ನಾಸಿಕ್: ಕಟ್ಟಡದ ನೆಲಮಾಳಿಗೆಯಲ್ಲಿ ಮುಚ್ಚಿರುವ ಅಂಗಡಿಯೊಂದರಲ್ಲಿ ಮನುಷ್ಯನ ವಿವಿಧ ಅಂಗಗಳು ಪತ್ತೆಯಾಗಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ನಗರದಲ್ಲಿ ನಡೆದಿರುವುದಾಗಿ ಪೊಲೀಸರು ಸೋಮವಾರ (ಮಾರ್ಚ್ 28) ತಿಳಿಸಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಿಷ್ಠವಾಗಲಿ ಎಂಬುದು ನನ್ನ ಹಾರೈಕೆ…ಗಡ್ಕರಿ ಕೊಟ್ಟ ಸಲಹೆ ಏನು?
ಕಳೆದ ಎರಡು ದಿನಗಳಿಂದ ಕೆಟ್ಟ ವಾಸನೆ ಬರುತ್ತಿದ್ದು, ಈ ಬಗ್ಗೆ ಸ್ಥಳೀಯ ನಿವಾಸಿಗಳು ಭಾನುವಾರ ರಾತ್ರಿ ಪೊಲೀಸರಿಗೆ ವಿಷಯ ತಿಳಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮುಚ್ಚಿರುವ ಅಂಗಡಿ ಕೋಣೆಯ ಬಾಗಿಲು ತೆಗೆದಾಗ ಅಲ್ಲಿ ಹಳೆಯ ವಸ್ತುಗಳು ತುಂಬಿಕೊಂಡಿದ್ದು, ಎರಡು ಪ್ಲ್ಯಾಸ್ಟಿಕ್ ಬ್ಯಾಗ್ ಪತ್ತೆಯಾಗಿತ್ತು. ಅದನ್ನು ತೆರೆದು ನೋಡಿದಾಗ ಮನುಷ್ಯನ ಕಿವಿಗಳು, ಮೆದುಳು, ಕಣ್ಣು ಹಾಗೂ ಮುಖದ ಕೆಲವು ಭಾಗಗಳು ಸಿಕ್ಕಿರುವುದಾಗಿ ವರದಿ ತಿಳಿಸಿದೆ.
ಮನುಷ್ಯನ ದೇಹದ ವಿವಿಧ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮುಂದಿನ ತನಿಖೆ ನಡೆಸಲಾಗುತ್ತಿದೆ. ಅಂಗಡಿ ಮಾಲೀಕರ ಇಬ್ಬರು ಮಕ್ಕಳು ವೈದ್ಯರಾಗಿದ್ದಾರೆ. ಆ ನಿಟ್ಟಿನಲ್ಲಿ ಮನುಷ್ಯನ ದೇಹದ ಭಾಗಗಳನ್ನು ವೈದ್ಯಕೀಯ ಉದ್ದೇಶಕ್ಕಾಗಿ ಸಂರಕ್ಷಿಸಿರುವ ಸಾಧ್ಯತೆ ಇದ್ದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಕುರಿತು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಆದರೆ ಈವರೆಗೆ ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಮುಂಬೈ ನಾಕಾ ಪೊಲೀಸ್ ಠಾಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.