ಮುಡಿಪು: ಮಕ್ಕಳಿಗೆ ಮಾನವೀಯ ಸಂಬಂಧ ಗಟ್ಟಿಗೊಳಿಸುವ ಶಿಕ್ಷಣವನ್ನು ಕಲಿಸುವ ಕಾರ್ಯ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು. ಈ ನಿಟ್ಟಿನಲ್ಲಿ ಸೂರಜ್ ಕಲಾಸಿರಿಯಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಸ್ಕಾರದೊಂದಿಗೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಎಂ. ರವಿ ಅಭಿಪ್ರಾಯಪಟ್ಟರು.
ಸೂರಜ್ ಶಿಕ್ಷಣ ಸಂಸ್ಥೆ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಸೂರಜ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಡಿ. 21ರಿಂದ 23ರ ತನಕ ಮೂರು ದಿನಗಳ ಕಾಲ ನಡೆಯಲಿರುವ ಸಮೃದ್ಧ ಭಾರತ ಸಂಸ್ಕೃತ ದರ್ಶನ ‘ಸೂರಜ್ ಕಲಾಸಿರಿ’-2017ರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ವಿದ್ಯೆ ಎಂಬುದು ನಮಗೆ ವಿನಯ, ಸೌಜನ್ಯ, ಉಪಕಾರ ಮನೋಭಾವನೆ ಕಲಿಸಬೇಕು. ಹಾಗಿದ್ದರೆ ಮಾತ್ರ ಈ ಸಮಾಜಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೂರಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ್ ಎಸ್. ರೇವಣ್ಕರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬದುಕನ್ನು ಸಾರ್ಥಕಗೊಳಿಸುವ ಸಲುವಾಗಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾ ಕುಷ್ಠರೋಗ ಮತ್ತು ಅಂಧತ್ವ ನಿವಾರಣೆ ಅಧಿಕಾರಿ ಡಾ| ರತ್ನಾಕರ್, ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಕಲಾಸಿರಿ ಮಾಧ್ಯಮ ಸಮಿತಿ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಉಪಾಧ್ಯಕ್ಷರಾದ ಹೈದರ್‌ಪರ್ತಿಪ್ಪಾಡಿ, ಚಂದ್ರಹಾಸ ಕರ್ಕೇರ, ಸಂಘಟನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ, ಸಂಚಾಲಕ ತೋನ್ಸೆ ಪುಷ್ಕಳ ಕುಮಾರ್, ಕಾರ್ಯದರ್ಶಿ ಕೇಶವ ಹೆಗಡೆ, ಸದಸ್ಯರಾದ ಡಾ| ಸುರೇಖಾ ಹಾಗೂ ಲಕ್ಷ್ಮೀ ನಾರಾಯಣ ರೈ ಹರೇಕಳ ಉಪಸ್ಥಿತರಿದ್ದರು.
ಸೂರಜ್ ಸಂಸ್ಥೆಯ ಅಧ್ಯಕ್ಷ ಡಾ| ರೇವಣ್ಕರ್, ಮಮತಾ ಡಿ.ಎಸ್. ಗಟ್ಟಿ ಸೇರಿದಂತೆ ಗಣ್ಯರು ನೇತ್ರದಾನಕ್ಕೆ ನೋಂದಣಿ ಮಾಡಿಸಿದರು. ಕಲಾಸಿರಿ ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ ಹೆಗಡೆ ಸೋಂದಾ ಸ್ವಾಗತಿಸಿದರು. ಶಿಕ್ಷಕಿ ರಶ್ಮಿ ಕೆ. ಕಾರ್ಯಕ್ರಮ ನಿರೂಪಿಸಿದರು. ಸೂರಜ್ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ವಿಮಲಾ ಶೆಟ್ಟಿ ವಂದಿಸಿದರು.