ಆಳಂದ: ಜಾತಿ, ಧರ್ಮಗಳನ್ನು ಮೀರಿ ವಿಶ್ವ ಬಂಧುತ್ವ ಮಾನವೀಯತೆ ಸೌಹಾರ್ಧತೆ ಸಂದೇಶ ಸಾರಿದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು ದೇಶ, ನಾಡು ಕಂಡ ಹೆಮ್ಮೆಯ ನಾಯಕರು. ಅವರು ಕೊಟ್ಟ ಸಾಹಿತ್ಯ ಮತ್ತು ವಿಚಾರಗಳನ್ನು ಮೈಗೂಡಿಕೊಳ್ಳುವುದು ಅಗತ್ಯವಿದೆ ಎಂದು ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕುವೆಂಪು ಮೂಢನಂಬಿಕೆ, ಕಂದಾಚಾರ ಹೊಡೆದೊಡಿಸಲು ಯತ್ನಿಸಿದ್ದರು. ವೈಜ್ಞಾನಿಕ ವಿಚಾರಗಳನ್ನು ಬೋಧಿಸಿ ಹೊಸದಾರಿ ತೋರಿಸಿದ ಹಿನ್ನೆಲೆಯಲ್ಲಿ ಇಡೀ ಜಗತ್ತೇ ಅವರನ್ನು ಗುರುತಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಕುವೆಂಪು ಅವರನ್ನು ಸ್ಮರಿಸಿ ಅವರ ತತ್ವ , ಆಚರಣೆಗಳನ್ನು ಜನಮಾನಸಕ್ಕೆ ತಲುಪಿಸುವ ಉದ್ದೇಶದಿಂದ ವಿಶ್ವಮಾನ ದಿನ ಆಚರಣೆಗೆ ಮುಂದಾಗಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಶಾಲೆ, ಕಾಲೇಜುಗಳಲ್ಲಿ ಕುವೆಂಪು ಅವರ ಬದುಕು, ಸಂದೇಶವನ್ನು ತಲುಪಿಸುವ ಕಾರ್ಯ ನಡೆಯಬೇಕು. ಮಹಾನ್ ವ್ಯಕ್ತಿಗಳನ್ನು ದೇವರನ್ನಾಗಿ ಮಾಡದೆ, ಅವರ ವಿಚಾರಗಳನ್ನು ಪಾಲನೆಗೆ ತರುವುದು
ಇಂದಿನ ಅಗತ್ಯವಾಗಿದೆ ಎಂದರು.
ಉಪನ್ಯಾಸ ನೀಡಿದ ಸ್ಥಳೀಯ ಜೈನ ದಿಗಂಬರ ಪ್ರೌಢಶಾಲೆ ಸಹ ಶಿಕ್ಷಕಿ ವೈಶಾಲಿ ಪಾಟೀಲ, ಕುವೆಂಪು ಕವಿ, ಸಾಹಿತಿ, ಲೇಖಕರಾಗಿ ಜ್ಞಾನಪೀಠ ಸೇರಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ
ನೀಡಿದ್ದಾರೆ ಎಂದು ಹೇಳಿದರು.
ತಹಶೀಲ್ದಾರ್ ಬಸವರಾಜ ಎಂ. ಬೆಣ್ಣೆಶಿರೂರ ಮಾತನಾಡಿ, ಕನ್ನಡ ಉಳಿಸಿ ಬೆಳೆಸಲು ಕುವೆಂಪು ಕೊಡುಗೆ ನೀಡಿದ್ದಾರೆ. ಅವರ ಆದರ್ಶವನ್ನು ಮೆಲುಕು ಹಾಕಲು ವಿಶ್ವ ಮಾನವ ದಿನ ಆಚರಿಸಲಾಗುತ್ತಿದೆ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ, ಜಿಪಂ ಎಇಇ ತಾನಾಜಿ ವಾಡೇಕರ್ ವೇದಿಕೆಯಲ್ಲಿದ್ದರು. ಗ್ರೇಡ್-ತಹಸೀಲ್ದಾರ ಬಿ.ಜಿ. ಕುದರಿ, ಶಿರಸ್ತೇದಾರ ರಾಕೇಶ ಶೀಲವಂತ, ಶ್ರೀನಿವಾಸ ಕುಲಕರ್ಣಿ, ದಲಿತ ಸೇನೆ ಅಧ್ಯಕ್ಷ
ಮಲ್ಲಿಕಾರ್ಜುನ ಬೋಳಣಿ, ದಯಾನಂದ ಶೇರಿಕಾರ, ರಮೇಶ ಮಾಡಿಯಾಳಕರ್, ಮಹಾಂತಪ್ಪ ಐಹೊಳೆ ಸಾಲೇಗಾಂವ, ಕಸಾಪ ಅಧ್ಯಕ್ಷ ವಿಶ್ವನಾಥ ಭಕರೆ, ಕಂದಾಯ ನಿರೀಕ್ಷಕ ಶರಣಬಸಪ್ಪ ಹಕ್ಕಿ, ವಿಎ ರಮೇಶ ಮಾಳಿ ಇನ್ನಿತರರು ಹಾಜರಿದ್ದರು. ವಿ.ಎ. ಸುಮನ ಕವಲಗಾ ನಿರೂಪಿಸಿದರು. ಕವಿತಾ ವಂದಿಸಿದರು