Advertisement
ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳನ್ನು ಬೆಸೆಯುವ ಬಾಳೆಬರೆ ಘಾಟಿಯು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ 8 ಕಿ.ಮೀ. ಹಾಗೂ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ 6.5 ಕಿ.ಮೀ. ಉದ್ದವಿದೆ. ಒಟ್ಟಾರೆ ಇಡೀ ಹುಲಿಕಲ್ ಚೆಕ್‌ಪೋಸ್ಟ್‌ನಿಂದ ಹೊಸಂಗಡಿ ಘಾಟಿಯ ಬುಡದವರೆಗೆ 14.5 ಕಿ.ಮೀ. ದೂರವಿದೆ. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ 8 ಕಿ.ಮೀ. ರಸ್ತೆಯು ಈಗಾಗಲೇ ಸಂಪೂರ್ಣ ಕಾಂಕ್ರೀಟಿಕರಣಗೊಂಡಿದೆ. ಉಡುಪಿ ಜಿಲ್ಲೆಯ 6.5 ಕಿ.ಮೀ. ರಸ್ತೆಯ ಪೈಕಿ 2 ಕಿ.ಮೀ. ಈಗಾಗಲೇ ಕಾಂಕ್ರೀಟಿಕರಣಗೊಂಡಿದೆ.
ಶಿರಾಡಿ, ಚಾರ್ಮಾಡಿ ಘಾಟಿಗಳಂತೆಯೇ ಅತ್ಯಂತ ಹೆಚ್ಚಿನ ವಾಹನಗಳ ಒತ್ತಡವಿರುವ ಬಾಳೆಬರೆ ಘಾಟಿಯು ಹಲವು ಕಡಿದಾದ ತಿರುವು, ಒಂದು ಹೇರ್ ಪಿನ್ ಮಾದರಿ ಅಪಾಯಕಾರಿ ತಿರುವನ್ನು ಹೊಂದಿದೆ. ಆಗಾಗ ಅಪಘಾತ, ಮಳೆಗಾಲದಲ್ಲಿ ತಡೆಗೋಡೆ ಕುಸಿತ ಸಾಮಾನ್ಯ. ಮಂಗಳೂರು, ಉಡುಪಿ, ಕುಂದಾಪುರ ಭಾಗದಿಂದ ಬೆಂಗಳೂರು, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಹೈದರಾಬಾದ್ ಮೊದಲಾದೆಡೆಗೆ ಇದೇ ಘಾಟಿ ಮೂಲಕ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಶಿರಾಡಿ, ಚಾರ್ಮಾಡಿ ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡರೆ ಈ ಘಾಟಿಯೇ ಕರಾವಳಿಯಿಂದ ರಾಜಧಾನಿಗೆ ಪ್ರಮುಖ ಸಂಪರ್ಕ ಸೇತುವಾಗಿದೆ. 2020ರ ವಾಹನ ಗಣತಿ ಪ್ರಕಾರ ಈ ಘಾಟಿಯಲ್ಲಿ ದಿನಕ್ಕೆ ಸರಾಸರಿ 4,935 ವಾಹನಗಳು ಸಂಚರಿಸುತ್ತವೆ. ಪ್ರಸ್ತುತ ಲೋಕೋಪ ಯೋಗಿ ಇಲಾಖೆ ಯಿಂದ 3 ಕೋ.ರೂ. ಮಂಜೂರಾಗಿದ್ದು, ಅದರಡಿ 870 ಮೀ. ಕಾಂಕ್ರೀಟಿಕರಣ, 7 ಮೀ. ವಿಸ್ತರಣೆ, ಚರಂಡಿ, ಕುಸಿಯುವ ಭೀತಿ ಇರುವಲ್ಲಿ ರಕ್ಷಣ ಗೋಡೆಗಳ ನಿರ್ಮಾಣವಾಗಲಿದೆ. ಇನ್ನು ಶಿವಮೊಗ್ಗ ವ್ಯಾಪ್ತಿ ಯಲ್ಲಿ 10 ಕೋ.ರೂ. ಮಂಜೂರಾಗಿದ್ದು ವಿಸ್ತರಣೆ, ತಡೆಗೋಡೆ ಸಹಿತ ಇನ್ನಿತರ ಕಾಮಗಾರಿ ನಡೆಯಲಿದೆ. ಘಾಟಿಯುದ್ದಕ್ಕೂ ಮರು ಡಾಮರೀಕರಣ ಕಾಮಗಾರಿ ನಿರ್ವಹಣ ವೆಚ್ಚದಲ್ಲಿ ಆಗಲಿದೆ. ಬಾಕಿ ಉಳಿದ 3.5 ಕಿ.ಮೀ. ರಸ್ತೆ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ದುರ್ಗಾದಾಸ್,
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಕುಂದಾಪುರ
Related Articles
Advertisement