ಬೀದರ್: ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಂವಿಧಾನದ ಮಹತ್ವ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಗಡಿನಾಡು ಬೀದರನಿಂದ ಚಾಮರಾಜ ನಗರದವರೆಗೆ ಹಮ್ಮಿಕೊಂಡಿರುವ ಮಾನವ ಸರಪಳಿಗೆ ವಿಶ್ವದ ಮೊದಲ ಪಾರ್ಲಿಮೆಂಟ್ ನೆಲವಾದ ಬಸವಕಲ್ಯಾಣದಲ್ಲಿ ರವಿವಾರ ಚಾಲನೆ ನೀಡಲಾಯಿತು.
ಕಲ್ಯಾಣದ ಅನುಭವ ಮಂಟಪದಲ್ಲಿ ಬೃಹತ್ ಮಾನವಪಳಿ ಮೂಲಕ ಪ್ರಜಾಪ್ರಭುತ್ವ ದಿನಾಚರಣೆಗೆ ಚಾಲನೆ ನೀಡಲಾಯಿತು. ಆ ಮೂಲಕ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವದ ಮಂತ್ರ ಜಪಿಸಲಾಯಿತು. ಸಂವಿಧಾನದ ಮಹತ್ವ ಸಾರುವ ಪ್ರಸ್ತಾವನೆ ಓದುವುದು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಗಾರಿಕೆ ನೆನಪಿಸುವ ಜಾಗೃತಿ ಮೂಡಿಸಲಾಯಿತು. ವಿವಿಧ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತ್ರಿವರ್ಣ ಧ್ವಜದೊಂದಿಗೆ ಕೈಕೈ ಹಿಡಿದು ಘೋಷಣೆ ಕೂಗಿ ಮಾನವ ಸರಪಳಿಗೆ ಕೈಜೋಡಿಸಿದರು. ದಿನಾಚರಣೆ ನೆನಪಿಗಾಗಿ ಸುತ್ತಮುತ್ತ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಯಿತು.
ಇದಕ್ಕೂ ಮುನ್ನ ನಡೆದ ವೇದಿಕೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ಅನುಭವ ಮಂಟಪದ ಮೂಲಕ ವಿಶ್ವದಲ್ಲೇ ಮೊದಲ ಪಾರ್ಲಿಮೆಂಟ್ ಸ್ಥಾಪನೆಯಾದ ನೆಲ ಬಸವಕಲ್ಯಾಣ. ಸಮ ಸಮಾಜದ ನಿರ್ಮಾಣಕ್ಕಾಗಿ ಬಸವಣ್ಣನವರ ನೇತೃತ್ವದಲ್ಲಿ ಸಮಾಜೋ ಧಾರ್ಮಿಕ ಕ್ರಾಂತಿ ನಡೆದಿತ್ತು. ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನದಲ್ಲಿ ಬಸವಾದಿ ಶರಣರ ಆಶಯಗಳು ಅಡಕವಾಗಿವೆ. ಹಾಗಾಗಿ ಈ ಪುಣ್ಯ ಭೂಮಿಯಿಂದ ಮಾನವ ಸರಪಳಿಗೆ ಚಾಲನೆ ದೊರೆತಿದ್ದು, ಬೀದರ ಜಿಲ್ಲೆಯಲ್ಲಿ 45 ಕಿ.ಮೀ ಮಾನವ ಸರಪಳಿ ನಿರ್ಮಿಸಲಾಗಿದೆ ಎಂದು ಹೇಳಿದರು.
ಜಾತಿ- ಜಾತಿ, ಧರ್ಮ- ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ನಡೆಯುತ್ತಿದ್ದು, ಇದು ತಪ್ಪಬೇಕಾದರೆ ಸಂವಿಧಾನದ ಆಶಯಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಬೇಕಾದ ಅಗತ್ಯವಿದೆ. ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದ್ದು, ಸಂವಿಧಾನದ ಆಶಯಗಳನ್ನು ಮುಂದಿನ ಯುವ ಪೀಳಿಗೆಗೆ ಪರಿಚಯ ಮಾಡಿಕೊಡುವುದು, ಸಮಾನತೆ, ಸ್ವಾತಂತ್ರ್ಯ, ಭಾತೃತ್ವದ ವಿಚಾರಗಳ ಮೇಲೆ ನಮ್ಮ ಸಮಾಜ ರೂಪಗೊಳ್ಳಬೇಕೆಂಬುದು ರಾಜ್ಯದ ಸರ್ಕಾರದ ಆಶಯವಾಗಿದೆ ಎಂದು ತಿಳಿಸಿದರು.
ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು, ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಪೌರಾಡಳಿತ ಸಚಿವ ರಹೀಮ್ ಖಾನ್, ಶಾಸಕ ಶರಣು ಸಲಗರ್, ವಿಧಾನ ಪರಿಷತ್ ಸದಸ್ಯ ಮಾರುತಿರಾವ್ ಮುಳೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿ.ಪಂ ಸಿಇಒ ಡಾ. ಗಿರೀಶ್ ಬದೋಲೆ, ಜಿಲ್ಲಾ ಎಸ್‌ಪಿ ಪ್ರದೀಪ್ ಗುಂಟಿ, ಡಿಎಫ್‌ಒ ವಾನತಿ, ರಾಜ್ಯ ನೋಡಲ್ ಅಧಿಕಾರಿ ಪ್ರವೀಣ ಪಾಟೀಲ ಮತ್ತು ಹೆಚ್ಚುವರಿ ಡಿಸಿ ಶಿವಕುಮಾರ ಶೀಲವಂತ ಮತ್ತಿತರರಿದ್ದರು.
ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, 2025ರ ಡಿಸೆಂಬರ್ ಅಂತ್ಯಕ್ಕೆ ಕೆಲಸ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲಾಗುವುದು. ಹಿರಿಯ ತ್ಯಾಗ, ಬಲಿದಾನದ ಪ್ರತೀಕವಾದ ಸಂವಿಧಾನದ ಅನುಷ್ಠಾನಕ್ಕೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ. ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ರಾಜ್ಯಾದ್ಯಂತ ಈ ದಿನದಂದು 10 ಸಾವಿರ ಸಸಿಗಳನ್ನು ನೆಡುವ ಗುರಿ ಇದೆ. ಪ್ರಕೃತಿ ಸಂರಕ್ಷಣೆಗೆ ಪ್ರತಿಯೊಬ್ಬರು ಕೈಜೋಡಿಸಿ ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.