Advertisement

ಹುಲಿಯಮ್ಮ ದೇಗುಲ ಪ್ರವೇಶ ನಿರ್ಬಂಧ

09:47 PM Sep 21, 2019 | Lakshmi GovindaRaju |

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿನ ಮಂಗಲ ಗ್ರಾಮದ ಸಮೀಪದಲ್ಲಿರುವ ಹುಲಿಯಮ್ಮನ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ಅರಣ್ಯ ಇಲಾಖೆ ನಿಷೇಧಿಸಿದೆ. ಹುಲಿ ಸಂರಕ್ಷಿತ ಪ್ರದೇಶವಾದ ಬಂಡೀಪುರದ ಮಂಗಲ ಗ್ರಾಮದ ಸಮೀಪದಲ್ಲಿರುವ ಹುಲಿಯಮ್ಮ ದೇವಸ್ಥಾನ ಹಲವು ಭಕ್ತರನ್ನು ಹೊಂದಿರುವ ದೇಗುಲ.

Advertisement

ಬಂಡೀಪುರ ಹುಲಿಯೋಜನಾ ನಿರ್ದೇಶಕರ ಕಚೇರಿಯ ಪಕ್ಕದ ರಸ್ತೆಯಿಂದ ಮಂಗಲ ಗ್ರಾಮಕ್ಕೆ ಹೋಗುವಾಗ ಸಿಗುವ ಈ ದೇವಾಲಯಕ್ಕೆ ನಿಜವಾದ ಭಕ್ತರು ಬಂದು ದೇವಿಯ ದರ್ಶನ ಮಾಡಿಕೊಂಡು ಹೋಗುತ್ತಾರೆ. ಅದಕ್ಕಿಂತ ಹೆಚ್ಚಾಗಿ ಕಾಡಿನಲ್ಲಿರುವ ಈ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ದೇವಾಲಯದ ಆವರಣದಲ್ಲೇ ಬಾಡೂಟ ತಯಾರಿಸಿ, ಮದ್ಯ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ.

ಗುರುತಿನ ಚೀಟಿ ಕಡ್ಡಾಯ: ನಿಜವಾದ ಭಕ್ತರು ದೇವಿಯ ದರ್ಶನ ಪಡೆಯಲು ಬರುವವರಿಗೆ ಅರಣ್ಯ ಇಲಾಖೆ ಭಕ್ತರ ಯಾವುದಾದರೊಂದು ಗುರುತಿನ ಚೀಟಿ ತೋರಿಸುವುದು ಕಡ್ಡಾಯ. ಗುರುತಿನ ಚೀಟಿ ತೋರಿಸಿದರೆ ವ್ಯಕ್ತಿಯ ಬಗ್ಗೆ ವಿವರ ಸಿಗುತ್ತದೆ. ದೇವಾಲಯದ ಸಮೀಪದಲ್ಲಿಯೇ ಇರುವ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಈ ಗುರುತಿನ ಚೀಟಿಯನ್ನು ತೋರಿಸಿ ಭಕ್ತರ ತಂಡದೊಂದಿಗೆ ಅರಣ್ಯ ಸಿಬ್ಬಂದಿಯೊಬ್ಬರ ಭದ್ರತೆಯಲ್ಲಿ ಹೋಗಿ ದೇವಿನ ದರ್ಶನ ಪಡೆದು ವಾಪಸ್‌ ಬರಬೇಕಾಗುತ್ತದೆ.

ಹುಲಿ ಸಂಖ್ಯೆ ಹೆಚ್ಚಳ: ಇತ್ತೀಚಿಗೆ ಬಂಡೀಪುರ ಉದ್ಯಾನದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಭಕ್ತರು ಅಡುಗೆ ಮಾಡಲು ಮಾಂಸವನ್ನು ತರುವುದು. ಅದರ ವಾಸನೆಯನ್ನು ಗ್ರಹಿಸಿ ವನ್ಯ ಜೀವಿಗಳು ದಾಳಿ ಮಾಡುವುದು ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಾರ್ವಜನಿಕರ ಜೀವ ರಕ್ಷಣೆಗೋಸ್ಕರ ಅರಣ್ಯ ಇಲಾಖೆ ಈ ಕ್ರಮ ತೆಗೆದುಕೊಂಡಿದೆ.

ಮದ್ಯ ಪ್ರಿಯರ ಹಾವಳಿಗೆ ತಡೆ: ಮೊದಲೇ ಪ್ಲಾಸ್ಟಿಕ್‌ ನಿಷೇಧಿತ ಪ್ರದೇಶವಾದ ಬಂಡೀಪುರ ಉದ್ಯಾನದಲ್ಲಿನ ಹುಲಿಯಮ್ಮ ದೇವಸ್ಥಾನಕ್ಕೆ ಭಕ್ತರಂತೆ ಬರುವ ಅನೇಕರು ದೇವಾಲಯದ ಪಕ್ಕದಲ್ಲೇ ಮದ್ಯಸೇವನೆ ಮಾಡಿ, ಮಾಂಸದೂಟವನ್ನು ಸಿದ್ಧಪಡಿಸಿ ತಿಂದು ಚೂರುಗಳನ್ನು ಅಲ್ಲಿಯೇ ಬಿಟ್ಟು ಪರಿಸರವನ್ನು ಹಾಳು ಮಾಡುತ್ತಿದ್ದರು. ಇಂತಹ ಮಾಂಸದ ವಾಸನೆಯನ್ನು ಗ್ರಹಿಸುವ ಕಾಡುಪ್ರಾಣಿಗಳು ದಾಳಿ ನಡೆಸಿರುವ ಉದಾಹರಣೆಗಳು ಹೆಚ್ಚಿವೆ. ಆದ್ದರಿಂದ ಈ ದೇವಾಲಯದ ದರ್ಶನಕ್ಕೆ ಗುರುತಿನ ಚೀಟಿ ಕಡ್ಡಾಯಗೊಳಿಸಿ ಅರಣ್ಯ ಇಲಾಖೆ ಉತ್ತಮ ಕ್ರಮ ತೆಗೆದುಕೊಂಡಿದೆ.

Advertisement

ಹುಲಿಗಳ ಹಾವಳಿ: ಹುಲಿಯಮ್ಮ ದೇವಸ್ಥಾನ ಸುತ್ತಮುತ್ತಲ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿಯೇ ಹುಲಿಗಳ ಓಡಾಟ ಹೆಚ್ಚಾಗಿದೆ. ಹುಲಿಗಳ ಆವಾಸ ಸ್ಥಾನವಾಗಿರುವ ಇಲ್ಲಿ ಇತ್ತೀಚಿಗೆ ಶಿವಮಾದಯ್ಯ ಎಂಬ ರೈತ ತಮ್ಮ ಎತ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಹುಲಿ ದಾಳಿಗೆ ಸಿಲುಕಿ ಬಲಿಯಾಗಿದ್ದರು. ಒಟ್ಟಾರೆ ಹಲವು ದಿನಗಳಿಂದ ದೇವಾಲಯದ ಉತ್ತಮ ಪರಿಸರವನ್ನು ಹಾಳು ಮಾಡುತ್ತಿದ್ದವರಿಗೆ ಅರಣ್ಯ ಇಲಾಖೆ ಸರಿಯಾಗಿ ಚುರುಕು ಮುಟ್ಟಿಸಿದೆ.

ಕಾನೂನು ರೀತಿ ಕ್ರಮ: ಬಂಡೀಪುರ ಉದ್ಯಾನವನದ ವ್ಯಾಪ್ತಿಯ ಮಂಗಲ ಸಮೀಪದಲ್ಲಿರುವ ಹುಲಿಯಮ್ಮ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದ್ದೇವೆ. ದೇವಿಯ ದರ್ಶನ ಮಾಡಲೇ ಬೇಕು ಎಂಬ ಭಕ್ತರು ತಮ್ಮ ಯಾವುದಾದರೊಂದು ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ನಮ್ಮ ಸಿಬ್ಬಂದಿಯ ಭದ್ರತೆಯೊಂದಿಗೆ ದೇವಿ ದರ್ಶನ ಮಾಡಿ ವಾಪಸ್‌ ಬರಬೇಕು. ದೇವಾಲಯದ ಆವರಣದಲ್ಲಿ ಯಾವುದೇ ರೀತಿಯ ಚಟುವಟಿಕೆಯನ್ನು ಮಾಡುವಂತಿಲ್ಲ. ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹುಲಿ ಯೋಜನಾ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದ್ದಾರೆ.

ಬಂಡೀಪುರದ ಸೂಕ್ಷ್ಮ ಪರಿಸರ ವಲಯದಲ್ಲಿರುವ ದೇವಾಲಯದಲ್ಲಿ ಕುಡುಕರ ಮತ್ತು ಮಾಂಸ ಪ್ರಿಯರ ಹಾವಳಿ ಹೆಚ್ಚಾಗಿತ್ತು. ಮಾಂಸದ ತುಣುಕಿನ ವಾಸನೆಯಿಂದ ಈ ಸ್ಥಳದಲ್ಲಿ ಅನೇಕ ಕಾಡು ಪ್ರಾಣಿಗಳು ದಾಳಿ ನಡೆಸಿವೆ. ಅರಣ್ಯ ಇಲಾಖೆಯ ಕ್ರಮ ಅಭಿನಂದನಾರ್ಹ.
-ಆರ್‌.ಕೆ.ಮಧು, ವನ್ಯಜೀವಿ ಛಾಯಾಗ್ರಾಹಕ

* ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next