್ಟ.
– ಡಾ| ರವೀಂದ್ರನಾಥ ಶಾನುಭಾಗ್, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಮಕ್ಕಳಿಂದ ರಕ್ಷಣೆ ನೀಡಿ
ಹಿರಿಯ ಪುತ್ರ ರಮಾಕಾಂತ್ ಹಾಗೂ ಅವರ ಪತ್ನಿ ಮನೆಯಲ್ಲಿ ವಾಸ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ. ಕಲ್ಲು ಎತ್ತಿಹಾಕಿ ಸಾಯಿಸಿ ಗೋಣಿಗೆ ತುಂಬಿಸಿ ಹೊಳೆಗೆ ಎಸೆಯುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಕತ್ತಿ ಹಿಡಿದು ಓಡಿಸಿಕೊಂಡು ಬರುತ್ತಾನೆ. ಕಿರಿಯ ಪುತ್ರ ಭರತ ಕೂಡ ಕುಡಿಯಲು ಹಣವಿಲ್ಲದಿದ್ದಾಗ ಬಂದು ಪೀಡಿಸುತ್ತಾನೆ. ನನಗೆ ಮಕ್ಕಳ ಹಣ, ಆಶ್ರಯ ಯಾವುದು ಬೇಡ. ನನ್ನ ಮನೆಯನ್ನು ಕೊಡಿಸಿ, ಅದನ್ನು ಮಾರಿ, ಆ ಹಣವನ್ನು ವೃದ್ಧಾಶ್ರಮಕ್ಕೆ ನೀಡಿ ಅಲ್ಲಿಯೇ ಇರುತ್ತೇನೆ. ನನ್ನ ಮಕ್ಕಳಿಂದ ರಕ್ಷಣೆ ನೀಡಿ.
– ಸುಲೋಚನಾ ಪೈ, ಸಂತ್ರಸ್ತ ವೃದ್ಧೆ