ಒಂದು ಮನೆಯಲ್ಲಿನ ನಾಯಿ ಮತ್ತು ಬೆಕ್ಕು ಸ್ನೇಹದಲ್ಲಿರುವುದನ್ನು ನಾವು ನೋಡಿದ್ದೇವೆ. ಒಂದು ಕೊಟ್ಟಿಗೆಯಲ್ಲಿನ ಹಸುಗಳು ಮತ್ತು ಮೇಕೆಗಳು ಸಹಬಾಳ್ವೆಯಿಂದ ಬದುಕುವುದನ್ನು ಗಮನಿಸಿದ್ದೇವೆ. ಆನೆ, ಕುದುರೆ ಮುಂತಾದ ಪ್ರಾಣಿಗಳು ತನ್ನ ಮಾಲಕನ ಜತೆಗೆ ಸಹಕಾರದಿಂದ ಇರುವುದನ್ನು ನಾವು ಕಾಣುತ್ತೇವೆ. ಆಲದ ಮರವು ನೂರಾರು ಪ್ರಾಣಿಗಳಿಗೆ ನೆರಳನ್ನು ನೀಡುತ್ತದೆ. ಮರದಲ್ಲಿ ಹತ್ತಾರು ಪಕ್ಷಿಗಳು ಆಶ್ರಯ ಪಡೆಯುತ್ತವೆ. ಸಸ್ಯಗಳು ಪ್ರಾಣಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಕಾರ ನೀಡುತ್ತಾ ಬಂದಿವೆ. ಉಸಿರಾಡಲು ಆಮ್ಲಜನಕ, ತಿನ್ನಲು ಆಹಾರ ನೀಡುತ್ತಾ ಬಂದಿವೆ. ಇಲ್ಲೆಲ್ಲೂ ಸ್ವಾರ್ಥವೆಂಬುದಿಲ್ಲ. ಆದರೆ ಬುದ್ಧಿಜೀವಿಯಾದ ಮನುಷ್ಯ ಮನುಷ್ಯರ ನಡುವೆ ಸಹಕಾರದ ಕೊರತೆ ಏಕೆ ಎದ್ದು ಕಾಣುತ್ತಿದೆ? ಹಾಗಾದರೆ ಸಹಬಾಳ್ವೆಯಿಂದ ಜೀವನ ನಡೆಸಲು ಮನುಷ್ಯರಿಗೆ ಸಾಧ್ಯವಿಲ್ಲವೇ?…
ಖಂಡಿತ ಸಾಧ್ಯವಿದೆ. ನಾನು, ನನ್ನದು ಎಂಬ ಸ್ವಾರ್ಥ ಮನೋಭಾವ, ನಾನೇ ಎಲ್ಲ, ನನ್ನಿಂದಲೇ ಎಲ್ಲ, ನಾನು ಎಣಿಸಿದಂತೆ ನಡೆಯಬೇಕು ಎಂಬ ದುರಹಂಕಾರವು ಮನುಷ್ಯನ ಬುದ್ಧಿಯನ್ನು ವಿಕಾರಗೊಳಿಸುತ್ತದೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಮಾತಿನಂತೆ ಮನೆ ಮಂದಿಯೆಲ್ಲ ಒಗ್ಗಟ್ಟಿನಿಂದ ಬಾಳಿದರೆ ಖಂಡಿತ ಆ ಮನೆ ಸ್ವರ್ಗವಾಗುವುದರಲ್ಲಿ ಸಂಶಯವಿಲ್ಲ.
ಈ ಮೌಲ್ಯಗಳನ್ನು ಮೊದಲು ಮನೆಯಲ್ಲೇ ಕಲಿಸಬೇಕು. ಪರಸ್ಪರ ಸಹಕಾರ ಮನೋಭಾವ, ಹಂಚಿ ತಿನ್ನುವುದು, ಪ್ರೀತಿ, ಸ್ನೇಹ, ನಂಬಿಕೆ, ವಿಶ್ವಾಸ ಮೊದಲಾದ ಮಾನವೀಯ ಮೌಲ್ಯಗಳನ್ನು ಮಗು ಬಾಲ್ಯದಿಂದಲೇ ಕಲಿಯಬೇಕು.
ನಾವು ಕೆಲಸ ಮಾಡುವ ಕಚೇರಿಯಲ್ಲಿ, ಕುಟುಂಬದ ಸದಸ್ಯರಲ್ಲಿ, ಸಂಬಂಧಿಕರ ಮಧ್ಯೆ, ನೆರೆಮನೆಯವರೊಂದಿಗೆ, ಗಂಡ ಹೆಂಡಿರ ಮಧ್ಯೆ, ಅಣ್ಣ ತಮ್ಮಂದಿರ ನಡುವೆ ಸ್ನೇಹ ಸಹಕಾರ, ಸಹಬಾಳ್ವೆ ಇಲ್ಲದಿದ್ದರೆ ನೆಮ್ಮದಿಯಿಂದ ಬಾಳುವುದು ತುಂಬಾನೆ ಕಷ್ಟ. ನಾನ್ಯಾಕೆ ಮಾಡಬೇಕು? ನಾನೊಬ್ಬನೇ ಇರುವುದಾ? ಯಾರೇನಾದರೂ ಮಾಡಲಿ, ನಂಗ್ಯಾಕೆ ಬಿಡು ಎನ್ನುವ ಉಡಾಫೆ ಮಾತುಗಳು ಸಂಬಂಧಗಳ ಮಧ್ಯೆ ಬಿರುಕನ್ನುಂಟು ಮಾಡುತ್ತದೆ. ಒಮ್ಮೊಮ್ಮೆ ಅತಿಯಾದ ಸ್ವಾಭಿಮಾನವು ಸಹ ಮನುಷ್ಯರನ್ನು ದೂರ ಮಾಡುತ್ತದೆ. ಮನುಷ್ಯರಾದ ನಾವು ಪ್ರಾಣಿಗಳಂತೆ ಕಚ್ಚಾಡದೇ ತಾಳ್ಮೆಯಿಂದ, ವಿವೇಚನೆಯಿಂದ ಬದುಕು ನಡೆಸಬೇಕು. ಕೆಲವೊಮ್ಮೆ ಅತಿಯಾದ ಕೆಲಸದ ಒತ್ತಡವು ಕೂಡ ಮನುಷ್ಯನನ್ನು ಬೇರೆಯವರೊಂದಿಗೆ ಬೆರೆಯದಂತೆ ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ಕೆಲಸವನ್ನು ಒಬ್ಬರೇ ಮಾಡುವುದಕ್ಕಿಂತ ಹಂಚಿಕೊಂಡು ಮಾಡುವುದರಿಂದ ಕೆಲಸದ ಹೊರೆಯೂ ಕಡಿಮೆಯಾಗಿ ಒತ್ತಡ ನಿವಾರಣೆಯಾಗುತ್ತದೆ. ಹಾಗೆಯೇ ಉಳಿದವರಿಗೂ ಜವಾಬ್ದಾರಿ ಬರುತ್ತದೆ. ಎಷ್ಟೇ ಕಷ್ಟ ಬಂದರೂ ಒಬ್ಬರನ್ನೊಬ್ಬರು ಬಿಟ್ಟು ಕೊಡದೇ ಪರಸ್ಪರ ಹೊಂದಾಣಿಕೆಯಿಂದ ಬಾಳಬೇಕು. ಏನೇ ವೈಮನಸ್ಸು ಬಂದರೂ ತತ್‌ಕ್ಷಣವೇ ಮುಕ್ತವಾಗಿ ಮಾತನಾಡಿ ಸರಿಪಡಿಸಿಕೊಳ್ಳಬೇಕೇ ವಿನಾ ಮುಖ ಊದಿಸಿಕೊಂಡು ಕುಳಿತುಕೊಳ್ಳಬಾರದು. ಬೇರೆಯವರ ಮೇಲೆ ಅನುಮಾನಗಳಿದ್ದಲ್ಲಿ ಮುಖಾಮುಖೀ ಮಾತನಾಡಿ ಬಗೆಹರಿಸಿಕೊಳ್ಳಬೇಕು.
ಅದೇ ರೀತಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿತಿರಬೇಕು. ಅದನ್ನು ಚಾಚೂ ತಪ್ಪದೆ ಪಾಲಿಸಬೇಕು. ಅದರ ಬದಲಾಗಿ ಕೇವಲ ನಮ್ಮ ಹಕ್ಕನ್ನಷ್ಟೇ ಚಲಾಯಿಸಿದರೆ ಏನು ಪ್ರಯೋಜನ? ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಿದರೆ ದೇವರು ಕೂಡ ಮೆಚ್ಚುತ್ತಾನೆ. ಒಬ್ಬ ವ್ಯಕ್ತಿಯು ತನ್ನ ಕಷ್ಟವನ್ನು ತಿಳಿಯುವುದರ ಜತೆಗೆ ಬೇರೆಯವರ ಕಷ್ಟವನ್ನು ಅರಿತು ಅದಕ್ಕೆ ತಕ್ಕಂತೆ ಸ್ಪಂದಿಸಿದರೆ ಅದು ಮನುಷ್ಯತ್ವ ಎನಿಸಿಕೊಳ್ಳುತ್ತದೆ. ಮನುಷ್ಯನಾದವರು ಒಬ್ಬರಿಗೊಬ್ಬರು ಪರಸ್ಪರ ಸಹಾಯ ಮಾಡುತ್ತಾ ಸಹಬಾಳ್ವೆಯಿಂದ ಬಾಳಬೇಕು. ಸ್ನೇಹ ಸೌಹಾರ್ದದಿಂದ ಜೀವಿಸುವುದೇ ಮನುಷ್ಯನ ಶ್ರೇಷ್ಠ ಗುಣವೆನಿಸಿಕೊಳ್ಳುತ್ತದೆ. ನಿಜವಾದ ಸುಖಜೀವನ ಇದೇ ಅಲ್ಲವೇ?…
ಚಂದ್ರಿಕಾ ಆರ್. ಬಾಯಿರಿ, ಬಾರಕೂರು