Advertisement

ಹುಳಿಮಾವು ದುರಂತ; ವಾರವಾದರೂ ಕ್ರಮವಿಲ್ಲ

10:39 AM Dec 04, 2019 | Team Udayavani |

ಬೆಂಗಳೂರು: ಹುಳಿಮಾವು ಕೆರೆಯ ಏರಿ ಒಡೆದು ಅನಾಹುತ ಸೃಷ್ಟಿಯಾಗಿ ಒಂದು ವಾರವಾದರೂ, ಇಲ್ಲಿಯವರೆಗೆ ಯಾವುದೇ ಇಲಾಖೆಯ ಒಬ್ಬ ಅಧಿಕಾರಿಯ ಮೇಲೂ ಕ್ರಮವಾಗಿಲ್ಲ. ಸಾರ್ವಜನಿಕರ ಆಕ್ರೋಶವನ್ನು ಕಡಿಮೆ ಮಾಡುವು ದಕ್ಕೆ ಪೊಲೀಸ್‌ ಇಲಾಖೆಯು ಜಲಮಂಡಳಿಯ ಎಂಜಿನಿಯರ್‌ ಕಾರ್ತಿಕ್‌ ಹಾಗೂ ಬಿಬಿಎಂಪಿಯ ಕೆರೆವಿಭಾಗದ ಎಂಜಿನಿಯರ್‌ ಶಿಲ್ಪಾ ಅವರನ್ನು ವಿಚಾರಣೆ ನಡೆಸಿತ್ತು. ಆದರೆ, ಯಾರ ಮೇಲೂ ಕ್ರಮತೆಗೆದುಕೊಂಡಿಲ್ಲ.

Advertisement

.24ರಂದು ಹುಳಿಮಾವು ಕೆರೆಯ ಏರಿ ಒಡೆದು ಅಂದಾಜು 29 ಕೋಟಿ ರೂ. ಮೊತ್ತದ ಭಾರೀ ನಷ್ಟವುಂಟಾಗಿತ್ತು. ಅಷ್ಟೇ ಅಲ್ಲ, 800ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಆಸ್ತಿನಷ್ಟವುಂಟಾಗಿತ್ತು. 40ಕ್ಕೂ ಹೆಚ್ಚು ಕಾರ್‌ ಹಾಗೂ 180 ಬೈಕ್‌ಗಳು ಹಾಳಾಗಿದ್ದು, ಇಂದಿಗೂ ಈ ನಿಟ್ಟಿನಲ್ಲಿ ಪರಿಹಾರದ ಬಗ್ಗೆ ಚರ್ಚೆಯಾಗಿಲ್ಲ. ತನಿಖೆ ನಡೆಯುತ್ತಿದೆ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದ ರಾಜಕೀಯ ಪಕ್ಷದ ನಾಯಕರೂ, ಈ ವಿಚಾರದಲ್ಲಿ ಮೌನಕ್ಕೆ ಜಾರಿದ್ದಾರೆ.

ಆಂತರಿಕ ತನಿಖೆಯೂ ಇಲ್ಲ: ಪ್ರಕರಣದ ತನಿಖೆ ಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಲೇ ಅವಘಡ ನಡೆದಿದೆ. ಕೆರೆಯ ಏರಿಯನ್ನು ಒಡೆಯುವ ಸಂದರ್ಭದಲ್ಲಿ ಎಂಜಿನಿಯರ್‌ ಅಥವಾ ತಜ್ಞರು ಆ ಸ್ಥಳದಲ್ಲಿ ಹಾಜರಿದ್ದಿದ್ದರೆ ಅವಘಡ ತಪ್ಪಿಸಬಹುದಿತ್ತು ಎಂದು ತನಿಖೆ ನಡೆಸಿದ ಪೊಲೀಸ್‌ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ಇದಕ್ಕೆ ಬಿಬಿಎಂಪಿಯ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಅವರೂ ಸಮ್ಮತಿ ಸೂಚಿಸಿದ್ದರು. ಪೊಲೀಸ್‌ ಇಲಾಖೆ ಪ್ರಾಥಮಿಕ ತನಿಖಾ ವರದಿ ನೀಡಿದ ಮೇಲೂ ಬಿಬಿಎಂಪಿ ಮತ್ತು ಜಲ ಮಂಡಳಿ ತಮ್ಮ ಅಧಿಕಾರಿಗಳ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇತ್ತೀಚೆಗೆ ಸಭೆ ನಡೆಸಿದ್ದ ವಿಧಾನ ಮಂಡಲದ ಸ್ಥಳೀಯ ಸಂಸ್ಥೆಗಳ ಹಾಗೂ ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿ ಅಧ್ಯಕ್ಷ ಅರಗ ಜ್ಞಾನೇಂದ್ರ ಅವರು ಅನಾಹುತಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ಆಂತರಿಕ ತನಿಖೆ ನಡೆಸಿ, ಪೊಲೀಸ್‌ ವರದಿ ಬರುವವರೆಗೆ ವಿಳಂಬ ಮಾಡಬೇಡಿ ಇಂತಹ ಅಧಿಕಾರಿಗಳ ಅವಶ್ಯಕತೆ ಇಲ್ಲ. ಉಂಟಾಗಿರುವ ನಷ್ಟವನ್ನು ಅಧಿಕಾರಿಗಳಿಂದ ಪಡೆಯಲು ಸಾಧ್ಯವಿಲ್ಲ.

ಕನಿಷ್ಠ ಅವರ ಮೇಲೆ ಕ್ರಮವಾದರೂ ತೆಗೆದುಕೊಳ್ಳಿ ಎಂದಿದ್ದರು. ಅಲ್ಲದೆ, ಮುಂದಿನ ವಾರ ಸಮಿತಿ ಸದ ಸ್ಯರು ಹುಳಿಮಾವು ಕೆರೆ ಪ್ರದೇಶಕ್ಕೆ ಭೇಟಿ ನೀಡಲಿದ್ದೇವೆ. ಅಷ್ಟರ ಒಳಗಾಗಿ ಎಲ್ಲವೂ ಸರಿಯಾಗಬೇಕು ಎಂದು ಆದೇಶಿಸಿದ್ದರು. ಆದರೆ, ಬಿಬಿಎಂಪಿಯ ಅಧಿಕಾರಿಗಳು ಇದಕ್ಕೆ ಕ್ಯಾರೇ ಎಂದಿಲ್ಲ.

ಭವಿಷ್ಯದ ಬಗ್ಗೆ ಚಿಂತಿಸದ ಇಲಾಖೆಗಳು: ಪದೇ ಪದೆ ಕೆರೆಗಳಿಂದ ಅನಾಹುತ ಸಂಭವಿಸುತ್ತಲೇ ಇದ್ದರೂ, ಇದನ್ನು ತಡೆಯುವ ನಿಟ್ಟಿನಲ್ಲಿ ಬಿಬಿಎಂಪಿ, ಬಿಡಿಎ ಹಾಗೂ ಜಲ ಮಂಡಳಿ ಯಾವುದೇ ಮುಂಜಾಗ್ರತಾ ಕ್ರಮವನ್ನೂ ತೆಗೆದುಕೊಂಡಿಲ್ಲ. ಉಳಿದ ಕೆರೆಗಳ ಬಗ್ಗೆ ಅಧ್ಯಯನ ಮಾಡುವುದು ಅಥವಾ ಭವಿಷ್ಯದಲ್ಲಿ ಈ ರೀತಿ ಅವಘಡ ಸಂಭವಿಸಿದರೆ, ಅದನ್ನು ತಡೆಯು ವುದು ಹೇಗೆ ಎನ್ನುವ ಬಗ್ಗೆಯೂ ಚರ್ಚೆ ನಡೆದಿಲ್ಲ. ಕೆರೆಸಂರಕ್ಷಣೆ ಮತ್ತು ಅಭಿವೃದ್ಧಿಗೆ ತಜ್ಞರ ತಂಡವಿರಬೇಕು, ಅವಘಡಗಳಿಂದ ಬುದ್ಧಿ ಕಲಿಯಬೇಕು ಎಂದು ಪರಿಸರವಾದಿಗಳು ಹಾಗೂ ವಿಜ್ಞಾನಿಗಳು ಬಿಬಿಎಂಪಿ ಯನ್ನು ಎಚ್ಚರಿಸುತ್ತಲೇ ಇದ್ದರೂ, ಬಿಬಿಎಂಪಿಯ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ.

Advertisement

 

-ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next